
ಬೆಂಗಳೂರು, ಡಿಸೆಂಬರ್ 29: ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ (Weather Forecast) ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ ಇರಲಿದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ವರ್ಷಾಂತ್ಯದ ವರೆಗೂ ರಾಜ್ಯದಲ್ಲಿ ಒಣ ಹವೆಯೇ ಇರಲಿದ್ದು, ಹೊಸ ವರ್ಷಕ್ಕೆ ವರುಣಾರ್ಭಟವಿರಬಹುದೆಂದು ಇಲಾಖೆ ತಿಳಿಸಿದೆ.
ಇಂದಿನಿಂದ ಮೂರು ದಿನ ರಾಜ್ಯದಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ತಿಳಿಸಿದ್ದು, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದು ಎಂದಿನಂತೆ ಚಳಿಯ ಜೊತೆಗೆ ಮಂಜು ಮುಸುಕಿದ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ. ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 15°C ಇದ್ದು, ಗರಿಷ್ಠ 28°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.