Bengaluru: ಬೆಂಗಳೂರಿನಲ್ಲಿ ರಾತ್ರೋರಾತ್ರಿ ಬಸ್ ನಿಲ್ದಾಣವೇ ಮಾಯ!
ಬೆಂಗಳೂರಿನಲ್ಲಿ ರಾತ್ರೋರಾತ್ರಿ ಬಸ್ ನಿಲ್ದಾಣವೇ ಕಣ್ಮರೆಯಾಗಿದೆ. 1990 ರಿಂದ ಬಳಕೆಯಲ್ಲಿದ್ದ ಮಾರ್ಚ್ 12 ರಂದು ಇದ್ದ ಬಸ್ ನಿಲ್ದಾಣ ರಾತ್ರೋರಾತ್ರಿ ಏಕಾಏಕಿ ಮಾಯಯಾಗಿದೆ.
ಬೆಂಗಳೂರು: ನಗರದಲ್ಲಿ ರಾತ್ರೋರಾತ್ರಿ ಬಸ್ ನಿಲ್ದಾಣವೇ ಕಣ್ಮರೆಯಾಗಿದೆ. 1990 ರಿಂದ ಬಳಕೆಯಲ್ಲಿದ್ದ ಮಾರ್ಚ್ 12 ರಂದು ಇದ್ದ ಬಸ್ ನಿಲ್ದಾಣ (bus stop) ರಾತ್ರೋರಾತ್ರಿ ಏಕಾಏಕಿ ಮಾಯಯಾಗಿದೆ. ಬೆಂಗಳೂರಿನ ಕಲ್ಯಾಣನಗರದ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಇದ್ದ ಬಸ್ ನಿಲ್ದಾಣ ನಾಪತ್ತೆಯಾಗಿದೆ. ವಾಣಿಜ್ಯ ಕಟ್ಟಡದ ಎದುರಿಗೆ ಇದ್ದ ಕಾರಣ ಬಸ್ ನಿಲ್ದಾಣ ಎತ್ತಂಗಡಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 33 ವರ್ಷಗಳಿಂದ ಪ್ರಯಾಣಿಕರಿಗೆ ಮಳೆ, ಬಿಸಿಲಿನಿಂದ ರಕ್ಷಣೆ ನೀಡುತ್ತಿದ್ದ ಬಸ್ ನಿಲ್ದಾಣ ಸದ್ಯ ಕಣ್ಮರೆ ಆಗಿದೆ. ಬಿಎಂಟಿಸಿ ಹಾಗೂ ಬಿಬಿಎಂಪಿಯಿಂದ ಅನುಮತಿ ಪಡೆದು ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. 1990ರಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಅನುಮತಿ ಪಡೆದು ಶೆಲ್ಟರ್ ನಿರ್ಮಿಸಲಾಗಿತ್ತು. ಸದ್ಯ ಬಸ್ ಶೆಲ್ಟರ್ ಕಣ್ಮರೆ ಆದ ಹಿನ್ನೆಲೆ ಕಲ್ಯಾಣನಗರದ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಬಾಣಸವಾಡಿ ಪೊಲೀಸ್ ಠಾಣೆ, ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ಕ್ಷೇತ್ರದ ಸ್ಥಳೀಯ ಶಾಸಕರಿಗೆ ದೂರು ನೀಡಲಾಗಿದೆ. ತೆರವಾದ ಬಸ್ ನಿಲ್ದಾಣವನ್ನ ಕೂಡಲೇ ಮರು ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದ್ದಾರೆ.
ವಾಣಿಜ್ಯ ಕಟ್ಟಡ ನಿರ್ಮಾಣ ಹಿನ್ನೆಲೆ ಬಸ್ ನಿಲ್ದಾಣ ಎತ್ತಂಗಡಿ
ಕಲ್ಯಾಣ ನಗರದ ಎಚ್‌ಆರ್‌ಬಿಆರ್ ಲೇಔಟ್ನ ಮೊದಲನೇ ಬ್ಲಾಕ್, 7ನೇ ಮುಖ್ಯರಸ್ತೆಯ 4ನೇ ಎ ಕ್ರಾಸ್ನಲ್ಲಿ ಈ ಬಸ್ ನಿಲ್ದಾಣವಿತ್ತು. ಇಲ್ಲಿನ ಸಾರ್ವಜನಿಕರ ಪ್ರಕಾರ 1990ರಿಂದ ಬಸ್ ನಿಲ್ದಾಣ ಬಳಕೆ ಆಗುತ್ತಿತ್ತು. ವಾಣಿಜ್ಯ ಕಟ್ಟಡ ಒಂದು ನಿರ್ಮಿಸಲಾಗುತ್ತಿದ್ದು, ಹಾಗಾಗಿ ಎದುರಿಗೆ ಇದ್ದ ಬಸ್ ನಿಲ್ದಾಣವನ್ನು ಎತ್ತಂಗಡಿ ಮಾಡಲಾಗಿದೆ ಎಂದು ಆರೋಪಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ಕೆಎಸ್ಆರ್ಟಿಸಿ ಇಂಟರ್ಸಿಟಿ ಎಸಿ ಇವಿ ಪವರ್ ಪ್ಲಸ್ ಬಸ್ಗಳಿಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ
ಕಳೆದ 33 ವರ್ಷಗಳಿಂದ ಈ ಬಸ್ ನಿಲ್ದಾಣ ಇದ್ದು, ಮಳೆ, ಬಿಸಿಲಿನಿಂದ ಜನರಿಗೆ ರಕ್ಷಣೆ ನೀಡಿತ್ತು. ಆದರೆ ಈಗ ರಾತ್ರೋರಾತ್ರಿ ಈ ಬಸ್ ನಿಲ್ದಾಣ ತೆರವು ಮಾಡಲಾಗಿದೆ ಎಂದು ಇಲ್ಲಿನ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಬಸ್ ನಿಲ್ದಾಣಗಳಿವೆ. ರಸ್ತೆ, ಮೆಟ್ರೋ ಕಾಮಗಾರಿ ನಡೆಯುವಾಗ ತಾತ್ಕಾಲಿಕವಾಗಿ ಬಸ್ ನಿಲ್ದಾಣಗಳನ್ನು ಸ್ಥಳಾಂತರ ಮಾಡಲಾಗುತ್ತದೆ. ಅದೇ ರೀತಿಯಾಗಿ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ತೆರವು ಮಾಡಲಾಗಿದೆ. ಈ ಕುರಿತಾಗಿ ಪರಿಶೀಲನೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ಸಂಚಾರ ಆರಂಭ
ಮಾ.21ರಿಂದ ಚಿಕ್ಕಬಳ್ಳಾಪುರಕ್ಕೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯ ವೋಲ್ವೋ ಎರಡು ಹವಾನಿಯಂತ್ರಿತ ಬಸ್‌ಗಳು ಪ್ರಾಯೋಗಿಕವಾಗಿ ಕಾರ್ಯಾರಂಭಿಸಿದೆ. ಸಾಕಷ್ಟು ಹಗ್ಗ ಜಗ್ಗಾಟದ ನಂತರ ಚಿಕ್ಕಬಳ್ಳಾಪುರ ಜನರ ಬಹು ದಿನಗಳ ಕೂಗಿಗೆ ಜಯ ಸಿಕ್ಕಿದೆ. ಮಾ.17 ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ದ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಅವರು ಬಿಎಂಟಿಸಿ ಸಂಚಾರಕ್ಕೆ ಒಪ್ಪಿಗೆ ಸೂಚಿಸಿದ್ದರು.
ಈ ಹಿನ್ನಲೆ ನಿನ್ನೆಯಿಂದ ಬಿಎಂಟಿಸಿ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೆಬ್ಬಾಳ, ಯಲಹಂಕ ಮತ್ತು ರಾಣಿ ಸರ್ಕಲ್/ದೇವನಹಳ್ಳಿ ಮೂಲಕ ಚಿಕ್ಕಬಳ್ಳಾಪುರಕ್ಕೆ ಹವಾನಿಯಂತ್ರಿತ ವೋಲ್ವೋ ಬಸ್‌ಗಳು ಸಂಚರಿಸಲಿವೆ. ಪ್ರತಿ ಬಸ್ ದಿನಕ್ಕೆ ಮೂರು ಟ್ರಿಪ್ ಮಾಡಲಿವೆ.
ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಿಂದ ಬಸ್ ಹೊರಡಲಿರುವ ಸಮಯ
ಬೆಳಿಗ್ಗೆ 8.10, 8.20, ಮಧ್ಯಾಹ್ನ 12.35, 1.05, ಸಂಜೆ 7.15, 7.35 ಕ್ಕೆ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಹೊರಡಲಿದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಬಸ್ ಹೊರಡಲಿರುವ ಸಮಯ
ಬೆಳಿಗ್ಗೆ 10.25, 11.00, ಸಂಜೆ 5.30, 5.45, ರಾತ್ರಿ 9.15, 9. 35 ಕ್ಕೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಸಂಚರಿಸಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:37 pm, Wed, 22 March 23