ಕೆಎಸ್ಆರ್ಟಿಸಿ ಇಂಟರ್ಸಿಟಿ ಎಸಿ ಇವಿ ಪವರ್ ಪ್ಲಸ್ ಬಸ್ಗಳಿಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ
ಬೆಂಗಳೂರಿನಿಂದ 6 ಜಿಲ್ಲೆಗಳಿಗೆ ಸಂಚರಿಸಲಿರುವ ಇವಿ ಪವರ್ ಪ್ಲಸ್ ಬಸ್‌ಗೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ಸಿಎಂ ಬಸವರಾಜ ಬೊಮ್ಮಾಯಿ ಇಂದು (ಮಾ. 20) ಚಾಲನೆ ನೀಡಿದರು.
ಬೆಂಗಳೂರು: ಬೆಂಗಳೂರಿನಿಂದ 6 ಜಿಲ್ಲೆಗಳಿಗೆ ಸಂಚರಿಸಲಿರುವ ಇವಿ ಪವರ್ ಪ್ಲಸ್ ಬಸ್‌ಗೆ ( AC EV Power Plus buses) ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ಸಿಎಂ ಬಸವರಾಜ ಬೊಮ್ಮಾಯಿ ಇಂದು (ಮಾ. 20) ಚಾಲನೆ ನೀಡಿದರು. ಕೆಎಸ್ಆರ್ಟಿಸಿ ಇಂಟರ್ಸಿಟಿ ಎಸಿ ಇವಿ ಪವರ್ ಪ್ಲಸ್ ಬಸ್ ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಸಂಚರಿಸಲಿವೆ. ಒಮ್ಮೆ ಚಾರ್ಜ್ ಮಾಡಿದರೆ 300 ಕಿಲೋಮೀಟರ್ ಸಂಚರಿಸಲಿವೆ. ಮೇಘಾ ಇಂಜಿನಿಯರಿಂಗ್ ಕಂಪನಿಯ ಸೋದರ ಸಂಸ್ಥೆ ಒಲೆಕ್ಟ್ರಾ ಅಡಿಯಲ್ಲಿ ತಯಾರಿಸಲಾದ ಪವರ್ ಪ್ಲಸ್ ಎಲೆಕ್ಟ್ರಾನಿಕ್ ಬಸ್‌ಗಳು ಕರ್ನಾಟಕದಲ್ಲಿ ಕಮಾಲ್ ಮಾಡಲಿವೆ. ಫೆಬ್ರವರಿಯಿಂದ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚಾರ ಮಾಡಲಿದ್ದು, ಅತಿ ಶೀಘ್ರವೇ ಇನ್ನೂ 50 ಎಲೆಕ್ಟ್ರಾನಿಕ್ ಬಸ್‌ಗೆ ಹಸಿರು ನಿಶಾನೆ ತೋರಲಿದ್ದಾರೆ.
ಇವಿ ಪವರ್ ಪ್ಲಸ್ ಬಸ್ನ ವಿಶೇಷತೆಗಳು
12 ಮೀಟರ್ ಉದ್ದವಿರುವ ಬಸ್ ಇದಾಗಿದೆ. ಸುಧಾರಿತ Li-on Phosphate battery ಹೊಂದಿರುವ ಇದು 200 ಗಂಟೆಗಳಲ್ಲೇ ಫಾಸ್ಟ್ ಚಾರ್ಜ್ ಮಾಡಬಹುದಾಗಿದೆ. ಚಾಲಕರು ನಿರ್ವಾಹಕರು ಸೇರಿದಂತೆ 45 ಆಸನಗಳನ್ನ ಹೊಂದಿದೆ. ಬಸ್ನಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಅಗ್ನಿಶಾಮಕ ಸಾಧನ, ಎಮರ್ಜೆನ್ಸಿ ಬಟನ್, ಪ್ರಥಮ ಚಿಕಿತ್ಸಾ ಕಿಟ್, ಗ್ಲಾಸ್ ಹ್ಯಾಮರ್ ಮುಂತಾದ ಸುರಕ್ಷಿತ ವೈಶಿಷ್ಟ್ಯಗಳನ್ನ ಅಳವಡಿಸಲಾಗಿದೆ. ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್-2 ಯೋಜನೆಯಡಿಯಲ್ಲಿ 50 ಇವಿ ಬಸ್‌ಗಳು ಸಂಚರಿಸಲಿವೆ.
ಇದನ್ನೂ ಓದಿ: ಶೀಘ್ರದಲ್ಲೇ ರಾಜ್ಯದ 5 ನಗರಗಳಿಗೆ ಇ-ಬಸ್ ಸಂಪರ್ಕ, ಯಾವ್ಯಾವ ಊರುಗಳು, ಈ ಸ್ಟೋರಿ ಓದಿ
ಹೊಸ ಬೊಲೆರೋಗಳ ಲೋಕಾರ್ಪಣೆ
ಆರಂಭಿಕವಾಗಿ ಇಂದು 35 ಬಸ್ಗಳಿಗೆ ಮತ್ತು ಇದರ ಜೊತೆಗೆ 68 ಹೊಸ ಬೊಲೆರೋ ವಾಹನಗಳಿಗೂ ಸಿಎಂ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಸಾರಿಗೆ ಇಲಾಖೆಯ ಎನ್ಫೋರ್ಸ್ಮೆಂಟ್ ಉಪಯೋಗಕ್ಕಾಗಿ ಹೊಸ ಬೊಲೆರೋಗಳ ಲೋಕಾರ್ಪಣೆ ಮಾಡಲಿದ್ದಾರೆ. ಮೋಟಾರು ವಾಹನ ನಿರೀಕ್ಷಕರುಗಳಿಗೆ ತೀವ್ರ ಹಾಗೂ ಚುರುಕಾಗಿ ಕೆಲಸ ನಿರ್ವಹಿಸಲು ಹೊಸ ಬೊಲೆರೋ ವಾಹನ ನೆರವಾಗಲಿದೆ.
ಬೆಂಗಳೂರು-ಮೈಸೂರು ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್
2023ರ ಜನವರಿ 16 ರಿಂದ ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್‌ಗಳು ಬೆಂಗಳೂರು-ಮೈಸೂರು ಸಂಚಾರ ಪ್ರಾರಂಭಿಸಿದ್ದವು. ಇ-ಬಸ್‌ಗಳು ಆರಾಮದಾಯಕವಾದ ಆಸನ, ದೂರದರ್ಶನ, ಪ್ರೀಮಿಯಂ ಸೀಟ್‌ಗಳು, ಪ್ರತಿಯೊಂದು ಸೀಟ್ಗು ಚಾರ್ಜಿಂಗ್ ಸಾಕೆಟ್, ಎಸಿ ವೆಂಟ್‌ಗಳು, ಓದುವ ದೀಪಗಳು ಇನ್ನೂ ಅನೇಕ ಸೌಲಭ್ಯಗಳನ್ನು ಒಳಗೊಂಡಿದೆ. ಎಲೆಕ್ಟ್ರಿಕ್ ಬಸ್‌ಗಳು 2022 ಡಿಸೆಂಬರ್ 31 ರಂದು ರಾಜ್ಯಕ್ಕೆ ಬಂದಿದ್ದು, ಈಗಾಗಲೆ ಟ್ರಯಲ್ ರೈಡ್ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಮೊದಲ ಇ-ಬಸ್ ಜನವರಿ 16ರಂದು ಬೆಂಗಳೂರಿನಿಂದ ಹೊರಟು ಮೈಸೂರು ತಲುಪಿತ್ತು. ಬೆಂಗಳೂರಿಂದ ಮೈಸೂರಿಗೆ ಹೊರಡುವ ಎಲೆಕ್ಟ್ರಿಕ್ ಬಸ್ ತಡೆರಹಿತವಾಗಿದ್ದು, ಬಸ್‌ಗೆ ಪ್ರಿಮಿಯಂ ಸರ್ವಿಸ್ ಪಾಸ್ ಹೊಂದಿದೆ.
ಇದನ್ನೂ ಓದಿ: KSRTC EV ಪವರ್ ಪ್ಲಸ್ ಬಸ್‌ಗೆ ಹಸಿರು ನಿಶಾನೆ ತೋರಿದ ಸಚಿವ ಶ್ರೀರಾಮುಲು; ಇಲ್ಲಿದೆ ಬಸ್ನ ವಿಶೇಷತೆಗಳು
ಎಲೆಕ್ಟ್ರಿಕ್ ಬಸ್ಗಳನ್ನು ಒಂದು ಸಾರಿ ಚಾರ್ಜ್ ಮಾಡಿದರೆ 300ಕೀಮಿ ಸಂಚರಿಸುತ್ತವೆ. ಈಗಾಗಲೆ ಬಸ್ಗಳಿಗಾಗಿ ಮೈಸೂರು ಮತ್ತು ಬೆಂಗಳೂರಲ್ಲಿ ಚಾರ್ಜಿಂಗ್ ಪಾಯಿಂಟ್ಗಳನ್ನು ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಮಡಿಕೇರಿ, ವಿರಾಜಪೇಟ, ದಾವಣಗೇರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಬಸ್ ನಿಲ್ದಾಣಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಇರಿಸಲಾಗುತ್ತದೆ.
ಎಲೆಕ್ಟ್ರಿಕ್ ಬಸ್ಗಳ ಕಾರ್ಯನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲಾಗಿದ್ದು, ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (GCC) ನಿರ್ವಹಿಸುತ್ತಿದೆ. ಈ ನಿರ್ವಹಣೆಗೆ ಕೆಎಸ್ಆರ್ಟಿಸಿ ಕೂಡ ಹಣ ನೀಡಲು ಮುಂದಾಗಿದ್ದು, ಕಾರ್ಯಾಚರಣೆಯ ವೆಚ್ಚವಾಗಿ ಕಿಮೀಗೆ 55 ರೂಪಾಯಿಗಳನ್ನು ಪಾವತಿಸುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.