
ಬೆಂಗಳೂರು, ನವೆಂಬರ್ 07: ಬೊಮ್ಮನಹಳ್ಳಿ ಮುಸ್ಲಿಂ ಯೂತ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸುತ್ತಿದ್ದು, ಇಂದು (ನ.07) ಮಧ್ಯಾಹ್ನ 3 ಗಂಟೆಯಿಂದ ಮೆರವಣಿಗೆಯು ಬೊಮ್ಮನಹಳ್ಳಿ ಜಂಕ್ಷನ್‌ನಲ್ಲಿ ಸಾಗಲಿರುವ ಕಾರಣ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಬೆಂಗಳೂರು ಸಂಚಾರ ಪೊಲೀಸರು ಸೂಚಿಸಿದ್ದಾರೆ.
ಈದ್ ಮಿಲಾದ್ ಮೆರವಣಿಗೆ ಹಿನ್ನಲೆ ಹೊಸೂರು ರಸ್ತೆ ಬೊಮ್ಮನಹಳ್ಳಿ ಜಂಕ್ಷನ್, ರೂಪೇನ ಅಗ್ರಹಾರ, ಗಾರೇಭಾವಿಪಾಳ್ಯ ಜಂಕ್ಷನ್ ಮೂಲಕ ಬೆಂಗಳೂರು ನಗರದಿಂದ ಹೊರ ಹೋಗುವ ಮತ್ತು ಬೆಂಗಳೂರು ನಗರಕ್ಕೆ ಪ್ರವೇಶಿಸುವ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಮಧ್ಯಾಹ್ನ 3 ಗಂಟೆಯ ನಂತರ ಹೊಸೂರು ರಸ್ತೆ ಬೊಮ್ಮನಹಳ್ಳಿ ಜಂಕ್ಷನ್ ಮೂಲಕ ಸಂಚರಿಸುವ ಸಾರ್ವಜನಿಕರು ಬದಲಿ ಮಾರ್ಗವನ್ನು ಬಳಸಲು ಸೂಚಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ನಿಭಾಯಿಸಲು ‘ಕೋಬ್ರಾ ಬೀಟ್’! ಏನಿದು ಹೊಸ ವ್ಯವಸ್ಥೆ?
ಸಾವಿರಾರು ಜನ ಮದೀನ ನಗರದ ಮೆಕ್ಕಾ ಮಸೀದಿಯ ಬಳಿ ಸೇರಿ, ಅಲ್ಲಿಂದ 17ರಿಂದ 20 ಸ್ತಬ್ದ ಚಿತ್ರ ಒಳಗೊಂಡ ವಾಹನಗಳೊಂದಿಗೆ ಮೆರವಣಿಗೆ ಸಾಗಲಿದ್ದಾರೆ. ಮಂಗಮ್ಮನಪಾಳ್ಯ ಮುಖ್ಯರಸ್ತೆಯಿಂದ ಹೊರಟು ಹೊಸೂರು ರಸ್ತೆ ಸರ್ವಿಸ್ ರಸ್ತೆ ಮಾರ್ಗವಾಗಿ ಬಂದು ಮಂಗಮ್ಮಪಾಳ್ಯ ಬಸ್ ನಿಲ್ದಾಣದ ಬಳಿಯ ಹೊಸೂರು ಮುಖ್ಯರಸ್ತೆಯನ್ನು ಮೆರವಣಿಗೆ ತಲುಪಲಿದೆ. ನಂತರ 21ನೇ ಪಿಲ್ಲರ್ ಬಳಿ ಯೂ ಟರ್ನ್ ಪಡೆದು ಬೊಮ್ಮನಹಳ್ಳಿ ಜಂಕ್ಷನ್‌ಗೆ ತಲುಪಿ ,ಅಲ್ಲಿಂದ ಬೇಗೂರು ರಸ್ತೆಯ ಜಾಮೀಯ ಮಸೀದಿ ಹಿಂಭಾಗದ ಉರ್ದು ಶಾಲೆ ತಲುಪಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:28 am, Fri, 7 November 25