ಬೆಂಗಳೂರಿನಲ್ಲಿ ಆರ್ಟಿಒ ಭರ್ಜರಿ ಕಾರ್ಯಾಚರಣೆ, 4 ಸಾವಿರ ಖಾಸಗಿ ಬಸ್ ತಪಾಸಣೆ, 102 ಸೀಜ್: 1 ಕೋಟಿ ರೂ. ದಂಡ ವಸೂಲಿ
ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಯ ಸ್ಲೀಪರ್ ಎಸಿ ಬಸ್ ಕರ್ನೂಲು ಬಳಿ ಬೆಂಕಿ ಹತ್ತಿಕೊಂಡು 19 ಮಂದಿ ಪ್ರಯಾಣಿಕರಿಗೆ ಸಾವಿಗೀಡಗಿದ್ದರು. ಇದರಿಂದ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ ಬೆಂಗಳೂರಲ್ಲಿ ಸಾವಿರಾರು ಬಸ್ಸುಗಳನ್ನು ತಪಾಸಣೆ ಮಾಡಿ, ನೂರಾರು ಬಸ್ಸುಗಳನ್ನು ಸೀಜ್ ಮಾಡಿದೆ. ಕೋಟ್ಯಂತರ ರುಪಾಯಿ ದಂಡ ವಸೂಲಿ ಮಾಡಿದೆ.

ಬೆಂಗಳೂರು, ನವೆಂಬರ್ 7: ಅಕ್ಟೋಬರ್ 24 ರಂದು ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಕಂಪನಿಯ ಎಸಿ ಸ್ಲೀಪರ್ ಬಸ್ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡು 19 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದರು. ಈ ಹಿನ್ನೆಲೆ ಎಚ್ಚೆತ್ತುಕೊಂಡ ಸಾರಿಗೆ ಸಚಿವರು, ಸುರಕ್ಷತಾ ಕ್ರಮಗಳನ್ನು ಪಾಲಿಸದ ಎಲ್ಲಾ ಖಾಸಗಿ ಬಸ್ಸುಗಳನ್ನು (Private Buses) ತಪಾಸಣೆ ನಡೆಸಿ ವರದಿ ನೀಡುವಂತೆ ಸಾರಿಗೆ ಇಲಾಖೆಯ (Transport Department) ಆಯುಕ್ತರಿಗೆ ಖಡಕ್ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಅಪರ ಸಾರಿಗೆ ಆಯುಕ್ತ (ಪ್ರವರ್ತನ ದಕ್ಷಿಣ) ನೇತೃತ್ವದಲ್ಲಿ ಒಟ್ಟು 12 ತಂಡಗಳನ್ನು ರಚಿಸಿ ಬಸ್ಗಳ ತಪಾಸಣೆ ಕಾರ್ಯಚರಣೆ ನಡೆಸಲಾಗಿದೆ. ಪ್ರಯಾಣಿಕರ ಸುರಕ್ಷತಾ ಅಂಶಗಳಾದ ತುರ್ತು ನಿರ್ಗಮನ ವ್ಯವಸ್ಥೆ, ಬೆಂಕಿ ನಂದಿಸುವ ಸಾಧನ, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಾಗೂ ಪ್ರಯಾಣಿಕರ ವಾಹನಗಳಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಸರಕುಗಳನ್ನು ಗುರಿಯಾಗಿಸಿ ತಪಾಸಣೆ ನಡೆಸಲಾಗಿದೆ.
ಅಕ್ಟೋಬರ್ 24 ರಿಂದ ನವೆಂಬರ್ 5 ರ ವರೆಗೆ, ಅಂದರೆ 13 ದಿನಗಳಿಂದ ಸಾರಿಗೆ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿ 13 ಆರ್ಟಿಒಗಳಿಂದಲೂ ಕಾರ್ಯಾಚರಣೆ ನಡೆಯುತ್ತಿದೆ.
4,452 ಖಾಸಗಿ ಬಸ್ಸುಗಳನ್ನು ತಪಾಸಣೆ ಮಾಡಿ, 604 ಬಸ್ಸುಗಳ ಮೇಲೆ ಕೇಸ್ ದಾಖಲಿಸಲಾಗಿದೆ. 102 ಬಸ್ಸುಗಳನ್ನು ಸೀಜ್ ಮಾಡಲಾಗಿದೆ. ಈ ಬಸ್ಸುಗಳಿಂದ ಟ್ಯಾಕ್ಸ್ ಮತ್ತು ದಂಡದ ರೂಪದಲ್ಲಿ 1,09,91,284 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಇದನ್ನೂ ಓದಿ: ಕರ್ನೂಲ್ ಬಸ್ ದುರಂತ ಬೆನ್ನಲ್ಲೇ ಕರ್ನಾಟಕ ಆರ್ಟಿಒ ಭರ್ಜರಿ ಕಾರ್ಯಾಚರಣೆ: ದೇವನಹಳ್ಳಿಯಲ್ಲಿ 40ಕ್ಕೂ ಹೆಚ್ಚು ಬಸ್ ಸೀಜ್
ಒಟ್ಟಿನಲ್ಲಿ ಕರ್ನೂಲು ಘಟನೆಯಿಂದ ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಸುರಕ್ಷತಾ ಕ್ರಮಗಳನ್ನು ಪಾಲಿಸದ ಬಸ್ಗಳ ಮಾಲೀಕರಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ. ಇನ್ನಾದರೂ ಖಾಸಗಿ ಬಸ್ ಮಾಲೀಕರು ಎಚ್ಚೆತ್ತುಕೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.



