ಬೆಂಗಳೂರು, ಜುಲೈ 9: ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಶಾಲಾ ವಾಹನಗಳ 23 ಚಾಲಕರ ವಿರುದ್ಧ ಬೆಂಗಳೂರು ಟ್ರಾಫಿಕ್ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ. ಬೆಳಗ್ಗೆ 7 ರಿಂದ 9 ರವರೆಗೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 3016 ಶಾಲಾ ವಾಹನಗಳನ್ನು ತಪಾಸಣೆ ಮಾಡಲಾಗಿದ್ದು, ಮದ್ಯಪಾನ ಪರೀಕ್ಷೆಯಲ್ಲಿ 23 ಚಾಲಕರ ವರದಿ ಪಾಸಿಟಿವ್ ಎಂದು ಕಂಡುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಪ್ಪಿತಸ್ಥರೆಂದು ಕಂಡು ಬಂದಿರುವ ಚಾಲಕರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂಎನ್ ಅನುಚೇತ್ ತಿಳಿಸಿದ್ದಾರೆ.
ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅವರ ಚಾಲನಾ ಪರವಾನಗಿಯನ್ನು ಆಯಾ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಶೇಷ ಕಾರ್ಯಾಚರಣೆ ಸಮಯದಲ್ಲಿ, 11 ವಾಹನಗಳು ಫಿಟ್ನೆಸ್ ಪ್ರಮಾಣಪತ್ರವಿಲ್ಲದೆ ಸಂಚರಿಸುತ್ತಿರುವುದು ಕಂಡುಬಂದಿವೆ. ಇವುಗಳನ್ನು ಮುಂದಿನ ಅಗತ್ಯ ಕ್ರಮಕ್ಕಾಗಿ ಸಂಬಂಧಿಸಿದ ಆರ್ಟಿಒಗಳಿಗೆ ಹಸ್ತಾಂತರಿಸಲಾಗುವುದು. ವಿದ್ಯಾರ್ಥಿಗಳು ಮತ್ತು ಇತರ ರಸ್ತೆ ಬಳಕೆದಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಂತಹ ವಿಶೇಷ ಕಾರ್ಯಾಚರಣೆಗಳು ನಿಯಮಿತವಾಗಿ ಮುಂದುವರೆಯಲಿವೆ ಎಂದು ಅನುಚೇತ್ ಹೇಳಿದ್ದಾರೆ.
ಮದ್ಯಪಾನ ಮಾಡಿ ಶಾಲಾ ವಾಹನಗಳ ಚಾಲನೆ ಮಾಡುವ ಬಗ್ಗೆ ಚಾಲಕರ ವಿರುದ್ಧ ಪೋಷಕರಿಂದ ಆಕ್ರೋಶ ವ್ಯಕ್ತವಾಗಿದೆ. ಕುಡದು ಚಾಲನೆ ಮಾಡುವ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಶಾಲಾ ಆಡಳಿತ ಮಂಡಳಿಗಳು ಇತಂಹ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇತಂಹ ಚಾಲಕರಿಗೆ ಶಾಲಾ ವಾಹನ ಓಡಿಸಲು ಅವಕಾಶ ನೀಡಬಾರದು ಎಂದು ಪೋಷಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕಣ್ಣುಕುಕ್ಕುವ ಎಲ್ಇಡಿ ಲೈಟ್ ವಿರುದ್ಧ ಕಾರ್ಯಾಚರಣೆ ಶುರು; ಕರ್ನಾಟಕದಾದ್ಯಂತ 1500ಕ್ಕೂ ಹೆಚ್ಚು ಪ್ರಕರಣ ದಾಖಲು
ರಸ್ತೆ ನಿಯಮ ಉಲ್ಲಂಘನೆ ವಿರುದ್ಧ ಬೆಂಗಳೂರು ಮತ್ತು ಕರ್ನಾಟಕದ ಸಂಚಾರ ಪೊಲೀಸರು ಕಳೆದ ಕೆಲವು ದಿನಗಳಿಂದ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಣ್ಣು ಕುಕ್ಕುವ ಎಲ್ಇಡಿ ಲೈಟ್ ಅಳವಡಿಕೆ, ದ್ವಿಚಕ್ರ ವಾಹನ ಸವಾರರಿಂದ ಆಗುತ್ತಿರುವ ನಿಯಮ ಉಲ್ಲಂಘನೆ, ಮದ್ಯಪಾನ ಮಾಡಿ ವಾಹನ ಚಾಲನೆ ಇತ್ಯಾದಿಗಳ ವಿರುದ್ಧ ಟ್ರಾಫಿಕ್ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ