ಬೆಂಗಳೂರು: ಸ್ಟ್ರೋಕ್ ಆಗಿ ವ್ಹೀಲ್ಚೇರ್ನಲ್ಲಿ ಜೀವನ ಸಾಗಿಸ್ತಿದ್ದ ಪತ್ನಿಯ ಕ್ರೂರವಾಗಿ ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ!
ಬಿಎಂಟಿಸಿಯ ನಿವೃತ್ತ ಚಾಲಕರೊಬ್ಬರು ಅನಾರೋಗ್ಯ ಪೀಡಿತ ಪತ್ನಿಯನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವ್ಹೀಲ್ಚೇರ್ನಲ್ಲಿ ಜೀವನ ಸಾಗಿಸುತ್ತಿದ್ದ ಪತ್ನಿ ಜತೆ ಜಗಳವಾಡಿದ ನಂತರ ಪತಿ ಕೃತ್ಯ ಎಸಗಿದ್ದು, ಸುಬ್ರಮಣ್ಯಪುರದ ಚಿಕ್ಕಗೌಡನ ಪಾಳ್ಯದಲ್ಲಿ ಘಟನೆ ನಡೆದಿದೆ.

ಬೆಂಗಳೂರು, ಡಿಸೆಂಬರ್ 4: ಸ್ಟ್ರೋಕ್ ಆಗಿ ವ್ಹೀಲ್ಚೇರ್ನಲ್ಲಿ ಜೀವನ ಸಾಗಿಸುತ್ತಿದ್ದ ಮಹಿಳೆಯನ್ನು ಕ್ರೂರವಾಗಿ ಕೊಲೆ ಮಾಡಿದ ವ್ಯಕ್ತಿಯೊಬ್ಬರು ನಂತರ ತಾವೂ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಬೆಂಗಳೂರು (Bengaluru) ದಕ್ಷಿಣ ಕ್ಷೇತ್ರದ ಸುಬ್ರಮಣ್ಯಪುರದ ಚಿಕ್ಕಗೌಡನ ಪಾಳ್ಯದಲ್ಲಿ ನಡೆದಿದೆ. ಬಿಎಂಟಿಸಿಯ ಚಾಲಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದ ವೆಂಕಟೇಶನ್ (65), ಮಂಗಳವಾರ ರಾತ್ರಿ ಪತ್ನಿ ಬೇಬಿ (65) ಅವರನ್ನು ಕೊಂದು ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೇಬಿ ಅವರಿಗೆ ಕೆಲ ತಿಂಗಳ ಹಿಂದೆ ಸ್ಟ್ರೋಕ್ ಆಗಿತ್ತು. ನಂತರ ಅವರು ವ್ಹೀಲ್ಚೇರ್ನಲ್ಲೇ ಜೀವನ ಸಾಗಿಸುತ್ತಿದ್ದರು. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಮಕ್ಕಳು ಕೆಲಸದ ನಿಮಿತ್ತ ಮನೆಯ ಹೊರಗಡೆ ಇದ್ದಾಗ ಘಟನೆ ನಡೆದಿದೆ.
ಮಕ್ಕಳು ಕೆಲಸಕ್ಕೆ ಹೋಗಿದ್ದಾಗ ದಂಪತಿ ಸಣ್ಣಪುಟ್ಟ ವಿಚಾರಕ್ಕೂ ಜಗಳವಾಡುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ನವೆಂಬರ್ 2ರ ಮಂಗಳವಾರವೂ ವೃದ್ಧ ದಂಪತಿಯ ನಡುವೆ ಜಗಳವಾಗಿದೆ. ಇದು ವಿಕೋಪಕ್ಕೆ ತಿರುಗಿದ್ದು, ಕೋಪೋದ್ರಿಕ್ತರಾದ ವೆಂಕಟೇಶನ್ ಬಟ್ಟೆ ಒಣಗಿಸುವ ವೈರ್‌ನಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಅದೇ ವೈರ್ ಬಳಸಿ ತಾನೂ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಡ್ರಗ್ ಮಾಫಿಯಾ ವಿರುದ್ಧ ಬೆಂಗಳೂರು ಪೊಲೀಸರ ಸತತ ದಾಳಿ: 11 ತಿಂಗಳಲ್ಲಿ 146 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
ಮಧ್ಯಾಹ್ನ ಸೊಸೆ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಮೃತದೇಹಗಳು ಕಾಣಿಸಿವೆ. ತಕ್ಷಣವೇ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರೆಸಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು




