ಬೆಂಗಳೂರು: ಅವಧಿ ಮುಗಿದು 13 ವರ್ಷ ಕಳೆದರೂ ಟರ್ಫ್ ಕ್ಲಬ್ (Turf club Bengaluru) ಅನ್ನು ಸ್ಥಳಾಂತರಗೊಳಿಸಿಲ್ಲ, ಭೂಮಿಗೆ ಪಡೆದುಕೊಳ್ಳುವ ಶುಲ್ಕವನ್ನ ಸರ್ಕಾರ ವಸೂಲಿ ಮಾಡಿಲ್ಲ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಕೃಷ್ಣಬೈರೇಗೌಡ (Krishna Byre Gowda) ಹೇಳಿದ್ದಾರೆ. ಕ್ಲಬ್ ಸ್ಥಳಾಂತರಿಸುವ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಸಭೆ ನಡೆಯಿತು. ಮುಕ್ತಾಯದ ಬಳಿಕ ಮಾತನಾಡಿದ ಕೃಷ್ಣ ಭೈರೇಗೌಡ, ಟರ್ಫ್ ಕ್ಲಬ್ ನ ಲೀಜ್ ಅವಧಿ ಮುಗಿದು 13 ವರ್ಷ ಆಗಿದೆ. ಹೆಚ್.ಕೆ.ಪಾಟೀಲ್ (HK Patil) ಅಧ್ಯಕ್ಷರಾದಾಗ ಸ್ಥಳಾಂತರದ ಕುರಿತು ಚರ್ಚೆ ಆಗಿತ್ತು. ಆದರೆ ಸರ್ಕಾರ ಇದಕ್ಕೆ ಕ್ರಮ ಕೈಗೊಂಡಿಲ್ಲ, ಮಾತ್ರವಲ್ಲದೆ ಈವರೆಗೆ ಭೂಮಿಗೆ ಪಡೆದುಕೊಳ್ಳುವ ಶುಲ್ಕವನ್ನ ಕೂಡ ಸರ್ಕಾರ ವಸೂಲಿ ಮಾಡಿಲ್ಲ ಎಂದು ಹೇಳಿದರು.
ಈ ಸರ್ಕಾರ ಟರ್ಫ್ ಕ್ಲಬ್ ಪರವಾಗಿ ಕೆಲಸ ಮಾಡುತ್ತಿದೆ. ರಾಜರಾರಣಿಗಳು, ಐಎಎಸ್, ಐಪಿಎಸ್, ಶ್ರೀಮಂತರಿಗೆ ಟರ್ಫ್ ಕ್ಲಬ್ ಸೀಮಿತ ಆಗಬಾರದು. ಸರ್ಕಾರ ಈವರೆಗೆ ಕ್ಲಬ್ಗೆ ನೋಟಿಸ್ ನೀಡುವ ಕೆಲಸಕ್ಕೂ ಮುಂದಾಗಿಲ್ಲ. ಬರೋಬ್ಬರಿ 80 ರಿಂದ 100 ಕೋಟಿ ರೂಪಾಯಿಯನ್ನು ಟರ್ಫ್ ಕ್ಲಬ್ ಬಾಕಿ ಇರಿಸಿದೆ. ಹೀಗಾಗಿಟರ್ಫ್ ಕ್ಲಬ್ ಅನ್ನು ಸರ್ಕಾರ ಕೂಡಲೇ ಸ್ಥಳಾಂತರ ಮಾಡಬೇಕು. ಸರ್ಕಾರ ಬೆಂಗಳೂರಿನ ಒಂದೂವರೆ ಕೋಟಿ ಜನರಿಗೆ ಉಪಯೋಗವಾಗುವ ಕೆಲಸ ಮಾಡಬೇಕು. ಆ ಜಾಗವನ್ನ ಕಬ್ಬನ್ ಪಾರ್ಕ್, ಲಾಲ್ ಬಾಗ್ ರೀತಿ ದೊಡ್ಡ ಉದ್ಯಾನವನ ಮಾಡಬೇಕು. ಕೇವಲ 200 ಜನ ಶ್ರೀಮಂತರಿಗೆ ಮಾತ್ರ ಟರ್ಫ್ ಕ್ಲಬ್ ಸೀಮಿತ ಆಗಬಾರದು ಎಂದರು.
ಟರ್ಫ್ ಕ್ಲಬ್ ಅನ್ನು ಕುಣಿಗಲ್ಗೆ ಸ್ಥಳಾಂತರ ಮಾಡಲಿ. ಕಾನೂನಿನಲ್ಲಿ ಬೆಟ್ಟಿಂಗ್ಗೆ ಅವಕಾಶ ಇದೆ. ಸುಮಾರು 60 ರಿಂದ 70 ಎಕರೆ ಇರುವ ಟರ್ಫ್ ಕ್ಲಬ್ನ ಜಾಗ ಕಬ್ಬನ್ ಪಾರ್ಕ್, ಲಾಲ್ ಬಾಗ್ ರೀತಿ ಆಗಬೇಕು. ನಾವು ಕೊಟ್ಟ ನಿರ್ದೇಶನ ತಡೆಮಾಡಿ ಜನರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ. ಸುಪ್ರೀಂ ಕೋರ್ಟ್ನಲ್ಲಿರುವ ಕೇಸನ್ನು ವಿಚಾರಣೆ ಬರುವ ಹಾಗೆ ನೋಡಿಕೊಳ್ಳಲು ಸರ್ಕಾರ ಮನಸ್ಸು ಮಾಡುತ್ತಿಲ್ಲ ಎಂದರು.
ಇದನ್ನೂ ಓದಿ: Neeraj Chopra: ಬೆಂಗಳೂರು ವಿದ್ಯಾರ್ಥಿಗಳಿಗೆ ಸರ್ಪ್ರೈಸ್ ನೀಡಿದ ಚಿನ್ನದ ಹುಡುಗ; ಮಕ್ಕಳ ಪ್ರತಿಕ್ರಿಯೆ ಹೇಗಿತ್ತು ನೋಡಿ!
ಸರ್ಕಾರ ರಾಜಕಾರಣಿಗಳು, IAS, IPS ಅಧಿಕಾರಿಗಳ ಪರ ನಿಂತಿದೆ. ಬಾಡಿಗೆ ವಸೂಲಿ ಮಾಡಬೇಕು ಅಂತ ಸುಪ್ರೀಂ ಕೋರ್ಟ್ ಹೇಳಿಲ್ಲ. ಸರ್ಕಾರವೇ ಟರ್ಫ್ ಕ್ಲಬ್ನ ಲಾಯರ್ ಆಗಿ ಕೆಲಸ ಮಾಡುತ್ತಿದೆ. ಕೂಡಲೇ ಸರ್ಕಾರ ಬಾಕಿ ಹಣ ವಸೂಲಿ ಮಾಡಬೇಕು. ಆ ಜಾಗವನ್ನ ಪ್ಲೇ ಗ್ರೌಂಡ್ ರೀತಿ ಮಾಡುವ ಕೆಲಸ ಮಾಡಬೇಕು. ಈ ಕುರಿತು ಮುಖ್ಯ ಕಾರ್ಯದರ್ಶಿಗೆ ಕೂಡಲೇ ಸೂಚನೆ ನೀಡಿದ್ದೇವೆ ಎಂದು ಟಿವಿ9ಗೆ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:44 pm, Tue, 28 March 23