
ಬೆಂಗಳೂರು, ಸೆಪ್ಟೆಂಬರ್ 13: ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಬಳಿ ಗಣಪತಿ ಮೆರವಣಿಗೆ (Ganesh idol impression) ವೇಳೆ ಟ್ರಕ್ ಹರಿದು ವಿದ್ಯಾರ್ಥಿಗಳು ಸೇರಿ 9 ಜನರು ಸಾವನ್ನಪ್ಪಿದ್ದಾರೆ. ಈ ದುರಂತ ಬೆನ್ನಲ್ಲೆ ಇತ್ತ ಬೆಂಗಳೂರಿನ ಸುಮ್ಮನಹಳ್ಳಿ ಜಂಕ್ಷನ್ ರಸ್ತೆಯಲ್ಲಿ ಆಟೋ ಮತ್ತು ಕಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕಾಮಾಕ್ಷಿ ಪಾಳ್ಯ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಆಟೋದಲ್ಲಿದ್ದ ಡಿ.ಯೇಸು, ಜೆನಿಫರ್ ಮೃತರು. ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಬ್ರೇಕ್ ಫೇಲ್ಯೂರ್ ಆಗಿ ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಕ್ಯಾಂಟರ್ ಡಿಕ್ಕಿಯಾದ ರಭಸಕ್ಕೆ ಆಟೋ ಎರಡು ತುಂಡಾಗಿದೆ. ಘಟನಾ ಸ್ಥಳಕ್ಕೆ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ದುರಂತದಲ್ಲಿ ಅದೃಷ್ಟವಶಾತ್ ಗರ್ಭಿಣಿ ಹಾಗೂ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ. ಗರ್ಭಿಣಿ ಪತ್ನಿ ಮತ್ತು 3 ವರ್ಷದ ಮಗುವನ್ನು ವಿಜಯ್ ಎಂಬುವವರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ದುರಂತ ಸಂಭವಿಸಿದೆ.
ಅಪಘಾತದಲ್ಲಿ ಜಖಂಗೊಂಡ ರಿಟ್ಜ್ ಕಾರು ಚಾಲಕ ವಿಜಯ್ ಪ್ರತಿಕ್ರಿಯಿಸಿದ್ದು, ನನ್ನ ಪತ್ನಿ ಗರ್ಭಿಣಿ, ಬ್ಲಡ್ ಚೆಕಪ್ಗಾಗಿ ಆಸ್ಪತ್ರೆಗೆ ಹೊರಟಿದ್ದೆ. ಪೂಜಾ ಕಲ್ಯಾಣ ಮಂಟಪ ರಸ್ತೆಯಿಂದ ಲಾರಿ ವೇಗವಾಗಿ ಬಂತು. ಕಣ್ಣು ಮುಂದೆಯೇ ಆಟೋಗೆ ಡಿಕ್ಕಿ ಹೊಡೆದಿದೆ. ನಂತರ ನನ್ನ ಕಾರಿಗೆ ಡಿಕ್ಕಿ ಹೊಡೆದಿದೆ. ನಾನು ಕೂಡಲೇ ಲೆಫ್ಟ್ ಸೈಡ್ಗೆ ತೆಗೆದುಕೊಂಡು ಪಾರಾದೆ. ದೇವರ ದಯೆ ಏನು ಆಗಿಲ್ಲ ಎಂದು ಹೇಳಿದ್ದಾರೆ.
ಡಿಸಿಪಿ ಅನೂಪ್ ಶೆಟ್ಟಿ ಮಾತನಾಡಿದ್ದು, 7.45 ರ ಸಮಯದಲ್ಲಿ ಘಟನೆ ನಡೆದಿದೆ. ಇಂಡಸ್ಟ್ರಿಯಲ್ ಏರಿಯಾದಿಂದ ಲಾರಿ ಬಂದಿದೆ. ಆಟೋ, ಕಾರಿಗೆ ಡಿಕ್ಕಿ ಹೊಡೆದಿದೆ. ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದರು.
ಇದನ್ನೂ ಓದಿ: ಹಾಸನ ದುರಂತಕ್ಕೂ ಮುನ್ನ ಮತ್ತೊಂದು ಅಪಘಾತ ಮಾಡಿದ್ದ ಟ್ರಕ್ ಚಾಲಕ? ಸ್ಫೋಟಕ ಮಾಹಿತಿ ಬಹಿರಂಗ
ಮೇಲ್ನೋಟಕ್ಕೆ ಡೌನ್ ಬರಬೇಕಾದರೆ ಕಂಟ್ರೋಲ್ ತಪ್ಪಿರುವ ಸಾಧ್ಯತೆ ಇದೆ. ಲಾರಿ ಡ್ರೈವರ್ ಓಡಿ ಹೋಗಿದ್ದಾನೆ. ಗೂಡ್ಸ್ ಏನಿತ್ತು ಎಂದು ಪರಿಶೀಲನೆ ಮಾಡಬೇಕಿದೆ ಎಂದಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:22 pm, Sat, 13 September 25