
ಬೆಂಗಳೂರು, ಸೆಪ್ಟೆಂಬರ್ 11: ಗ್ರೇಟರ್ ಬೆಂಗಳೂರು ಪ್ರದೇಶ (GBA) ವ್ಯಾಪ್ತಿಯಲ್ಲಿ 1200 ಚದರ ಅಡಿಯವರೆಗಿನ ನಿವೇಶನಗಳಲ್ಲಿ ನಿರ್ಮಾಣಗೊಂಡಿರುವ ಅಥವಾ ಹೊಸದಾಗಿ ನಿರ್ಮಿಸಲಿರುವ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (OC) ಮತ್ತು ಆರಂಭಿಕ ಪ್ರಮಾಣಪತ್ರ (CC) ಪಡೆಯುವ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. 1200 ಚದರ ಅಡಿಯವರೆಗಿನ ನಿವೇಶನಗಳಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ಮಾಣಗೊಂಡಿರುವ ಅಥವಾ ಇನ್ನೂ ನಿರ್ಮಿಸಲಿರುವ ಕಟ್ಟಡಗಳಿಗೆ ಈ ವಿನಾಯಿತಿ ಅನ್ವಯವಾಗಲಿದೆ. ಈ ತೀರ್ಮಾನದಿಂದಾಗಿ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ಎದುರಾಗುತ್ತಿದ್ದ ಅಡಚಣೆಗಳು ದೂರವಾಗಲಿವೆ.
‘ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ-2024’ರ ಅಧ್ಯಾಯ 7ರ ಸೆಕ್ಷನ್ 241(7)ರಡಿ, ರಾಜ್ಯ ಸರ್ಕಾರಕ್ಕೆ ಒಸಿ ಮತ್ತು ಸಿಸಿಯಿಂದ ವಿನಾಯಿತಿ ನೀಡುವ ಅಧಿಕಾರವಿದೆ. ಈ ಅವಕಾಶವು ಹಿಂದಿನ ‘ಬಿಬಿಎಂಪಿ ಕಾಯಿದೆ-2020’, ‘ಕೆಎಂಸಿ ಕಾಯಿದೆ-1976’ ಅಥವಾ ‘ಕರ್ನಾಟಕ ಪುರಸಭೆಗಳ ಕಾಯಿದೆ-1964’ ರಲ್ಲಿ ಇರಲಿಲ್ಲ. ಈ ಕಾಯಿದೆಯಡಿ, ಕಟ್ಟಡ ನಿರ್ಮಾಣದ ನಿಯಂತ್ರಣ ಮತ್ತು ಮೇಲ್ವಿಚಾರಣೆಗೆ ದೃಢವಾದ ಆಡಳಿತ ವ್ಯವಸ್ಥೆಯನ್ನು ರೂಪಿಸಲು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಎನ್.ಕೆ. ಲಕ್ಷ್ಮೀಸಾಗರ್ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ. ಸದ್ಯ ಜಿಬಿಎ ಹೊರಡಿಸಿರುವ ಈ ಹೊಸ ಆದೇಶದಿಂದ ರಾಜಧಾನಿಯ ಆಸ್ತಿ ಮಾಲೀಕರಿಗೆ ಶುಭಸುದ್ದಿ ಸಿಕ್ಕಂತಾಗಿದೆ.
ಬೆಂಗಳೂರಿನ ಎಲ್ಲ ಶಾಸಕರ ಜತೆ ಸಿಎಂ ಸಿದ್ದರಾಮಯ್ಯ ಬುಧವಾರ ಸಂಜೆ ಮಹತ್ವದ ಸಭೆ ನಡೆಸಿದರು. ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ, ಪ್ರಮುಖವಾಗಿ ಅನುದಾನ ಹಂಚಿಕೆ ವಿಚಾರವಾಗಿ ಬೆಂಗಳೂರು ಭಾಗದ ಶಾಸಕರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಶಾಸಕರ ಕುಂದು ಕೊರತೆಯನ್ನು ಆಲಿಸಿದರು. ಬೆಂಗಳೂರು ಭಾಗದ ಶಾಸಕರ ಜೊತೆಗಿನ ಸಭೆಯಲ್ಲಿ ಮುಖ್ಯಮಂತ್ರಿಗಳು ಜಿಬಿಎ ಅನುಷ್ಠಾನದ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಯುಗಾಂತ್ಯ, ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿಗೆ: ಕ್ಷೇತ್ರ ವಿಂಗಡಣೆ ಹೇಗೆ?
ಬೆಂಗಳೂರು ಭಾಗದ ಶಾಸಕರ ಬಳಿಕ ಅಭಿಪ್ರಾಯ ಕೇಳಿದ ಸಿಎಂ, ಜಿಬಿಎ ಮಾಡಿದ್ದಕ್ಕೆ ಎಲ್ಲರಿಗೂ ತೃಪ್ತಿ ಇದೆಯಾ ಎಂದು ಪ್ರಶ್ನಿಸಿದರು. ಅಲ್ಲದೆ, ಏನಾದರೂ ಅಭಿಪ್ರಾಯ, ಸಲಹೆ ಇದ್ದರೆ ನೀಡುತ್ತೀರಿ ಎಂದು ಸೂಚಿಸಿದರು. ಇದೇ ವೇಳೆ, ಡಿಸಿಎಂ ಡಿಕೆ ಶಿವಕುಮಾರ್ ಜಿಬಿಎ ಕುರಿತು ಸಿಎಂಗೆ ಮಾಹಿತಿ ನೀಡಿದರು. ಮ್ಯಾಪ್ ವಿವರಿಸಿ ಜಿಬಿಎ ಬಗ್ಗೆ ಮಾಹಿತಿ ಕೊಟ್ಟರು. ವಾರ್ಡ್ ವಿಂಗಡಣೆ, ಎಲೆಕ್ಷನ್ ಪೂರ್ವ ಸಿದ್ಧತೆ ಕುರಿತಂತೆಯೂ ಚರ್ಚೆ ನಡೆಯಿತು.
Published On - 9:32 am, Thu, 11 September 25