
ಬೆಂಗಳೂರು, ಅಕ್ಟೋಬರ್ 31: ನೆರೆ ರಾಜ್ಯಗಳಿಗೆ ಮೊಂತಾ ಚಂಡಮಾರುತ (Cyclone Montha) ಅಪ್ಪಳಿಸಿರುವ ಬೆನ್ನಲ್ಲೇ ಕರ್ನಾಟಕದ ಹಲವು ಜಿಲ್ಲೆಗಳು ವರುಣಾರ್ಭಟಕ್ಕೆ ತತ್ತರಿಸಿದ್ದವು. ಈ ಹಿನ್ನೆಲೆ ರಾಜ್ಯದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಹೆಚ್ಚಾಗಿರುವ ತರಕಾರಿ ಬೆಲೆ (Vegetable Rate) ಕೇಳಿದ ಗ್ರಾಹಕರು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದು, ವ್ಯಾಪಾರಿಗಳು ಖರೀದಿದಾರರಿಲ್ಲದೇ ನಷ್ಟವಾಗುತ್ತಿದೆಯೆಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸೈಕ್ಲೋನ್ ಎಫೆಕ್ಟ್ನಿಂದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಕರ್ನಾಟಕದ ಕೆಲ ಭಾಗದಲ್ಲೂ ಭಾರೀ ಮಳೆಯಾಗಿತ್ತು. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ರಾಮನಗರದಲ್ಲಿ ಅಕಾಲಿಕ ಮಳೆಯಾಗಿತ್ತು. ಇದರಿಂದ ತರಕಾರಿ ಬೆಳೆ ಹಾಳಾಗಿದ್ದು, ಸರಿಯಾಗಿ ಬೆಳೆ ಬಂದಿಲ್ಲ. ಬೆಳೆದ ಬೆಳೆ ಕೈಗೆ ಬರದ ಕಾರಣ ತರಕಾರಿಗಳ ಬೆಲೆ ಗಗನಕ್ಕೇರಿದೆ.ಯಾವ ತರಕಾರಿ ಬೆಲೆ ಕೇಳಿದರೂ ಗ್ರಾಹಕರು ಕಂಗಾಲಾಗುತ್ತಿದ್ದಾರೆ. ಇದರಿಂದ ಯಾರು ತರಕಾರಿ ಕೊಳ್ಳಲು ಬರುತ್ತಿಲ್ಲ, ವ್ಯಾಪಾರ ಸರಿಯಾಗಿ ನಡೆಯದೇ ಇದ್ದರೆ ಜೀವನ ಸಾಗಿಸುವುದು ಕಷ್ಟ ಎಂದು ತರಕಾರಿ ವ್ಯಾಪಾರಿಗಳು ತನ್ನ ನೋವು ತೋಡಿಕೊಂಡಿದ್ದಾರೆ.
ತರಕಾರಿ ಬೆಲೆ ಕೇಳಿ ಗೃಹಿಣಿಯರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಒಂದು ಕೆಜಿ ತರಕಾರಿ ಕೊಂಡುಕೊಳ್ಳುವ ಮಹಿಳೆಯರು ಅರ್ಧ, ಕಾಲು ಕೆಜಿ ಕೊಳ್ಳಲು ಮುಂದಾಗುತ್ತಿದ್ದಾರೆ. ಈ ಬೆಲೆಯೇರಿಕೆಯ ಸಮಯದಲ್ಲಿ ತರಕಾರಿ ಕೊಂಡು ಅಡುಗೆ ಮಾಡುವುದು ಕಷ್ಟ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:50 am, Fri, 31 October 25