ಬೆಂಗಳೂರು, ಮಾರ್ಚ್ 15: ಬೆಂಗಳೂರು ನಗರದ ನೀರಿನ ಬಿಕ್ಕಟ್ಟನ್ನು ಪರಿಹರಿಸುವುದಕ್ಕೆ ನೆರವಾಗಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಗುರುವಾರ ನಾಲ್ಕು ಹೊಸ ವೆಬ್ ಅಪ್ಲಿಕೇಶನ್‌ಗಳನ್ನು (Web Applications) ಬಿಡುಗಡೆ ಮಾಡಿದೆ. ಜಲಸ್ನೇಹಿ, ಜಲಮಿತ್ರ, ಜಲಸಂರಕ್ಷಕ ಮತ್ತು ಅಂತರ್ಜಲ ಎಂಬ ಆ್ಯಪ್ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಅಪ್ಲಿಕೇಶನ್‌ಗಳು ಜನರು ಸಂಸ್ಕರಿಸಿದ ನೀರನ್ನು ಪಡೆಯಲು ಮತ್ತು ನೀರಿನ ದುರುಪಯೋಗದ ವಿರುದ್ಧ ದೂರುಗಳನ್ನು ನೀಡಲು ಸಹಾಯ ಮಾಡಲಿದೆ.
ನಿರ್ಮಾಣ, ತೋಟಗಾರಿಕೆ, ವಾಹನಗಳನ್ನು ತೊಳೆಯುವುದು ಮತ್ತು ಅಂತಹ ಅನೇಕ ಉದ್ದೇಶಗಳಿಗಾಗಿ ಕುಡಿಯಲು ಯೋಗ್ಯ ನೀರಿನ ಬಳಕೆಯನ್ನು ಬಿಡಬ್ಲ್ಯುಎಸ್ಎಸ್ಬಿ ನಿಷೇಧಿಸಿದೆ. ಹೀಗಾಗಿ ಜನರು ಆ ಉದ್ದೇಶಗಳಿಗಾಗಿ ಪರ್ಯಾಯ ಹುಡುಕುತ್ತಿದ್ದಾರೆ. ಹೀಗಾಗಿ, ಸಂಸ್ಕರಿಸಿದ ನೀರಿನ ಬೇಡಿಕೆ ತೀವ್ರವಾಗಿ ಹೆಚ್ಚಾಗಿದೆ.
ಸಂಸ್ಕರಿಸಿದ ನೀರಿನ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಬಿಡಬ್ಲ್ಯುಎಸ್ಎಸ್ಬಿ ‘ಜಲಸ್ನೇಹಿ’ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಈ ಆ್ಯಪ್ ಮೂಲಕ ಬೆಂಗಳೂರಿನ ಗ್ರಾಹಕರು ಬಿಡಬ್ಲ್ಯುಎಸ್ಎಸ್ಬಿಯಿಂದ ಸಂಸ್ಕರಿಸಿದ ನೀರಿಗೆ ಮನವಿ ಸಲ್ಲಿಸಬಹುದಾಗಿದೆ.
ಇತ್ತೀಚೆಗೆ, ಬೆಂಗಳೂರು ನಗರದಲ್ಲಿ ಬೋರ್‌ವೆಲ್‌ಗಳನ್ನು ಕೊರೆಯಲು ಅನುಮತಿಯನ್ನು ಕಡ್ಡಾಯಗೊಳಿಸಿ ಬಿಡಬ್ಲ್ಯುಎಸ್ಎಸ್ಬಿ ಆದೇಶ ಹೊರಡಿಸಿತ್ತು. ಇದಕ್ಕಾಗಿ ‘ಅಂತರ್ಜಲ’ ಅಪ್ಲಿಕೇಶನ್ ಆರಂಭಿಸಲಾಗಿದೆ. ಇದು ಬೋರ್‌ವೆಲ್‌ಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸಲಿದೆ. ಇದರ ಮೂಲಕ ಬೆಂಗಳೂರು ನಗರ ವಾಸಿಗಳು ಕೊಳವೆ ಬಾವಿ ಕೊರೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದ ಅರ್ಜಿ ಸಲ್ಲಿಕೆಗೆ ಕಚೇರಿಗೆ ಅಲೆಯಬೇಕಿಲ್ಲ.
ಜಲಮಿತ್ರ, ಜಲಸಂರಕ್ಷಕ ಎಂಬ ಇತರ ಎರಡು ಅಪ್ಲಿಕೇಶನ್‌ಗಳನ್ನು ನಾಗರಿಕರಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸಲು ಮತ್ತು ನೀರಿನ ದುರುಪಯೋಗದ ಕುರಿತು ದೂರುಗಳನ್ನು ಪಡೆಯಲು ಪ್ರಾರಂಭಿಸಲಾಗಿದೆ. ಈ ಎರಡು ಆ್ಯಪ್ಗಳ ಮೂಲಕ ನೀರಿನ ದುರ್ಬಳಕೆ ಬಗ್ಗೆ ಮತ್ತು ನಿರ್ಬಂಧಿತ ಚಟುವಟಿಕೆಗಳಿಗೆ ನೀರು ಬಳಸುವುದರ ವಿರುದ್ಧ ನಗರವಾಸಿಗಳು ಆಡಳಿತಕ್ಕೆ ದೂರು ನೀಡಬಹುದಾಗಿದೆ.
‘ನಗರವು ಭೀಕರ ಬರಗಾಲಕ್ಕೆ ಸಾಕ್ಷಿಯಾಗಿದೆ. ನಮ್ಮ ಸರ್ಕಾರವು ಎಲ್ಲಾ ನಾಗರಿಕರಿಗೆ ಸಾಕಷ್ಟು ನೀರು ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ನಾವು ನೀರನ್ನು ಎಚ್ಚರಿಕೆಯಿಂದ ಬಳಸುವುದು ಸಹ ಮುಖ್ಯವಾಗಿದೆ. ಈ ನಾಲ್ಕು ಹೊಸ ಅಪ್ಲಿಕೇಶನ್‌ಗಳು ಮಂಡಳಿಯು ನೀರು ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಸಹಾಯ ಮಾಡಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಜಲ ಬಿಕ್ಕಟ್ಟನ್ನು ನಿಭಾಯಿಸಲು ನಾವು ನಾಗರಿಕರಿಂದ ಬೆಂಬಲವನ್ನು ಬಯಸುತ್ತೇವೆ. ‘ಜಲಸಂರಕ್ಷಕ’ ಅಪ್ಲಿಕೇಶನ್ ಬಳಸಿ, ನಿಷೇಧಿತ ಉದ್ದೇಶಗಳಿಗಾಗಿ ಕುಡಿಯುವ ನೀರನ್ನು ಬಳಸುವವರಿಗೆ ನಾವು ದಂಡ ವಿಧಿಸಬಹುದು. ‘ಜಲಮಿತ್ರ’ ಅಪ್ಲಿಕೇಶನ್ ನಾಗರಿಕರು, ಎನ್‌ಜಿಒಗಳು ಮತ್ತು ಬಿಡಬ್ಲ್ಯುಎಸ್‌ಎಸ್‌ಬಿಗೆ ನೀರಿನ ಸೋರಿಕೆಯನ್ನು ತಡೆಗಟ್ಟಲು ಸಹಾಯ ಮಾಡಲಿದೆ. ಈ ನಿಟ್ಟಿನಲ್ಲಿ ಆಸಕ್ತರು, ಸಮೀಕ್ಷೆಗಳನ್ನು ನಡೆಸುವುದು ಮತ್ತು ಇತರ ಕಾರ್ಯಗಳನ್ನು ಬಿಡಬ್ಲ್ಯೂಎಸ್‌ಎಸ್‌ಬಿಯಲ್ಲಿ ಸ್ವಯಂ ನೋಂದಾಯಿಸಲುಹುದಾಗಿದೆ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ಡಾ. ರಾಮಪ್ರಸತ್ ಮನೋಹರ್ ವಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನೀರಿನ ಮೌಲ್ಯ ತಿಳಿಸಲು ʼನೀರು ಉಳಿಸಿ ಬೆಂಗಳೂರು ಬೆಳೆಸಿ’ ಅಭಿಯಾನಕ್ಕೆ ಚಾಲನೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್
ಮಂಡಳಿಯು ನೀರಿನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ‘ನೀರು ಉಳಿಸಿ ಬೆಂಗಳೂರು ಬೆಳೆಸಿ’ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿತ್ತು. ಅಭಿಯಾನದ ಭಾಗವಾಗಿ, ನೀರಿನ ಸಂರಕ್ಷಣೆಯ ಸಂದೇಶವನ್ನು ಹೊಂದಿರುವ ಇ-ಆಟೋಗಳು ನಗರದಾದ್ಯಂತ ಸಂಚರಿಸಲಿವೆ. ನೀರನ್ನು ಉಳಿಸಲು ಎಂಟು ಸರಳ ಮಾರ್ಗಗಳನ್ನು ಮಂಡಳಿ ಪಟ್ಟಿ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:52 am, Fri, 15 March 24