ಬೆಂಗಳೂರು, ಏಪ್ರಿಲ್ 13: ಕುಡಿಯುವ ಉದ್ದೇಶ ಹೊರತುಪಡಿಸಿ ಇತರ ಕೆಲಸಗಳಿಗೆ ಸಂಸ್ಕರಿಸಿದ ನೀರಿನ ಬಳಕೆ ಉತ್ತೇಜಿಸುವ ಸಲುವಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿಸಿದ ನೀರನ್ನು ಬಳಸುವ ಗ್ರಾಹಕರಿಗೆ ರಿಯಾಯಿತಿಯನ್ನು ನೀಡುವ ಬಗ್ಗೆ ಚಿಂತನೆ ನಡೆಸಿದೆ. ನಿರ್ಮಾಣ ಚಟುವಟಿಕೆ, ತೋಟಗಾರಿಕೆ ಮತ್ತು ಕಾರು ತೊಳೆಯುವಿಕೆಯಂತಹ ಕೆಲಸಗಳಿಗೆ ಕಾವೇರಿ ಮತ್ತು ಬೋರ್‌ವೆಲ್ ನೀರನ್ನು ಬಳಸುವುದನ್ನು ಮಂಡಳಿ ನಿಷೇಧಿಸಿರುವುದು ಸಂಸ್ಕರಿಸಿದ ನೀರಿಗೆ ಬೇಡಿಕೆಯನ್ನು ಹೆಚ್ಚಿಸಿದೆ.
ಸಂಸ್ಕರಿಸಿದ ನೀರಿನ ಬಳಕೆಯನ್ನು ಉತ್ತೇಜಿಸಲು, ಅಂತಹ ನೀರನ್ನು ದೊಡ್ಡ ಪ್ರಮಾಣದಲ್ಲಿ ಬಳಸುವ ಕೈಗಾರಿಕೆಗಳು ಮತ್ತು ನಿರ್ಮಾಣ ಕಂಪನಿಗಳಿಗೆ ನಾವು ರಿಯಾಯಿತಿಯನ್ನು ನೀಡಲು ಚಿಂತನೆ ನಡೆಸಿದ್ದೇವೆ ಎಂದು ಜಲ ಮಂಡಳಿಯ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ವಿ ತಿಳಿಸಿದ್ದಾರೆ.
ಸಂಸ್ಕರಿಸಿದ ನೀರಿನ ಬಳಕೆಯು ಕಾವೇರಿ ನೀರಿನ ಬೇಡಿಕೆಯನ್ನು ಕಡಿಮೆ ಮಾಡಲು ನೆರವಾಗಲಿದೆ. ಜೊತೆಗೆ ಮಂಡಳಿಗೆ ಆದಾಯದ ಮೂಲವಾಗಿ ಪರಿಣಮಿಸಲಿದೆ ಎಂದು ಮನೋಹರ್ ಹೇಳಿದ್ದಾರೆ.
ನಗರದಲ್ಲಿ ಸುಮಾರು 1,200 ಎಂಎಲ್ಡಿ (ಮಿಲಿಯನ್ ಲೀಟರ್ ಪರ್ ಡೇ) ನೀರನ್ನು ಶುದ್ಧೀಕರಿಸಲಾಗುತ್ತದೆ. ನಾವು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು.ಆದರೆ, ಜನರ ಮನಸ್ಥಿತಿ ಬದಲಾಗಬೇಕಿದೆ. ನಾವು ಜಾಗೃತಿ ಅಭಿಯಾನಗಳು ಮತ್ತು ಅಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಚಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಪ್ರಮಾಣದ ಬಳಕೆದಾರರ (ಮಾಸಿಕ 10 ಲಕ್ಷ ಲೀಟರ್‌ಗಿಂತ ಹೆಚ್ಚು) ಪೈಕಿ ಶೇ 67 ರಷ್ಟು (714 ರಲ್ಲಿ 481) ಮಂದಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಆದೇಶವನ್ನು ಅನುಸರಿಸಿದ್ದಾರೆ ಎಂದು ಮಂಡಳಿ ಹೇಳಿದೆ. ನೀರಿನ ಬಿಕ್ಕಟ್ಟಿನ ಕಾರಣ ಅಪಾರ್ಟ್‌ಮೆಂಟ್‌ಗಳು, ರೆಸ್ಟೋರೆಂಟ್‌ಗಳು, ಕಚೇರಿಗಳು ಮತ್ತು ವ್ಯವಹಾರಗಳಲ್ಲಿ ಕಡ್ಡಾಯವಾಗಿ ಟ್ಯಾಪ್ ಏರಿಯೇಟರ್ಗಳನ್ನು ಅಳವಡಿಸುವಂತೆ ಮಾರ್ಚ್ 20 ರಂದು ಜಲ ಮಂಡಳಿ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: Bangalore Water Crisis: ನೀರು ಉಳಿಸಲು ಜನಾಂದೋಲನ, ವಿಶೇಷ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ
ಈ ಉಪಕ್ರಮವು ನಗರದಾದ್ಯಂತ ಸುಮಾರು 2.86 ಲಕ್ಷ ಏರಿಯೇಟರ್ಗಳನ್ನು ಸ್ಥಾಪಿಸಲು ಕಾರಣವಾಗಿದೆ. ಈ ಸಾಧನಗಳು ನೀರಿನ ಬಳಕೆಯನ್ನು ಶೇಕಡಾ 60-85 ರಷ್ಟು ಕಡಿಮೆ ಮಾಡಲು ನೆರವಾಗುತ್ತವೆ ಎಂದು ಮಂಡಳಿ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ