ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ ದರ ದುಪ್ಪಟ್ಟು: ನೀರಿನ ಬಿಕ್ಕಟ್ಟೇ ಕಾರಣ

|

Updated on: Apr 16, 2024 | 8:19 AM

Public toilets price in Bengaluru: ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟಿನ ಬಿಸಿ ಸಾರ್ವಜನಿಕ ಶೌಚಾಲಯಗಳ ಮೇಲೆ ತಟ್ಟಿದ್ದು, ಜನರಿಗೆ ದರ ಏರಿಕೆಯ ಆಘಾತ ನೀಡಿವೆ. ನಗರದ ಬಹುತೇಕ ಸಾರ್ವಜನಿಕ ಶೌಚಾಲಯಗಳಲ್ಲಿ ದರ ದುಪ್ಪಟ್ಟಾಗಿದೆ. ದರ ಹೆಚ್ಚಳದ ವಿವರ ಇಲ್ಲಿದೆ.

ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ ದರ ದುಪ್ಪಟ್ಟು: ನೀರಿನ ಬಿಕ್ಕಟ್ಟೇ ಕಾರಣ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಏಪ್ರಿಲ್ 16: ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ (Public toilets) ಮೇಲೂ ನೀರಿನ ಕೊರತೆ ಪರಿಣಾಮ ಬೀರಿದೆ. ಪರಿಣಾಮವಾಗಿ ಮುಂದಿನ ಬಾರಿ ನೀವು ಸಾರ್ವಜನಿಕ ಶೌಚಾಲಯಕ್ಕೆ ಹೋದಾಗ ಹೆಚ್ಚು ಹಣ ತೆರಬೇಕಾಗಲಿದೆ. ಹೌದು, ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ ದರ ಹೆಚ್ಚಳ ಮಾಡಲಾಗಿದ್ದು, ಇದೀಗ ದುಪ್ಪಟ್ಟಾಗಿದೆ. ಈವರೆಗೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಿರ್ವಹಿಸುವ ಸಾರ್ವಜನಿಕ ಶೌಚಾಲಯಗಳು ಜನರಿಂದ ಮೂತ್ರ ವಿಸರ್ಜನೆಗೆ 2 ರೂ. ಮತ್ತು ಮಲವಿಸರ್ಜನೆಗೆ 5 ರೂ. ವಿಧಿಸುತ್ತಿದ್ದವು. ಆದರೆ ನಗರದಲ್ಲಿ ನೀರಿನ ಕೊರತೆ ಕಾಣಿಸಿಕೊಂಡ ಕಾರಣ ಕಳೆದ ಕೆಲವು ದಿನಗಳಿಂದ ದರವನ್ನು ಕ್ರಮವಾಗಿ 5 ಮತ್ತು 10 ರೂ.ಗೆ ಹೆಚ್ಚಿಸಲಾಗಿದೆ.

ಸಾರ್ವಜನಿಕ ಶೌಚಾಲಯಗಳಲ್ಲಿ ಇದೀಗ ಸಣ್ಣ ಬಕೆಟ್‌ಗಳಲ್ಲಿ ನೀರು ಇಡಲಾಗುತ್ತಿದೆ. ಹೆಚ್ಚುವರಿ ನೀರು ಬಳಸಿದರೆ ಹೆಚ್ಚುವರಿ ಹಣವನ್ನೂ ನೀಡಬೇಕಾಗುತ್ತದೆ.

ಹೆಚ್ಚುವರಿ ಶುಲ್ಕ ವಿಧಿಸಲು ಬೋರ್‌ವೆಲ್‌ಗಳಲ್ಲಿ ನೀರಿಲ್ಲದಿರುವುದು ಮತ್ತು ನೀರಿನ ಕೊರತೆ ಕಾರಣ ಎಂದು ಶೌಚಾಲಯ ನಿರ್ವಾಹಕರು ಹೇಳಿದ್ದಾರೆ. ನೀರಿನ ಟ್ಯಾಂಕರ್‌ಗಳು ಬೆಲೆ ಹೆಚ್ಚಿಸಿವೆ. ಹೀಗಾಗಿ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ವೆಚ್ಚ ಹೆಚ್ಚಿಸಲಾಗಿದೆ ಎಂದು ಅವರು ಹೇಳುದ್ದಾರೆ.

ಶುಲ್ಕ ಹೆಚ್ಚಿಸಿದ್ದರೂ ಸಾರ್ವಜನಿಕ ಶೌಚಾಲಯಗಳು ಕೊಳಕು, ದುರ್ವಾಸನೆ ಮತ್ತು ಅನೈರ್ಮಲ್ಯದಿಂದ ಕೂಡಿವೆ ಎಂದು ಬಿಎಂಟಿಸಿ ಬಸ್ ಚಾಲಕರೊಬ್ಬರು ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್​ ಎಕ್ಸ್​​ಪ್ರೆಸ್’ ವರದಿ ಮಾಡಿದೆ. ಕೆಲವು ಶೌಚಾಲಯಗಳು ಸ್ನಾನದ ಸೇವೆಗಳನ್ನು ನಿಲ್ಲಿಸಿದರೆ, ಕೆಲವು ನೀರಿನ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಮ ನವಮಿ, ಬೆಂಗಳೂರಿನಲ್ಲಿ ಮಾಂಸ ಮಾರಾಟಕ್ಕೆ ಬಿಬಿಎಂಪಿ ನಿಷೇಧ

ನಮಗೆ ದಿನಕ್ಕೆ ಮೂರು ಟ್ಯಾಂಕರ್ ನೀರು ಬೇಕಾಗುತ್ತದೆ ಮತ್ತು ಪ್ರತಿ ಟ್ಯಾಂಕರ್ ನೀರಿನ ಬೆಲೆ 5,000 ರೂ. ಇದೆ. ಇದು ನಮ್ಮ ಗಳಿಕೆಯ ಮೇಲೆ ಪರಿಣಾಮ ಬೀರಿದೆ. ಗಳಿಕೆಯ ಮೊತ್ತದಲ್ಲಿ ಬಹುಪಾಲು ನೀರಿನ ವೆಚ್ಚವನ್ನು ಸರಿದೂಗಿಸಲು ಖರ್ಚಾಗುತ್ತದೆ ಎಂದು ಮೆಜೆಸ್ಟಿಕ್‌ನಲ್ಲಿ ಸಾರ್ವಜನಿಕ ಶೌಚಾಲಯ ನಡೆಸುತ್ತಿರುವ ವ್ಯಕ್ತಿಯೊಬ್ಬರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಸಾರ್ವಜನಿಕ ಶೌಚಾಲಯಗಳ ದರ ಹೆಚ್ಚಳ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ