ಲೋಕಸಭೆ ಚುನಾವಣೆ 2024: ಮತದಾನದ ದಿನ ಕಂಪನಿಗಳು ರಜೆ ನೀಡದೆ ಇದ್ದರೆ ಕಠಿಣ ಕ್ರಮ: ಮುಖ್ಯ ಚುನಾವಣಾಧಿಕಾರಿ

ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಏಪ್ರಿಲ್​ 26 ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮೇ 7 ರಂದು ಮತದಾನ ನಡೆಯಲಿದೆ. ಈ ಎರಡೂ ದಿನದಂದು ಸರ್ಕಾರ ರಜೆ ಘೋಷಣೆ ಮಾಡಿದೆ. ಒಂದು ವೇಳೆ ಕಂಪನಿಗಳು ಈ ಎರಡು ದಿನದಂದು ಸಿಬ್ಬಂದಿಗೆ ರಜೆ ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆ 2024: ಮತದಾನದ ದಿನ ಕಂಪನಿಗಳು ರಜೆ ನೀಡದೆ ಇದ್ದರೆ ಕಠಿಣ ಕ್ರಮ: ಮುಖ್ಯ ಚುನಾವಣಾಧಿಕಾರಿ
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್​ ಕುಮಾರ್​ ಮೀನಾ
Follow us
|

Updated on: Apr 16, 2024 | 8:43 AM

ಬೆಂಗಳೂರು, ಏಪ್ರಿಲ್​ 16: ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ (Voting) ನಡೆಯುತ್ತದೆ. ಏಪ್ರಿಲ್​ 26 ಮತ್ತು ಮೇ 7 ರಂದು ಮತದಾನ ನಡೆಯಲಿದ್ದು, ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಈ ಎರಡೂ ದಿನ ಸರ್ಕಾರ ರಜೆ (Holiday) ಘೋಷಣೆ ಮಾಡಿದೆ. ಈ ಎರಡು ದಿನದಂದು ರಜೆ ನೀಡದ ಕಂಪನಿಗಳ ವಿರುದ್ಧ ಕಾರ್ಮಿಕ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್​ ಕುಮಾರ್​ ಮೀನಾ (Manoj Kumar Meena) ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಐಟಿ ವಲಯ ಸೇರಿದಂತೆ ಖಾಸಗಿ ಕಂಪನಿಗಳನ್ನು ಸಂಪರ್ಕ ಮಾಡಿದ್ದು, ಅಲ್ಲಿನ ಸಿಇಒ ಮತ್ತು ಮ್ಯಾನೇಜ್​ಮೆಂಟ್​ಗಳನ್ನು ಭೇಟಿಯಾಗಿ ಮತ ಚಲಾಯಿಸಲು ಸಿಬ್ಬಂದಿಗೆ ಉತ್ತೇಜಿಸುವಂತೆ ಹೇಳಿದ್ದೇವೆ ಎಂದು ತಿಳಿಸಿದರು.

ಖಾಸಗಿ ಕಂಪನಿಗಳ ಮಾಲಿಕರನ್ನು ಭೇಟಿ ಮಾಡಿ ಮತದಾನ ಮಾಡುವಂತೆ ಸಿಬ್ಬಂದಿಗಳಿಗೆ ಉತ್ತೇಜಿಸುವುದಲ್ಲದೆ, ಸಾಧ್ಯವಾದರೆ ಅವರಿಗೆ ಮತಗಟ್ಟೆಗಳಿಗೆ ತೆರಳಲು ವಾಹನದ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದೇವೆ. ವರ್ಕ್​ ಫ್ರಾಮ್​ ಹೋಮ್ ಮಾಡುವಂತೆ ಕಂಪನಿಗಳು ಸಿಬ್ಬಂದಿಗೆ ಹೇಳುವಂತಿಲ್ಲ. ಕಡ್ಡಾಯವಾಗಿ ರಜೆ ನೀಡಲೇಬೇಕು. ಒಂದು ವೇಳೆ ರಜೆ ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಶೇ35 ಅಥವಾ ಇದಕ್ಕಿಂತ ಕಡಿಮೆ ಮತದಾನವಾಗಿರುವ ಬಿಬಿಂಪಿ ವ್ಯಾಪ್ತಿಯ 1800 ಮತ್ತು ರಾಜ್ಯದ 5000 ಮತಗಟ್ಟೆಗಳನ್ನು ಗುರುತಿಸಿದ್ದೇವೆ. ನಾವು ಮನೆ ಮನೆಗೆ ತೆರಳಿ ಮತದಾನದ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಹಾಗೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳು ಮತ್ತು ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಷನ್‌ಗಳನ್ನು ಸಂಪರ್ಕಿಸಿ ಮತದಾನದ ಬಗ್ಗೆ ತಿಳಿಸಿದ್ದೇವೆ. ಆದರೆ ನಾವು ಯಾರನ್ನೂ ಒತ್ತಾಯಿಸಲು ಸಾಧ್ಯವಿಲ್ಲ. ಏಪ್ರಿಲ್ 26 ಶುಕ್ರವಾರ ಆಗಿದ್ದು, ಮೊದಲು ಮತದಾನ ಮಾಡಿ ನಂತರ ರಜೆ ತೆಗೆದುಕೊಳ್ಳಬೇಕು ಅಂತ ಜನರಲ್ಲಿ ಮನವಿ ಮಾಡುತ್ತಿದ್ದೇವೆ.

ಇದನ್ನೂ ಓದಿ: ಮನೆಯಿಂದಲೇ ಮತದಾನದ ವೇಳೆ ಬಿಜೆಪಿ ಏಜೆಂಟ್ ಇದ್ದರೇ? ಕಾಂಗ್ರೆಸ್ ದೂರಿನ ಬಗ್ಗೆ ಆಯೋಗ ಹೇಳಿದ್ದಿಷ್ಟು

ಮುಂದಿನ ದಿನಗಳಲ್ಲಿ ಮಾಲ್‌ಗಳು, ಥಿಯೇಟರ್‌ಗಳು ಮತ್ತು ಜನಸಂದಣಿ ಇರುವ ಇತರ ಸ್ಥಳಗಳಿಗೆ ಭೇಟಿ ನೀಡಿ ಮತದಾನದ ಬಗ್ಗೆ ಜನರಿಗೆ ತಿಳಿಸುತ್ತೇವೆ. ಮತ್ತು ಬ್ಯಾನರ್‌ಗಳನ್ನು ಹಾಕುತ್ತೇವೆ. ವಿದ್ಯುತ್ ಸರಬರಾಜು ನಿಗಮಗಳು (ESCOM) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಂತಹ ನೀರು ಸರಬರಾಜು ಏಜೆನ್ಸಿಗಳ ಮುಖಾಂತರ ಮತದಾನದ ಮಾಡುವಂತೆ ಗ್ರಾಹಕರಿಗೆ ಸಂದೇಶಗಳನ್ನು ಕಳುಹಿಸಲು ಮತ್ತು ಗಾಹಕರಿಗೆ ಮತದಾನ ದಿನವನ್ನು ನೆನಪಿಸಲು ಹೇಳಿದ್ದೇವೆ.

ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಜನರು ಹೇಳುತ್ತಿರುವ ವಿಚಾರದ ಕುರಿತು ಮಾತನಾಡಿದ ಅವರು, ಇಂತಹ ಸಮಸ್ಯೆಗಳು ಗಮನಕ್ಕೆ ಬಂದರೆ ತಕ್ಷಣವೇ ನಮ್ಮ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗುತ್ತದೆ. ಅವರು ಜನರೊಂದಿಗೆ ಮಾತನಾಡುತ್ತಾರೆ ಮತ್ತು ಮತದಾನ ಬಹಿಷ್ಕರಿಸದಂತೆ ಮನವಿ ಮಾಡುತ್ತಾರೆ. ನಾಗರಿಕರಿಗೆ ಮತದಾನದ ಶಕ್ತಿಯ ಬಗ್ಗೆಯೂ ತಿಳಿಸಲಾಗಿದೆ. ಸಂಬಂಧಪಟ್ಟ ಇಲಾಖೆಯೊಂದಿಗೂ ಸಹ ಸಂವಹನವನ್ನು ಮಾಡಲಾಗುತ್ತದೆ. ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಮಾರ್ಚ್ 16 ರಂದು ಮಾದರಿ ನೀತಿ ಸಂಹಿತೆ ಘೋಷಿಸಿದಾಗಿನಿಂದ 355.78 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು 2019ರ ಸಂಸತ್ ಚುನಾವಣೆ ಮತ್ತು 2023ರ ವಿಧಾನಸಭೆ ಚುನಾವಣೆಗಿಂತ ಹೆಚ್ಚಾಗಿದೆ ಎಂದರು.

ಹೆಚ್ಚುತ್ತಿರುವ ಭದ್ರತಾ ಕ್ರಮಗಳಿಗೆ ಸಂಬಂಧಿಸಿದಂತೆ ತೆಲಂಗಾಣದಲ್ಲಿ ಚುನಾವಣೆ ನಡೆಯುತ್ತಿರುವಾಗ, ಭದ್ರತಾ ಕಾರಣಗಳಿಗಾಗಿ ಕರ್ನಾಟಕದ ಗಡಿ ಪ್ರದೇಶಗಳನ್ನು ಮುಚ್ಚಲಾಗುತ್ತಿದೆ. ಅದೇ ರೀತಿ ಕರ್ನಾಟಕದಲ್ಲಿ ಚುನಾವಣೆ ನಡೆದಾಗ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಇತರ ಪ್ರದೇಶಗಳ ಗಡಿ ಪ್ರದೇಶಗಳನ್ನು ಮುಚ್ಚಲಾಗುತ್ತದೆ ಎಂದು ತಿಳಿಸಿದರು.

ಚುನಾವಣೆಗಾಗಿ ತಮಿಳುನಾಡಿನ ವಿಶೇಷ ಕೇಂದ್ರ ಅರೆಸೇನಾ ತಂಡಗಳನ್ನು ಕರ್ನಾಟಕಕ್ಕೆ ಕರೆಸಲಾಗುತ್ತದೆ. ವಿಶೇಷ ಪಡೆಗಳನ್ನು ನಿಯೋಜಿಸುವ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗುತ್ತದೆ. ಶೇ.50 ಬೂತ್‌ಗಳಲ್ಲಿ ವೆಬ್‌ಕಾಸ್ಟಿಂಗ್ ಕೂಡ ನಡೆಯಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ