ಬೆಂಗಳೂರು, ಮಾರ್ಚ್ 12: ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು (Bengaluru Water Crisis) ಉಲ್ಬಣಗೊಳ್ಳುತ್ತಿದ್ದಂತೆಯೇ ಅನೇಕ ಐಟಿ ಉದ್ಯೋಗಿಗಳು (IT Employees) ತಾತ್ಕಾಲಿಕವಾಗಿ ನಗರ ತೊರೆಯುತ್ತಿದ್ದು ಊರುಗಳಿಗೆ ತೆರಳಿದ್ದಾರೆ. ಇದೇ ವೇಳೆ, ಬಿಕ್ಕಟ್ಟಿನ ವಿಚಾರವಾಗಿ ಮಾತನಾಡಿದ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೆಂಗಳೂರಿನಲ್ಲಿ (Bengaluru) ನೀರಿನ ಕೊರತೆ ಇಲ್ಲ. ನಗರದಲ್ಲಿ ನೀರಿನ ಕೊರತೆಯ ಬಗ್ಗೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ನೀರಿನ ಬಿಕ್ಕಟ್ಟು ನಗರದಲ್ಲಿ ಎಷ್ಟು ಪರಿಣಾಮ ಬೀರಿದೆ ಎಂದರೆ ಬಹುರಾಷ್ಟ್ರೀಯ ಸಂಸ್ಥೆಗಳ ಅನೇಕ ಟೆಕ್ ಉದ್ಯೋಗಿಗಳು ಮೈಸೂರಿನಲ್ಲಿ ಆಶ್ರಯ ಪಡೆದಿರುವ ಬಗ್ಗೆ ವರದಿಯಾಗಿದೆ.
ಕೆಆರ್ ಪುರಂನ ಅಯ್ಯಪ್ಪ ನಗರದಲ್ಲಿ ವಾಸವಾಗಿರುವ ಸುಮಂತ ಎಂಬವರು, ಅಪಾರ್ಟ್ಮೆಂಟ್ನಲ್ಲಿ ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದ್ದು, ಮೂಲಭೂತ ಅವಶ್ಯಕತೆಗಳಿಗಾಗಿ ಹೆಣಗಾಡುತ್ತಿದ್ದೇವೆ ಎಂದು ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ನಗರದಲ್ಲಿನ ನೀರಿನ ಸಮಸ್ಯೆಯಿಂದಾಗಿ ತಾತ್ಕಾಲಿಕವಾಗಿ ಸ್ಥಳಾಂತರಗೊಂಡಿದ್ದೇವೆ. ಈ ಸ್ಥಿತಿಯಲ್ಲಿಯೂ ಸಹ ಫ್ಲಾಟ್‌ಗೆ ಮಾಸಿಕ 25 ಸಾವಿರ ರೂ.ಗಳ ಭಾರಿ ಬಾಡಿಗೆ ನೀಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಉದ್ಯೋಗದಾತರ ‘ನೋ ವರ್ಕ್ ಫ್ರಮ್ ಹೋಮ್’ ನೀತಿಯಿಂದ ಅವರ ಪರಿಸ್ಥಿತಿಯು ಕಷ್ಟಕರವಾಗಿ ಪರಿಣಮಿಸಿದೆ ಎಂದು ವರದಿ ಉಲ್ಲೇಖಿಸಿದೆ.
ಮತ್ತೊಬ್ಬ ಐಟಿ ಉದ್ಯೋಗಿ ಅನಿತಾ ಶ್ರೀನಿವಾಸ್ ಅವರು ಮುಂಬೈಗೆ ತೆರಳುವ ಮೂಲಕ ಪರಿಹಾರವನ್ನು ಕಂಡುಕೊಂಡಿದ್ದಾರೆ. ಅಲ್ಲಿ ಅವರು ಮತ್ತೊಂದು ಮನೆ ಹೊಂದಿರುವುದರಿಂದ ಅವರಿಗೆ ಅನುಕೂಲವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ನಡುವೆ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ನೀರಿನ ಕೊರತೆಯ ಬಗ್ಗೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಅವರು ಏನು ಬೇಕಾದರೂ ಮಾಡಲಿ, ಮೊದಲು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ ಮಹದಾಯಿ ಮತ್ತು ಮೇಕೆದಾಟು ಯೋಜನೆಗಳಿಗೆ ಅನುಮತಿ ನೀಡುವಂತೆ ಹೇಳಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಾ.12ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ
ಬೆಂಗಳೂರಿನಲ್ಲಿ ಹೇಳುವಷ್ಟೇನೂ ನೀರಿನ ಕೊರತೆ ಇಲ್ಲ, ಬಿಜೆಪಿಯವರು ಕೊರತೆಯನ್ನು ಸೃಷ್ಟಿಸಿದ್ದಾರೆ. ತಮಿಳುನಾಡಿಗೆ ಕಾನೂನಾತ್ಮಕವಾಗಿ ಕೇಳಿದ್ದನ್ನು ನಾವು ನೀಡುತ್ತಿದ್ದೇವೆ. ಬೆಂಗಳೂರಿಗೆ ನೀರು ಕೊಡುವುದು ನಮ್ಮ ಆದ್ಯತೆ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ.
ನಗರದಲ್ಲಿ ಸುಮಾರು 7 ಸಾವಿರ ಬೋರ್‌ವೆಲ್‌ಗಳ ಕೊರತೆಯಿದ್ದು, ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ