ಬೆಂಗಳೂರು ಉತ್ತರದಿಂದ ಸದಾನಂದ ಗೌಡ ಟಿಕೆಟ್ ಬೇಡಿಕೆಗೆ ಬಿಜೆಪಿ ವರಿಷ್ಠರು ಕೇಳಿದ ಪ್ರಶ್ನೆ ಹೀಗಿದೆ ನೋಡಿ!
ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಬಹಿರಂಗವಾಗಿ ಹೇಳಿದ್ದ ಡಿವಿ ಸದಾನಂದ ಗೌಡ ಈಗ ಟಿಕೆಟ್ ಆಕಾಂಕ್ಷಿಯಾಗಿರುವುದಕ್ಕೆ ಬಿಜೆಪಿ ಹೈಕಮಾಂಡ್ ಕಾರಣ ಕೇಳಿದೆ ಎನ್ನಲಾಗಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದರೆ ಅಂದು ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ್ದೇಕೆ ಎಂದು ಹೈಕಮಾಂಡ್ ರಾಜ್ಯ ನಾಯಕರನ್ನು ಪ್ರಶ್ನಿಸಿದೆ. ಈ ಮಧ್ಯೆ ಇನ್ನೂ ಕಲವು ಹೆಸರುಗಳು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕೇಳಿಬಂದಿವೆ. ಆ ವಿವರ ಇಲ್ಲಿದೆ.
ಬೆಂಗಳೂರು, ಮಾರ್ಚ್ 12: ಲೋಕಸಭೆ ಚುನಾವಣೆಗೆ (Lok sabha Elections 2024) ಅಭ್ಯರ್ಥಿ ಆಯ್ಕೆ ಸಂಬಂಧ ಹಾಗೂ ಬಿಜೆಪಿ ಎರಡನೇ ಪಟ್ಟಿ (BJP Candidate Second List) ಬಿಡುಗಡೆ ಸಂಬಂಧ ಸೋಮವಾರ ರಾತ್ರಿ ದೆಹಲಿಯಲ್ಲಿ ಸಭೆ ನಡೆಯಿತು. ಇದೇ ವೇಳೆ ಹಲವು ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ಗೆ ಮೂರನೇ ಬಾರಿಗೆ ಡಿವಿ ಸದಾನಂದ ಗೌಡ (DV Sadananda Gowda) ಆಕಾಂಕ್ಷಿಯಾಗಿರುವ ಬಗ್ಗೆ ಬಿಜೆಪಿ ವರಿಷ್ಠರು ಈ ಹಿಂದೆಯೇ ರಾಜ್ಯ ನಾಯಕರಿಗೆ ಪ್ರಶ್ನೆ ಕೇಳಿದ್ದಾರೆ ಎಂಬುದು ಈಗ ತಿಳಿದುಬಂದಿದೆ.
ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಸದಾನಂದ ಗೌಡ ಹೆಸರನ್ನು ವರಿಷ್ಠರ ಮುಂದೆ ರಾಜ್ಯ ನಾಯಕರು ಪ್ರಸ್ತಾಪ ಮಾಡಿದ್ದಾರೆ. ಇದೇ ವೇಳೆ ವರಿಷ್ಠರು ರಾಜ್ಯ ನಾಯಕರಿಗೆ, ‘ಸದಾನಂದ ಗೌಡರು ಸ್ಪರ್ಧೆ ಬಯಸುವುದಾದರೆ ಅಂದು ಚುನಾವಣಾ ನಿವೃತ್ತಿಯ ಬಗ್ಗೆ ಮಾತನಾಡಿದ್ದೇಕೆ’ ಎಂದು ಪ್ರಶ್ನಿಸಿದ್ದಾರೆ. ಕಳೆದ ವಾರ ನಡೆದಿದ್ದ ರಾಜ್ಯ ನಾಯಕರ ಜೊತೆಗಿನ ಎರಡನೇ ಸಭೆಯಲ್ಲಿ ವರಿಷ್ಠರು ಈ ರೀತಿ ಪ್ರಶ್ನೆ ಮಾಡಿದ್ದಾರೆ.
ಈ ಮಧ್ಯೆ, ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಅಭ್ಯರ್ಥಿಯಾಗುತ್ತಾರಾ ಎಂದು ಬಿಜೆಪಿಯೊಳಗೆ ಚರ್ಚೆ ಆರಂಭವಾಗಿದೆ. ನಂದೀಶ್ ರೆಡ್ಡಿ ಕೂಡಾ ಬೆಂಗಳೂರಿನ ಬಿಜೆಪಿ ಕೆಲವು ಮುಖಂಡರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂಬ ಮಾಹಿತಿ ಇದೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ, ‘ನೀವೇ ಅಭ್ಯರ್ಥಿಯಾದರೆ ಹೇಗೆ’ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ಹೈಕಮಾಂಡ್ ಪ್ರಶ್ನಿಸಿದೆ ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ: 18 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಅಂತಿಮ: ಕಗ್ಗಂಟಾಗಿ ಉಳಿದ 10 ಕ್ಷೇತ್ರಗಳು, ಕೆಲ ಹಾಲಿ ಎಂಪಿಗಳಿಗೆ ಟಿಕೆಟ್ ಡೌಟ್
ಕೆಲವು ತಿಂಗಳುಗಳ ಹಿಂದೆ ಹಾಸನದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಡಿವಿ ಸದಾನಂದ ಗೌಡ, ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಿದ್ದೇನೆ. ಹೊಸ ಮುಖಗಳಿಗೆ ಅವಕಾಶ ನೀಡಲು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿದ್ದರು. ಆದರೆ, ಅದಾಗಿ ಕೆಲವು ದಿನಗಳ ನಂತರ ದಿಢೀರ್ ಆಗಿ, ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದರು. ಲೋಕಸಭೆ ಚುನಾವಣೆಗೆ ಕೆಲವೇ ದಿನಗಳಿರುವ ಈ ಹೊತ್ತಿನಲ್ಲಿ ಕೆಲವು ದಿನಗಳ ಹಿಂದೆ ಮಾತನಾಡಿದ್ದ ಅವರು, ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಟಿಕೆಟ್ ಕೊಡದಿದ್ದರೆ ನೋವಾಗುತ್ತದೆ. ಇನ್ನೂ 10 ವರ್ಷ ರಾಜಕೀಯ ಮಾಡುವ ಕಸುವು ನನ್ನಲ್ಲಿದೆ ಎಂದು ಹೇಳಿದ್ದರು. ಇದು ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ