ಬೆಂಗಳೂರಿನ ಸ್ಮಶಾನಗಳಲ್ಲೂ ನೀರಿಲ್ಲ; ಅಂತ್ಯ ಸಂಸ್ಕಾರ ಮಾಡಲಾಗದೆ ಪರದಾಟ

ಬೆಂಗಳೂರಿನಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಹನಿ ನೀರಿಗೂ ಜನ ಪರದಾಡುತ್ತಿದ್ದಾರೆ.ಮತ್ತೊಂದೆಡೆ ಸ್ಮಶಾನದಲ್ಲೂ ನೀರಿಲ್ಲ. ಹೀಗಾಗಿ ಶವ ಸಂಸ್ಕಾರ ಮಾಡಲಾಗದೆ ಮೃತ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮಣ್ಣಿನ ಮಡಿಕೆಯಲ್ಲಿ ನೀರನ್ನು ತುಂಬಿ ಕುಡಿಕೆ ಹೊಡೆಯುವುದಕ್ಕೂ ನೀರಿಲ್ಲ. ನಗರದ ಪಮುಖ ಸ್ಮಶಾನಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ.

ಬೆಂಗಳೂರಿನ ಸ್ಮಶಾನಗಳಲ್ಲೂ ನೀರಿಲ್ಲ; ಅಂತ್ಯ ಸಂಸ್ಕಾರ ಮಾಡಲಾಗದೆ ಪರದಾಟ
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on: Mar 12, 2024 | 10:33 AM

ಬೆಂಗಳೂರು, ಮಾರ್ಚ್.12: ಬೆಂಗಳೂರಿನಲ್ಲಿ ಹನಿ ನೀರಿಗೂ ಪರದಾಡುವಂತಾಗಿದೆ (Drinking Water Crisis). ಜೀವಜಲಕ್ಕಾಗಿ ಜನ ಪ್ರತಿ ದಿನ ಹೋರಾಡ್ತಿದ್ದಾರೆ.‌ ಸಿಲಿಕಾನ್ ಸಿಟಿಗೆ (Bengaluru) ಎದುರಾಗಿರುವ ಭೀಕರ ಬರದ ಎಫೆಕ್ಟ್ ಐಪಿಎಲ್‌ ಟೂರ್ನಿಗೂ ತಟ್ಟುವ ಆತಂಕ ಮೂಡಿದೆ. ಮಾರ್ಚ್ 29ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಮ್ಯಾಚ್ (IPL Match) ಬೇರೆ ಕಡೆಗೆ ಶಿಫ್ಟ್ ಮಾಡಿ ಎಂಬ ಆಗ್ರಹ ಕೇಳಿಬಂದಿದೆ. ತಮ್ಮ ಊರುಗಳಿಗೆ ತೆರಳಲು ಟೆಕ್ಕಿಗಳು ವರ್ಕ್ ಫ್ರಂ ಹೋಂಗೆ ಬೇಡಿಕೆ ಇಟ್ಟಿದ್ದಾರೆ. ಇದೆಲ್ಲ ಒಂದು ಕಡೆಯಾದ್ರೆ ನೀರಿನ ಅಭಾವ ಎಷ್ಟರ ಮಟ್ಟಿಗೆ ಇದೆಯಂದ್ರೆ ಅಂತ್ಯಸಂಸ್ಕಾರಕ್ಕೂ ಸ್ಮಶಾನಗಳಲ್ಲಿ ನೀರು ಇಲ್ಲ.

ಬೆಂಗಳೂರಿನ ಕ್ರಿಮಿಟೋರಿಯಂಗಳಲ್ಲಿ ಜಲಕಂಟಕ ಎದುರಾಗಿದೆ. ಸತ್ತವರ ಅಂತಿಮ ಪೂಜಾ ವಿಧಿವಿಧಾನಗಳನ್ನ ನೆರವೇರಿಸಲು ಸಂಬಂಧಿಕರು ಪರದಾಡುತ್ತಿದ್ದಾರೆ. ಮೃತಪಟ್ಟವರನ್ನು ಸ್ಮಶಾನದಲ್ಲಿ ತಂದು ಅಂತಿಮ ಪೂಜಾ ವಿಧಾನಗಳನ್ನು ಮಾಡುವ ವೇಳೆ ಮಣ್ಣಿನ ಮಡಿಕೆಯಲ್ಲಿ ನೀರನ್ನು ತುಂಬಿ ಕುಡಿಕೆ ಹೊಡೆಯಲು ನೀರಿಲ್ಲ. ಅಲ್ಲದೆ ಕೆಲವೊಂದು ಸಂಪ್ರದಾಯಗಳಲ್ಲಿ ಶವವನ್ನು ಮನೆಯಿಂದ ಸ್ಮಶಾನಕ್ಕೆ ತಂದು ಅಲ್ಲಿ ಸ್ನಾನ ಮಾಡಿಸಿ ಪೂಜೆ ಮಾಡಲಾಗುತ್ತದೆ ನಂತರ ಅಂತಿಮ ದರ್ಶನಕ್ಕೆ ಬಂದವರು ಕೈ ಕಾಲು ತೊಳೆದುಕೊಂಡು ಹೋಗುವುದು ಪದ್ದತಿ. ಆದರೆ ಸ್ಮಶಾನಗಳಲ್ಲಿ ನೀರು ಸಿಗದ ಕಾರಣ ಶವಕ್ಕೆ ಸ್ನಾನ ಮಾಡಿಸಲು ಆಗುತ್ತಿಲ್ಲ. ಯಾವುದೇ ಪೂಜಾ ವಿಧಿವಿಧಾನಗಳನ್ನು ಮಾಡಲು ಆಗ್ತಿಲ್ಲ. ಇದರಿಂದ ಮೃತರ ಕುಟುಂಬದವರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಸರಿಯಾಗಿ ಶವ ಸಂಸ್ಕಾರ ಮಾಡಲಾಗದೆ ಕಂಗಾಲಾಗಿದ್ದಾರೆ. ರಾಜಾಜಿನಗರದ ಹರಿಶ್ಚಂದ್ರ ಘಾಟ್, ಸುಮ್ಮನಹಳ್ಳಿ ಸ್ಮಶಾನ, ವಿಲ್ಸನ್ ಗಾರ್ಡನ್ ಹಾಗೂ ಚಾಮರಾಜಪೇಟೆಯ ಟಿ.ಆರ್ ಮಿಲ್ ಸ್ಮಶಾನದಲ್ಲಿ ನೀರಿಗೆ ಅಭಾವ ಎದುರಾಗಿದೆ.

ಇದನ್ನೂ ಓದಿ: Bengaluru Water Crisis: ನೀರಿನ ಬಿಕ್ಕಟ್ಟಿಗೆ ಬೇಸತ್ತು ಬೆಂಗಳೂರಿನಿಂದ ಊರಿಗೆ ತೆರಳುತ್ತಿರುವ ಟೆಕ್ಕಿಗಳು!

ಮತ್ತೆ ವರ್ಕ್ ಫ್ರಂ ಹೋಂಗೆ ಟೆಕ್ಕಿಗಳ ಬೇಡಿಕೆ

ಅಪಾರ್ಟ್ಮೆಂಟ್‌ನಲ್ಲಿರುವ ಟೆಕ್ಕಿಗಳಿಗೂ ನೀರಿನ ಎಫೆಕ್ಟ್ ತಟ್ಟಿದೆ. ವರ್ಕ್ ಫ್ರಂ ಹೋಂಗೆ ಬೇಡಿಕೆ ಆರಂಭವಾಗಿದೆ. ಬೇಸಿಗೆ ಮುಗಿಯೋವರೆಗೂ ಊರಿಗೆ ತೆರಳಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಸದ್ಯ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿದೆ. ಎಕ್ಸಾಂ ಮುಗಿದ‌ ನಂತರ ಏಪ್ರಿಲ್ ನಿಂದ ಬಹುತೇಕ ಐಟಿ ಉದ್ಯೋಗಿಗಳು ಊರಿನಿಂದಲೇ ಕೆಲಸ ನಿರ್ವಹಿಸಲು ನಿರ್ಧರಿಸಿದ್ದಾರಂತೆ. ಕೆಲ ಕಂಪನಿಗಳು ವರ್ಕ್ ಫ್ರಂ ಹೋಮ್ ಸೌಲಭ್ಯ ನೀಡುವ ಬಗ್ಗೆ ಬೋರ್ಡ್ ಮೀಟಿಂಗ್‌ನಲ್ಲಿ ಚರ್ಚೆ ಮಾಡಿ ತಿಳಿಸೋದಾಗಿ ಟೆಕ್ಕಿಗಳಿಗೆ ಹೇಳಿವೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ