ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಗಲಾಟೆ: ಆರೋಪಿ ನಾಶಿಪುಡಿಗೂ ಇದಕ್ಕೂ ಸಂಬಂಧವಿಲ್ಲ; ಪರಮೇಶ್ವರ್
ವಿಶ್ವಪ್ರಸಿದ್ಧ ಬ್ಯಾಡಗಿ ಮೆಣಸಿಕಾಯಿ ಮಾರುಕಟ್ಟೆ ಮೆಣಸಿನಕಾಯಿ ದರ ಧಿಡೀರನೆ ಕುಸಿತವಾಗಿದ್ದು, ಕಳೆದ ವಾರ ಒಂದು ಕ್ವಿಂಟಾಲ್ 20 ಸಾವಿರವಿದ್ದ ಮೆಣಸಿನಕಾಯಿ ದರ, ಇದೀಗ ಧಿಡೀರನೆ 12 ಸಾವಿರಕ್ಕೆ ಇಳಿಕೆಯಾಗಿದೆ. ಇದರಿಂದ ಬೇಸರ, ಆಕ್ರೋಶಗೊಂಡ ರೈತರು ಅಧಿಕಾರಿಗಳಿಗೆ ಖಾರ ಅರೆದಿದ್ದಾರೆ.
ಬೆಂಗಳೂರಿನ, ಮಾರ್ಚ್ 12: ಹಾವೇರಿಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ (Byadgi Menasinakai Market) ಗಲಾಟೆ ಯಾರು ಮಾಡಿದರು ಅಂತ ವಿಚಾರಣೆ ನಡೆಯುತ್ತಿದೆ. ಕರ್ನಾಟಕ ಮತ್ತು ನೆರೆಯ ಆಂಧ್ರಪ್ರದೇಶದ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬ್ಯಾಡಗಿ ಮಾರುಕಟ್ಟೆಗೆ ಆಗಮಿಸಿದ್ದು, ಮೆಣಸಿನಕಾಯಿ ಬೆಲೆಯಲ್ಲಿ ದಿಢೀರ್ ಕುಸಿತ ಕಂಡು ಆಘಾತಕ್ಕೊಳಗಾಗಿದ್ದಾರೆ. ಇದರಿಂದ ನಿನ್ನೆ (ಮಾ.11) ರಂದು ಘಟನೆಯಲ್ಲಿ 6-7 ಗಾಡಿಗಳನ್ನು ಸುಟ್ಟು ಹಾಕಿದ್ದಾರೆ. ಏಕಾಏಕಿ ದರ ಅಷ್ಟು ಯಾಕೆ ಕುಸಿದಿದೆ ಅಂತ ಗೊತ್ತಿಲ್ಲ. ಇದನ್ನ ತನಿಖೆ ಮಾಡಿ ತಿಳಿಸಿ ಅಂತ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parmeshwar) ಹೇಳಿದರು.
ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದಡಿ ಬಂಧಿತವಾಗಿರುವ ನಾಶಿಪುಡಿಗೂ ಮತ್ತು ಈ ಘಟನೆಗೂ ಸಂಬಂಧವಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಬೆಂಗಳೂರಿನಲ್ಲಿ ಉತ್ತರಿಸಿದ ಅವರು, ಅದಕ್ಕೂ, ಇದಕ್ಕೂ ಸಂಬಂಧ ಇಲ್ಲ. ಯಾರು ಕಾರಣ ಅಂತ ಕಂಡುಹಿಡಿಯಬೇಕಿದೆ. ಇವತ್ತಿನಿಂದ ಎಲ್ಲ ಪ್ರಕ್ರಿಯೆ ಮತ್ತೆ ಆರಂಭವಾಗುತ್ತದೆ ಎಂದರು.
ಇನ್ನು ಬಾಂಬ್ ಸ್ಫೋಟದ ಆರೋಪಿ ಮಲೆನಾಡಿನ ವ್ಯಕ್ತಿ ಎಂಬ ಶಂಕೆ ವ್ಯಕ್ತವಾದ ವಿಚಾರವಾಗಿ ಮಾತನಾಡಿದ ಅವರು, ನಾನು ಮಾಧ್ಯಮಗಳಲ್ಲಿ ನೋಡಿದೆ. ಕರ್ನಾಟಕದವನು ಎಂಬುವುದು ಊಹಾಪೋಹ. ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದಾಗ ಸತ್ಯ ಗೊತ್ತಾಗುತ್ತದೆ ಎಂದರು.
ಇದನ್ನೂ ಓದಿ: ಬ್ಯಾಡಗಿ ಮೆಣಸಿನಕಾಯಿ ದರ ಕುಸಿತ: ಅಧಿಕಾರಿಗಳ ವಿರುದ್ಧ ಖಾರವಾದ 25 ರೈತರು ಪೊಲೀಸರ ವಶಕ್ಕೆ
ಕೇಂದ್ರ ಸರ್ಕಾರ ಸಿಎಎ ಜಾರಿ ಮಾಡಲು ಮುಂದಾಗಿರುವ ವಿಚಾರವಾಗಿ ಮಾತನಾಡಿದ ಅವರು, ರಾಜಕೀಯ ಕಾರಣಕ್ಕೆ ಮಾಡಿದ್ದಾರೆ ಎಂದು ಒಂದು ವಾದವಿದೆ. ಮಾಹಿತಿ ಸಿಕ್ಕಿದಾಗ ಮಾತಾಡಬಹುದು. ನಿಯಮಗಳ ಮೇಲೆ ಪ್ರತಿಕ್ರಿಯಿಸಬಹುದು ಎಂದು ಹೇಳಿದರು.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, 21 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಭೆ ಮಾಡಿದರು. ಆದರೆ ಎಷ್ಟು ಕ್ಷೇತ್ರಗಳಿಗೆ ಕ್ಲಿಯರ್ ಆಗಿದೆ ಗೊತ್ತಿಲ್ಲ. ಇಂದೂ ಸಭೆ ಮಾಡುವುದಾಗಿ ತಿಳಿಸಿದ್ದಾರೆ. ಇಂದು ಕ್ಲಿಯರ್ ಆದರೆ ದೆಹಲಿಗೆ ಪಟ್ಟಿ ತೆಗೆದುಕೊಂಡು ಹೋಗುತ್ತಾರೆ. ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆಯಿಲ್ಲ. ಹೆಚ್ಚು ಆಕಾಂಕ್ಷಿಗಳು ಇದ್ದಾಗ ಸಮಯ ತೆಗೆದುಕೊಳ್ಳುತ್ತಾರೆ. ಎಲ್ಲಾ ಪಕ್ಷಗಳಂತೆ ನಮ್ಮ ಪಕ್ಷದಲ್ಲೂ ಒಂದಿಷ್ಟು ಗೊಂದಲ ಇರುತ್ತೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:25 am, Tue, 12 March 24