Bengaluru Weather: ಕರ್ನಾಟಕದಲ್ಲಿ ತಗ್ಗಿದ ಮಳೆಯ ಅಬ್ಬರ; ಬೆಂಗಳೂರಿನಲ್ಲಿ ಇಂದು ವಿಪರೀತ ಚಳಿ ಸಾಧ್ಯತೆ

| Updated By: ಸುಷ್ಮಾ ಚಕ್ರೆ

Updated on: Nov 18, 2022 | 6:50 AM

Karnataka Rain Updates: ಈ ವಾರದಲ್ಲಿ ಸಿಲಿಕಾನ್ ಸಿಟಿಯಲ್ಲಿ ಮುಂಜಾನೆಯಿಂದಲೇ ಚಳಿಯ ವಾತಾವರಣವಿದ್ದು, ಇಂದು ಕೂಡ ಮಂಜು ಮುಸುಕಿದ ವಾತಾವರಣ ಮುಂದುವರೆಯುವ ಸಾಧ್ಯತೆಯಿದೆ.

Bengaluru Weather: ಕರ್ನಾಟಕದಲ್ಲಿ ತಗ್ಗಿದ ಮಳೆಯ ಅಬ್ಬರ; ಬೆಂಗಳೂರಿನಲ್ಲಿ ಇಂದು ವಿಪರೀತ ಚಳಿ ಸಾಧ್ಯತೆ
ಮಳೆ
Follow us on

ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದ (Karnataka Rains) ಅನೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಆದರೆ, ಬೆಂಗಳೂರಿನಲ್ಲಿ ಚಳಿ ಹೆಚ್ಚಾಗಿದೆ. ಈ ವಾರದಲ್ಲಿ ಸಿಲಿಕಾನ್ ಸಿಟಿಯಲ್ಲಿ (Bangalore Weather) ಮುಂಜಾನೆಯಿಂದಲೇ ಚಳಿಯ ವಾತಾವರಣವಿದ್ದು, ಇಂದು ಕೂಡ ಮಂಜು ಮುಸುಕಿದ ವಾತಾವರಣ ಮುಂದುವರೆಯುವ ಸಾಧ್ಯತೆಯಿದೆ. ಬೆಂಗಳೂರು ಹವಾಮಾನ ವರದಿ ಪ್ರಕಾರ, ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ದಟ್ಟವಾದ ಮಂಜು ಕವಿದ ವಾತಾವರಣ ಹಾಗೂ ಕಡಿಮೆ ತಾಪಮಾನ ದಾಖಲಾಗುವ ಸಾಧ್ಯತೆ ಇದೆ.

ಗುರುವಾರ ಬೆಳಗ್ಗೆ ಬೆಂಗಳೂರಿನಲ್ಲಿ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಇಂದು ಈ ಪ್ರಮಾಣ ಮತ್ತಷ್ಟು ಕಡಿಮೆಯಾಗಿ, 17 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರಲಿದೆ. ಶನಿವಾರ ವಾತಾವರಣ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ. ಕರ್ನಾಟಕದಲ್ಲಿ ಹಿಂಗಾರು ಮಳೆ ಶುರುವಾಗಿದ್ದು, ಸಾಮಾನ್ಯವಾಗಿ ಹಿಂಗಾರು ಮಳೆಯ ಕಾಲದಲ್ಲಿ ಕಡಿಮೆ ಚಳಿ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಮಬ್ಬು ವಾತಾವರಣ ಇರುತ್ತದೆ. ಡಿಸೆಂಬರ್ ಮಧ್ಯಭಾಗದಿಂದ ಸುಮಾರು 2 ತಿಂಗಳು ಅತ್ಯಧಿಕ ಚಳಿ, ಮಂಜು ಕಂಡು ಬರಲಿದೆ. ಆದರೆ, ಈ ಬಾರಿ ಹವಾಮಾನ ವೈಪರೀತ್ಯಗಳಿಂದಾಗಿ ಮಳೆಯ ಜೊತೆ ಜೊತೆಗೆ ಚಳಿ ಕೂಡ ಆವರಿಸಿದೆ.

ಕಳೆದ 1 ವಾರದಲ್ಲಿ 2 ಬಾರಿ ವಾಯುಭಾರ ಕುಸಿತ ಸಂಭವಿಸಿತ್ತು. ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತವು ತಮಿಳುನಾಡು ಪುದುಚೇರಿ ಮಾರ್ಗವಾಗಿ ಸಾಗಿ ಅರಬ್ಬಿ ಸಮುದ್ರದಲ್ಲಿ ಕೊನೆಗೊಂಡಿತ್ತು. ಇದರಿಂದಾಗಿ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ ಶುರುವಾಗಿತ್ತು. ಮಳೆಯಾದ ಕೆಲವೇ ದಿನಗಳಲ್ಲಿ ಇದೀಗ ಮಂಜು, ಚಳಿ ಕಂಡು ಬಂದಿದೆ.

ಇದನ್ನೂ ಓದಿ: Karnataka Rain: ಕರ್ನಾಟಕದಲ್ಲಿ ಮತ್ತೆ ವರುಣನ ಅಬ್ಬರ; ಮಲೆನಾಡು, ಕರಾವಳಿಯಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲುಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ಪ್ರಕಾರ, ರಾಜ್ಯದ ಶೇ.75ರಷ್ಟು ಭೂ ಪ್ರದೇಶದಲ್ಲಿ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ದಾಖಲಾಗಿದೆ. ಬೀದರ್‌ನಲ್ಲಿ 11 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿರುವುದು ರಾಜ್ಯದ ಕನಿಷ್ಠ ತಾಪಮಾನವಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಮೈಸೂರು, ಮಂಡ್ಯ, ಕೊಪ್ಪಳ, ಬಳ್ಳಾರಿ, ರಾಯಚೂರು, ಬೀದರ್‌, ಕಲಬುರಗಿ, ಬೆಳಗಾವಿ, ಯಾದಗಿರಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಕಡೆ ತೇವಾಂಶ ಹೆಚ್ಚಿರುವುದರಿಂದ ಚಳಿ ಹೆಚ್ಚಾಗಿದೆ.

ಇಂದು ಯಾವ ರಾಜ್ಯಗಳಲ್ಲಿ ಮಳೆ?:
ಇಂದು ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕೇರಳ, ಪುದುಚೇರಿ ಮತ್ತು ಆಂಧ್ರಪ್ರದೇಶಗಳಿಗೆ ಹವಾಮಾನ ಇಲಾಖೆ ಹಳದಿ ಅಲರ್ಟ್​ ನೀಡಿದೆ. ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುತ್ತಿದೆ. ನವೆಂಬರ್ 19 ಮತ್ತು 20ರಂದು ಪಶ್ಚಿಮ ಬಂಗಾಳ ಕೊಲ್ಲಿ ಮತ್ತು ಶ್ರೀಲಂಕಾ ಕರಾವಳಿಯಲ್ಲಿ ಮಳೆ ಹೆಚ್ಚಾಗಲಿದೆ. ನವೆಂಬರ್ 19, 20, ಮತ್ತು 21ರಂದು ಆಂಧ್ರಪ್ರದೇಶ, ತಮಿಳುನಾಡು ಮತ್ತು ಪುದುಚೇರಿ ಕರಾವಳಿಯಲ್ಲಿ ಮಳೆಯಾಗಲಿದೆ.

ಇದನ್ನೂ ಓದಿ: Karnataka Rain: ಕರ್ನಾಟಕದ 20 ಜಿಲ್ಲೆಗಳಲ್ಲಿ ಇಂದು ಧಾರಾಕಾರ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ಇಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಗುಡುಗು ಸಹಿತ ಮಳೆಯ ನಿರೀಕ್ಷೆಯಿದೆ. ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಮಿಂಚು ಸಹಿತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇಂದು ಮುಂಜಾನೆ ಕೇರಳ ಮತ್ತು ಕರ್ನಾಟಕದ ನೈಋತ್ಯ ಕರಾವಳಿಯಲ್ಲಿ ಮಂಜು ಬೀಳುವ ಸಾಧ್ಯತೆ ಇದೆ. ಜಮ್ಮು, ಕಾಶ್ಮೀರ, ಲಡಾಖ್, ಗಿಲ್ಗಿಟ್- ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್‌ನಲ್ಲಿ ಚದುರಿದ ಮಳೆ ಬೀಳುವ ಸಾಧ್ಯತೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ