ಬೆಂಗಳೂರು ನಗರ ಸೇರಿ ವಿವಿಧ ಜಿಲ್ಲೆಗಳಲ್ಲಿ ಇನ್ನೂ ಐದು ದಿನ ಮಳೆ; ಹವಾಮಾನ ಇಲಾಖೆ ಮಾಹಿತಿ
ಮೇಲ್ಮೈ ಸುಳಿಗಾಳಿಯ ಕಾರಣದಿಂದ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ತಜ್ಞ ಪ್ರಸಾದ್ ಹೇಳಿದ್ದಾರೆ.
ಬೆಂಗಳೂರು: ಆಂಧ್ರ ಪ್ರದೇಶದ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಕರ್ನಾಟಕದ (Karnataka Weather) ವಿವಿಧ ಜಿಲ್ಲೆಗಳಲ್ಲಿ ಇನ್ನೂ ಐದು ದಿನ ಮಳೆ ಮುಂದುವರಿಯಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ರಾಮನಗರ, ಮಂಡ್ಯ, ಮೈಸೂರು, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಕೇರಳದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಇಂದೂ ಮುಂದುವರಿಯಲಿದ್ದು, ಕೆಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕ ಮತ್ತು ಕೇರಳ ರಾಜ್ಯದ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಅಸಾನಿ ಚಂಡಮಾರುತದ ತೀವ್ರತೆ ಕಡಿಮೆಯಾಗಿದೆ. ಆದರೂ ಮೇಲ್ಮೈ ಸುಳಿಗಾಳಿಯ ಕಾರಣದಿಂದ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ತಜ್ಞ ಪ್ರಸಾದ್ ಹೇಳಿದ್ದಾರೆ.
ಕಾವೇರಿ ಜಲಾನಯನ (Cauvery Basin) ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ 14 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕೆಆರ್ಎಸ್ ಜಲಾಶಯದಲ್ಲಿ ಮೇ ತಿಂಗಳಲ್ಲಿಯೇ 100 ಅಡಿ ನೀರು ಸಂಗ್ರಹವಾಗಿದೆ. ಇದೊಂದು ದಾಖಲೆ ಎನಿಸಿದೆ. ಈ ಹಿಂದೆ, 2008ರಲ್ಲಿ ಮೇ ತಿಂಗಳಲ್ಲಿ ಇಷ್ಟು ನೀರು ಸಂಗ್ರಹವಾಗಿತ್ತು. ಜಲಾಶಯದ ನೀರಿನ ಮಟ್ಟ ಏರಿಕೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಕೆಆರ್ಎಸ್ ಜಲಾಶಯದ ನೀರಿನ ಸಾಮರ್ಥ್ಯ 124.80 ಅಡಿಗಳು. ಕೆಆರ್ಎಸ್ ಜಲಾಶಯದ ಇಂದಿನ ಮಟ್ಟ 100.02 ಅಡಿ. ಕೆಆರ್ಎಸ್ ಜಲಾಶಯಕ್ಕೆ 1,171 ಕ್ಯೂಸೆಕ್ ಒಳಹರಿವು ಇದ್ದು, ಜಲಾಶಯದಿಂದ 1,061 ಕ್ಯೂಸೆಕ್ ಹೊರಹರಿವು ಇದೆ.
ಪ್ರಮುಖ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:50 am, Mon, 16 May 22