ಮದರಸಾಗಳಲ್ಲಿ ಕಡ್ಡಾಯ ರಾಷ್ಟ್ರಗೀತೆಗೆ ಶಾಸಕ ಹ್ಯಾರಿಸ್ ವಿರೋಧ: ಮೇ 25ಕ್ಕೆ ವಕ್ಫ್​ ಮಂಡಳಿಯಿಂದ ಮಹತ್ವದ ಸಭೆ

ಮದರಸಾಗಳಲ್ಲಿ ಕಡ್ಡಾಯ ರಾಷ್ಟ್ರಗೀತೆಗೆ ಶಾಸಕ ಹ್ಯಾರಿಸ್ ವಿರೋಧ: ಮೇ 25ಕ್ಕೆ ವಕ್ಫ್​ ಮಂಡಳಿಯಿಂದ ಮಹತ್ವದ ಸಭೆ
ಸಾಂದರ್ಭಿಕ ಚಿತ್ರ

ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವ ಕುರಿತು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

May 16, 2022 | 8:03 AM

ಬೆಂಗಳೂರು: ಮುಸ್ಲಿಂ ಧಾರ್ಮಿಕ ಶಿಕ್ಷಣ ಕೇಂದ್ರಗಳೆನಿಸಿರುವ ಮದರಸಾಗಳಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಬೇಕು ಎನ್ನುವ ಸರ್ಕಾರದ ಸೂಚನೆಯ ಕುರಿತು ಚರ್ಚಿಸಲು ಮೇ 25ರಂದು ವಕ್ಫ್​ ಮಂಡಳಿಯು ಮಹತ್ವದ ಸಭೆ ಕರೆದಿದೆ. ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವ ಕುರಿತು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಸಭೆಯಲ್ಲಿ ಮದರಸಾಗಳ ನಿರ್ವಾಹಕರು, ಸಮುದಾಯದ ಮುಖಂಡರು, ವಕ್ಫ್ ಬೋರ್ಡ್​ ಅಧ್ಯಕ್ಷರು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.

ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಕ್ಕೆ ಒತ್ತಾಯಪಡಿಸುವುದು ತಪ್ಪು ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಹೇಳಿದರು. ಹಿಂದುತ್ವ ಪರ ಸಂಘಟನೆಗಳ ವಿರುದ್ಧ ಹರಿಹಾಯ್ದ ಅವರು, ಮದರಸಾಗಳಲ್ಲಿ ಯಾಕೆ ಪ್ರತಿದಿನವೂ ರಾಷ್ಟ್ರಗೀತೆ ಹಾಡಬೇಕು ಎಂದು ಒತ್ತಾಯಿಸುತ್ತೀರಿ? ಯಾವುದನ್ನ ಯಾವಾಗ ಹಾಡಬೇಕೋ ಅವಾಗ ಹಾಡ್ತಾರೆ ಎಂದು ರಾಷ್ಟ್ರಗೀತೆ ಕಡ್ಡಾಯಗೊಳಿಸುವುದನ್ನು ವಿರೋಧಿಸಿದರು.

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವಾಗ ಎಲ್ಲರೂ ಎದ್ದು ನಿಲ್ಲುತ್ತಾರೆ. ಯಾವಾಗ ಯಾರು ಏನು ಮಾಡಬೇಕು ಎನ್ನುವುದು ಎಲ್ಲರಿಗೂ ಗೊತ್ತಿದೆ. ರಾಷ್ಟ್ರಗೀತೆಗೆ ಗೌರವ ಕೊಡಿ ಎಂದು ಹೇಳಲು ಇವರು ಯಾರು? ಮೊದಲು ಆರ್​​ಎಸ್​ಎಸ್​ ಕಚೇರಿಯಲ್ಲಿ ರಾಷ್ಟ್ರಗೀತೆ ಆರಂಭಿಸಲಿ. ರಾಷ್ಟ್ರಧ್ವಜ ಹಾರಿಸಿ, ಅದನ್ನು ಆರ್​​ಎಸ್​ಎಸ್ ಕಚೇರಿಯಲ್ಲಿಟ್ಟು ಗೌರವಿಸಲಿ. ಆಮೇಲೆ ಊರಿನವರಿಗೆಲ್ಲ ಉಪದೇಶ ಮಾಡಲಿ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಇಂಥ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ರಾಜ್ಯದ ಜನರಿಗೆ ಇವರ ಬಗ್ಗೆ ಚೆನ್ನಾಗಿ ಗೊತ್ತಾಗಿದೆ. ಮುಂದಿನ ಚುನಾವಣೆಗಳಲ್ಲಿ ನೂರಕ್ಕೆ ನೂರು ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಮದರಸಾಗಳಲ್ಲಿ ರಾಷ್ಟ್ರಗೀತೆಗೆ ಒತ್ತಾಯ

ರಾಜ್ಯದಲ್ಲಿ ಆಜಾನ್ ವಿವಾದ ಬೆನ್ನಲೆ ಹಿಂದೂಪರ ಸಂಘಟನೆಗಳು ಮತ್ತೊಂದು ಅಭಿಯಾನ ಶುರು ಮಾಡಿವೆ. ರಾಜ್ಯದ ಮದರಸಗಳಲ್ಲಿ (Madrasa) ರಾಷ್ಟ್ರಗೀತೆ (National Anthem) ಕಡ್ಡಾಯ ಮಾಡುವಂತೆ ಒತ್ತಾಯಿಸಿ ಅಭಿಯಾನ ಕೈಗೊಂಡಿದೆ. ಯುಪಿ ಮಾದರಿಯಲ್ಲಿ ಮದರಸಗಳಲ್ಲಿ ತರಗತಿಗೂ ಮುನ್ನ ರಾಷ್ಟ್ರಗೀತೆ ಹಾಡಬೇಕು. ಇದೇ ಮಾದರಿ ರಾಜ್ಯದಲ್ಲೂ ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತಿವೆ. ರಾಜ್ಯದಲ್ಲಿ 968 ಮದರಸಾಗಳು ಸರ್ಕಾರದ ಅನುದಾನ ಪಡೆಯುತಿದ್ದು, 394 ಮದರಸಾಗಳು ವಕ್ಫ್ ಬೋರ್ಡ್​ಗೆ ಸೇರ್ಪಡೆ ಆಗುತ್ತಿವೆ. ಇದನ್ನ ಹೊರತುಪಡಿಸಿ ಉಳಿದ ಮದರಸಾಗಳಿಗೆ ಅನ್ವಯ ಆಗುವಂತೆ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡುವಂತೆ ಆದೇಶ ಹೊರಡಿಸಬೇಕೆಂದು ಅಭಿಯಾನ ಕೈಗೊಂಡಿವೆ.

ಸದ್ಯ ಮದರಸಗಳಲ್ಲಿ ನಿತ್ಯ ರಾಷ್ಟ್ರಗೀತೆ ಹಾಡಲ್ಲ. ಹಮ್ದ್ ಹಾಗೂ ಸಲಾಂ ಪ್ರಾರ್ಥನೆ ಮಾತ್ರ ಮಾಡಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಗೀತೆ ಹಾಡಲಾಗುತ್ತದೆ ಎಂದು ಮದರಸಾಗಳು ಹೇಳುತ್ತಿವೆ. ಆದರೆ ಇದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ಆರೋಪ ಮಾಡುತ್ತಿರುವ ಹಿಂದೂಪರ ಸಂಘಟನೆಗಳು, ತರಗತಿ ಆರಂಭಕ್ಕೂ ಮುನ್ನಾ ರಾಷ್ಟ್ರಗೀತೆ ಗಾಯನ ಕಡ್ಡಾಯಕ್ಕೆ ಪಟ್ಟು ಬಿದ್ದಿವೆ.

ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿದ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ಮಸೀದಿ ನಿರ್ವಹಣೆಗಾಗಿ ಉತ್ತರ ಪ್ರದೇಶ ಸರ್ಕಾರದ ಬೋರ್ಡ್ ಇದೆ. ಅನೇಕತೆಯಲ್ಲಿ ಏಕತೆಯನ್ನು ಬಿಂಬಿಸುವ ದೇಶ ಭಾರತ. ಅನೇಕ ಸಮಸ್ಯೆಗಳು ಬರುತ್ತವೆ. ಆದರೆ ಈ ಒಂದು ಈ ವಿಷಯದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಬೇಕಾಗುತ್ತದೆ. ಉತ್ತರ ಪ್ರದೇಶದಲ್ಲಿ ಮಾಡಿದ್ದಾರೆ ಅಂತ ಇಲ್ಲಿ ಗಡಿಬಿಡಿಯಲ್ಲಿ ಎನು ಮಾಡಲಿಕ್ಕೆ ಆಗಲ್ಲ. ಸಚಿವರ ಅಭಿಪ್ರಾಯ ಪಡೆದು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada