ಬೆಂಗಳೂರಿನಲ್ಲಿ ಸೈರನ್ ಹಾಕಿದ್ರೂ ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ವೀಲಿಂಗ್ ಮಾಡಿ ಪುಂಡಾಟಿಕೆ

ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ಬೈಕ್ ಸವಾರರ ಅಪಾಯಕಾರಿ ವೀಲಿಂಗ್ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರೋಗಿಯೊಬ್ಬರನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್ ತಡೆದು, ಅಪಾಯಕಾರಿ ಸ್ಟಂಟ್ ಪ್ರದರ್ಶಿಸಿದ ಪುಂಡರ ಕೃತ್ಯ ಕೊಲೆ ಯತ್ನಕ್ಕೆ ಸಮಾನ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸಿಸಿಟಿವಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇದು ರಸ್ತೆ ಸುರಕ್ಷತೆಯ ಗಂಭೀರ ಉಲ್ಲಂಘನೆಯಾಗಿದೆ.

ಬೆಂಗಳೂರಿನಲ್ಲಿ ಸೈರನ್ ಹಾಕಿದ್ರೂ ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ವೀಲಿಂಗ್ ಮಾಡಿ ಪುಂಡಾಟಿಕೆ
ಬೆಂಗಳೂರು ವೀಲಿಂಗ್
Image Credit source: Tv9 kannada

Updated on: Jul 06, 2026 | 5:44 PM

ಮುಖ್ಯಾಂಶಗಳು

  • ಸಿಲಿಕಾನ್ ಸಿಟಿಯಲ್ಲಿ ನಡೆದಿರುವ ಪುಂಡರ ವೀಲಿಂಗ್ ಘಟನೆ
  • ಆಂಬ್ಯುಲೆನ್ಸ್ ರೋಗಿಯೊಬ್ಬರನ್ನು ಹೊತ್ತು ವೇಗವಾಗಿ ಸಾಗುತ್ತಿತ್ತು
  • ಆಂಬ್ಯುಲೆನ್ಸ್​​​ಗೆ ದಾರಿ ನೀಡಿದೆ ಹುಚ್ಚಾಟ

ಬೆಂಗಳೂರು, ಜು. 6: “ಮಾನವನ ಜೀವ ರಸ್ತೆ ಬದಿಯ ಸ್ಟಂಟ್‌ಗಳಿಗಿಂತಲೂ ಅಗ್ಗವಾಗಿಬಿಟ್ಟಿದೆಯೇ?” – ಇಂತಹದ್ದೊಂದು ಗಂಭೀರ ಹಾಗೂ ಆತಂಕಕಾರಿ ಪ್ರಶ್ನೆ ಮೂಡುವಂತೆ ಮಾಡಿದೆ ಸಿಲಿಕಾನ್ ಸಿಟಿಯಲ್ಲಿ ನಡೆದಿರುವ ಪುಂಡರ ವೀಲಿಂಗ್ ಘಟನೆ. ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್‌ನ ಸೈರನ್ ಧ್ವನಿ ಜೋರಾಗಿ ಕೇಳಿಸುತ್ತಿದ್ದರೂ, ಅದಕ್ಕೆ ದಾರಿ ಬಿಡದೆ ರಸ್ತೆಯಲ್ಲೇ ಅಪಾಯಕಾರಿ ವೀಲಿಂಗ್ (Wheelies) ಪ್ರದರ್ಶನ ಮಾಡಿದ ಬೈಕ್ ಸವಾರರ ಅಮಾನವೀಯ ಕೃತ್ಯ ಸದ್ಯ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋವನ್ನು @Karnataka Portfolio ಎಂಬ ಎಕ್ಸ್​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಮಾಹಿತಿಯ ಪ್ರಕಾರ, ಈ ಘಟನೆಯು ಜುಲೈ 4 ರಂದು ನಡುರಾತ್ರಿ ಸುಮಾರು 2:30 ರ ಸುಮಾರಿಗೆ ಬೆಂಗಳೂರಿನ ಗೊರಗುಂಟೆಪಾಳ್ಯ ಮತ್ತು ಯಶವಂತಪುರ ನಡುವಿನ ಹೆದ್ದಾರಿ ರಸ್ತೆಯಲ್ಲಿ ಸಂಭವಿಸಿದೆ. ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ರೋಗಿಯೊಬ್ಬರನ್ನು ಹೊತ್ತು ವೇಗವಾಗಿ ಸಾಗುತ್ತಿತ್ತು. ಈ ವೇಳೆ ರಸ್ತೆಯಲ್ಲಿದ್ದ ಬೈಕ್ ಸವಾರರ ಗುಂಪೊಂದು, ತುರ್ತು ವಾಹನಕ್ಕೆ ಸೈಡ್ ಕೊಡುವುದನ್ನು ಬಿಟ್ಟು, ಅದರ ಮುಂಭಾಗದಲ್ಲೇ ಅಪಾಯಕಾರಿ ಸ್ಟಂಟ್‌ಗಳನ್ನು ಮುಂದುವರಿಸಿದೆ. ಇದು ಆಂಬ್ಯುಲೆನ್ಸ್ ಒಳಗಿದ್ದ ರೋಗಿಯ ಜೀವದ ಜೊತೆ ಮಾತ್ರವಲ್ಲದೆ, ಸ್ವತಃ ಆ ಪುಂಡರ ಜೀವಕ್ಕೂ ಆಪತ್ತು ತರುವಂತಿತ್ತು.

ವಿಡಿಯೋ ಇಲ್ಲಿದೆ ನೋಡಿ:

ಇಂತಹ ಬೇಜವಾಬ್ದಾರಿ ವರ್ತನೆ ಕೇವಲ ರಸ್ತೆ ನಿಯಮದ ಉಲ್ಲಂಘನೆಯಷ್ಟೇ ಅಲ್ಲ, ಕೊಲೆ ಯತ್ನಕ್ಕೆ ಸಮಾನವಾಗಿದೆ. ಆಂಬ್ಯುಲೆನ್ಸ್‌ನಂತಹ ತುರ್ತು ವಾಹನಗಳನ್ನು ತಡೆಯುವುದರಿಂದ ಜೀವ ಉಳಿಸುವ ಚಿಕಿತ್ಸೆ ವಿಳಂಬವಾಗಿ ರೋಗಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಸಾರ್ವಜನಿಕ ರಸ್ತೆಗಳು ಇಂತಹ ಸ್ಟಂಟ್‌ಗಳಿಗೆ ಇರುವ ಅಖಾಡಗಳಲ್ಲ. ಇಲ್ಲಿ ವೀಲಿಂಗ್ ಮಾಡುವುದರಿಂದ ರಸ್ತೆಯಲ್ಲಿ ಸಂಚರಿಸುವ ಇತರ ವಾಹನ ಸವಾರರು ಹಾಗೂ ಪಾದಚಾರಿಗಳ ಜೀವಕ್ಕೂ ಗಂಡಾಂತರ ಎದುರಾಗುತ್ತದೆ ಎಂದು ನೆಟ್ಟಿಗರು ಗರಂ ಆಗಿದ್ದಾರೆ.

ಇದನ್ನೂ ಓದಿ: ಆಷಾಢ ಆರಂಭದಲ್ಲೇ ಮಾಂಸಪ್ರಿಯರಿಗೆ ಶಾಕ್: ಚಿಕನ್, ಮೊಟ್ಟೆ ಬೆಲೆಯಲ್ಲಿ ದಾಖಲೆಯ ಏರಿಕೆ

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬೆಂಗಳೂರು ಸಂಚಾರಿ ಪೊಲೀಸರು, ವೀಲಿಂಗ್ ಪುಂಡರನ್ನು ಪತ್ತೆಹಚ್ಚಲು ಆ ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳನ್ನು ತೀವ್ರವಾಗಿ ಜಾಲಾಡುತ್ತಿದ್ದಾರೆ. ಸಿಸಿಟಿವಿ ಆಧಾರದ ಮೇಲೆ ಬೈಕ್ ಸಂಖ್ಯೆಗಳನ್ನು ಪತ್ತೆಹಚ್ಚಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಎಫ್‌ಐಆರ್ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಸಾಮಾಜಿಕ ಜಾಲತಾಣಗಳ ರೀಲ್ಸ್ ಹಪಾಹಪಿತನ ಅಥವಾ ಸಾಹಸದ ಮೋಜು ಮತ್ತೊಬ್ಬರ ಜೀವಕ್ಕಿಂತ ದೊಡ್ಡದಲ್ಲ ಎಂದು ಕಠಿಣ ಶಿಕ್ಷೆ ವಿಧಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us