
ಬೆಂಗಳೂರು, (ಸೆಪ್ಟೆಂಬರ್ 09): ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ (Namma Metro Yellow Line) ಮತ್ತೊಂದು ಹೊಸ ರೈಲು ಸಂಚರಿಸಲಿದೆ. ನಾಳೆಯಿಂದ ಅಂದರೆ ಸೆಪ್ಟೆಂಬರ್ 10 ರಿಂದ ನಾಲ್ಕನೇ ರೈಲು ಸಂಚಾರ ಆರಂಭಿಸಲಿದೆ. ಇದರಿಂದ ರೈಲುಗಳ ನಡುವಿನ ಅಂತರವು 25 ನಿಮಿಷದಿಂದ 19 ನಿಮಿಷಕ್ಕೆ ಇಳಿಕೆಯಾಗಲಿದೆ. ಅಲ್ಲದೆ, ಸೋಮವಾರದಿಂದ ಶನಿವಾರದವರೆಗೆ ಮೊದಲ ರೈಲು ಬೆಳಿಗ್ಗೆ 6 ಗಂಟೆಗೆ ಮತ್ತು ಭಾನುವಾರ 7 ಗಂಟೆಗೆ ಹೊರಡಲಿದೆ. ಈ ಬಗ್ಗೆ ಬಿಎಂಆರ್ ಸಿಎಲ್ ಪ್ರಕಟಣೆ ಹೊರಡಿಸಿದ್ದು, ಇದರಿಂದ ಈ ಮಾರ್ಗದಲ್ಲಿ ಬೆಳಗ್ಗೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್ ಸಿಎಲ್) ಪ್ರಕಟಣೆ ಹೊರಡಿಸಿದ್ದು, 10ನೇ ಸೆಪ್ಟೆಂಬರ್‌ನಿಂದ ಜಾರಿಗೆ ಬರುವಂತೆ ಹಳದಿ ಮಾರ್ಗದಲ್ಲಿ 4ನೇ ರೈಲು ಸೆಟ್ ಅನ್ನು ಕಾರ್ಯಾಚರಣೆ ಆರಂಭಿಸಲಿದೆ. ಇದರಿಂದ ರೈಲುಗಳ ಟ್ರಿಪ್ ಅಂತರ 25 ನಿಮಿಷದಿಂದ 19 ನಿಮಿಷಕ್ಕೆ ತಗ್ಗಲಿದೆ. ಇನ್ನು ಪ್ರಯಾಣಿಕರು ಈ ವೇಳಾಪಟ್ಟಿ ಬದಲಾವಣೆಗಳನ್ನು ಗಮನಿಸಿ ಸಂಚರಿಸಬೇಕು ಎಂದು ಎಂದು ತಿಳಿಸಿದೆ.
# BMRCL ಸೆಪ್ಟೆಂಬರ್ 10, 2025 ರಿಂದ ಹಳದಿ ಮಾರ್ಗದಲ್ಲಿ 4ನೇ ರೈಲು ಸೆಟ್ನ್ನು ಕಾರ್ಯಾಚರಣೆಗೆ ಸೇರಿಸಿದೆ. ಎಲ್ಲಾ ದಿನಗಳಲ್ಲಿ ರೈಲುಗಳು 19 ನಿಮಿಷಗಳ ಮಧ್ಯಂತರದಲ್ಲಿ ಸಂಚರಿಸುತ್ತವೆ. ಸೋಮವಾರದಿಂದ ಶನಿವಾರದವರೆಗೆ ಮೊದಲ ವಾಣಿಜ್ಯ ಸೇವೆ ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ pic.twitter.com/GRS3j4yngr
— ನಮ್ಮ ಮೆಟ್ರೋ (@OfficialBMRCL) September 9, 2025
ಬೆಂಗಳೂರಿನ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೂ ಹಳದಿ ಮಾರ್ಗದಲ್ಲಿ ಇದುವರೆಗೂ 3 ಮೆಟ್ರೋ ರೈಲುಗಳು 25 ನಿಮಿಷಕ್ಕೊಂದರಂತೆ ಸಂಚರಿಸುತ್ತಿದ್ದವು. ಈಗ ನಾಳೆಯಿಂದ ಮತ್ತೊಂದು ಹೊಸ ಮೆಟ್ರೋ ರೈಲು ಸೇರ್ಪಡೆಯಾಗುತ್ತಿದೆ. ಜತೆಗೆ ಹಳದಿ ಮಾರ್ಗದ ರೈಲುಗಳ ವೇಳಾಪಟ್ಟಿಯಲ್ಲಿಯೂ ಬದಲಾವಣೆ ಮಾಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ತುಸು ಬೇಗನೇ ಸಂಚಾರ ಆರಂಭವಾಗಲಿದೆ.
ಹಳದಿ ಮಾರ್ಗ ಆರಂಭವಾದ ದಿನದಿಂದ ಕೇವಲ 3 ರೈಲುಗಳು ಮಾತ್ರ ಸಂಚಾರ ನಡೆಸುತ್ತಿದ್ದು, ಇದರಿಂದ ಪ್ರಯಾಣಿಕರು ಮಟ್ರೋಗಾಗಿ 25 ನಿಮಿಷ ಕಾಯಬೇಕಾಗುತ್ತಿತ್ತು. ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಭಾರೀ ಹೆಚ್ಚಿದ್ದ ಕಾರಣ ದಟ್ಟಣೆ ಹೆಚ್ಚಿತ್ತು. ಸದ್ಯ ಇದೀಗ ಈ ಮಾರ್ಗದಲ್ಲಿ ಮತ್ತೊಂದು ಹೊಸ ರೈಲು ಸಂಚಾರ ಮಾಡುವುದರಿಂದ ಒಂದು ರೈಲಿನಿಂದ ಇನ್ನೊಂದು ರೈಲಿನ ಅಂತರದ ಓಡಾಡ 19 ನಿಮಿಷಕ್ಕೆ ಇಳಿಕೆಯಾಗಲಿದೆ.ಇದರಿಂದ ಪ್ರಯಾಣಿಕರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
Published On - 8:26 pm, Tue, 9 September 25