ಲಾಡ್ಜ್ನಲ್ಲಿತ್ತು ಡ್ರಗ್ಸ್ ಸೇವನೆಗೆ ವ್ಯವಸ್ಥೆ! 6 ಠಾಣಾ ವ್ಯಾಪ್ತಿಯಲ್ಲಿ 1.5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಸಿಸಿಬಿ
ಬೆಂಗಳೂರಿನಲ್ಲಿ ಹಲವು ಅಪರಾಧ ಪ್ರಕರಣಗಳು ಬೆಳಕಿಗೆ ಬಂದಿವೆ. ಮನೆಗಳ್ಳತನ, ಬೈಕ್ ಕಳ್ಳತನ ಪ್ರಕರಣಗಳು ಒಂದೆಡೆಯಾದರೆ, ಪ್ರಮುಖವಾಗಿ ಮಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಹಲವು ಭಾಗಗಳಲ್ಲಿ ದಾಳಿ ಮಾಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ. ವಿವರಗಳು ಇಲ್ಲಿವೆ.

ಬೆಂಗಳೂರು, ಸೆಪ್ಟೆಂಬರ್ 10: ಬೆಂಗಳೂರು (Bengaluru) ಸಿಸಿಬಿ ಪೊಲೀಸರು (CCB Police) ಕಳೆದ ಹದಿನೈದು ದಿನಗಳಲ್ಲಿ ಮಾದಕ ಚಟುವಟಿಕೆಗಳ (Drugs Mafia) ವಿರುದ್ಧ ಹಲವು ದಾಳಿಗಳನ್ನು ನಡೆಸಿದ್ದಾರೆ. ಕುಮಾರಸ್ವಾಮಿ ಲೇಔಟ್, ಆವಲಹಳ್ಳಿ, ಅಮೃತಹಳ್ಳಿ, ಮೈಕೋ ಲೇ ಔಟ್, ಹೆಬ್ಬಗೋಡಿ ಮತ್ತು ರಾಮಮೂರ್ತಿನಗರ ಸೇರಿದಂತೆ ಒಟ್ಟು ಆರು ಠಾಣಾ ವ್ಯಾಪ್ತಿಗಳಲ್ಲಿ, ಮಾದಕ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿ ಏಳು ಪ್ರಕರಣ ದಾಖಲಿಸಿದ್ದಾರೆ. ದಾಳಿ ವೇಳೆ ಒಟ್ಟಾರೆಯಾಗಿ 1.5 ಕೋಟಿ ರೂ. ಮೌಲ್ಯದ 506 ಗ್ರಾಂ ಎಂಡಿಎಂಎ, 50 ಎಲ್ಎಸ್ಡಿ ಸ್ಟ್ರಿಪ್ಸ್, 85 ಗ್ರಾಂ ಕೊಕೇನ್, 56 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದು, ಇಬ್ಬರು ವಿದೇಶಿ ಪ್ರಜೆ (ಒಬ್ಬಾಕೆ ಮಹಿಳೆ) ಸೇರಿದಂತೆ ಒಟ್ಟು 9 ಜನರನ್ನು ಬಂಧಿಸಿದ್ದಾರೆ.
ಖಾಸಗಿ ಲಾಡ್ಜ್ನಲ್ಲಿ ಡ್ರಗ್ಸ್ ಸೇವನೆಗೆ ಸಂಪೂರ್ಣ ವ್ಯವಸ್ಥೆ!
ರಾಮಮೂರ್ತಿನಗರದಲ್ಲಿ ಸುಪ್ರೀಂ ಸೂಟ್ಸ್ ಎಂಬ ಒಂದು ಖಾಸಗಿ ಹೋಟೆಲ್ನಲ್ಲಿ ಡ್ರಗ್ಸ್ ಸೇವನೆ ಮಾಡಲು ವ್ಯವಸ್ಥೆ ಮಾಡಿಕೊಡಲಾಗಿರುವುದು ಗೊತ್ತಾಗಿದೆ. ಅಲ್ಲದೇ, ಡ್ರಗ್ ಪೆಡ್ಲರ್ಸ್ ಜೊತೆಗೆ ಲಾಡ್ಜ್ ಸಿಬ್ಬಂದಿ ಸಂಪರ್ಕ ಇಟ್ಟುಕೊಂಡು ಡ್ರಗ್ ಸೇವನೆ ಮಾಡುವವರನ್ನು ಕರೆಸಿ ನಂತರ ಡ್ರಗ್ಸ್ ಮತ್ತು ಹೋಟೆಲ್ ರೂಮ್ಗೆ ನಿಗದಿತ ಹಣ ಪಡೆಯುತಿದ್ದಾರೆ ಎಂಬ ಮಾಹಿತಿ ದೊರೆತಿತ್ತು. ಇದರ ಆಧಾರದ ಮೇಲೆ ದಾಳಿ ನಡೆಸಿ 3 ಲಕ್ಷ ರೂ. ಮೌಲ್ಯದ 15 ಗ್ರಾಂ ಎಂಡಿಎಂಎ ಸೀಜ್ ಮಾಡಲಾಗಿದೆ. ಪುತ್ತೂರು ಮೂಲದ ಕರೀಮ್ ಮತ್ತು ಆಫಾನ್ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಸುಮಾರು ಹದಿನೈದು ರೂಮ್ಗಳಲ್ಲಿ ಡ್ರಗ್ಸ್ ಸೇವನೆಗೆ ವ್ಯವಸ್ಥೆ ಇತ್ತು ಎಂಬುದು ಗೊತ್ತಾಗಿದೆ. ಲಾಡ್ಜ್ನಲ್ಲಿ ಸಿರಿಂಜ್ಗಳು, ನೀಡಲ್ಗಳು ಹಾಗೂ ಎಲೆಕ್ಟ್ರಾನಿಕ್ ತೂಕದ ಯಂತ್ರ ಪತ್ತೆಯಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕೆಲ ಬೈಕ್ ಮತ್ತು ಮನೆ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು ಆವಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಆಟೋ ಒಂದನ್ನು ಬುಕ್ ಮಾಡಿ ಹತ್ತಿದ್ದ ಆರೋಪಿಗಳು ಆಟೋ ಚಾಲಕನನ್ನ ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ತನಿಖೆ ನಡೆಸಿ ಪವನ್, ಅಫ್ರೋಜ್ ಮತ್ತು ಮನೋಜ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಈ ವೇಳೆ ಮೂರ್ನಾಲ್ಕು ಠಾಣಾ ವ್ಯಾಪ್ತಿಯ ಬೈಕ್ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತರಿಂದ ಒಟ್ಟು 12 ಲಕ್ಷ ರೂ. ಮೌಲ್ಯದ 1 ಆಟೋ 11 ಬೈಕ್ 22.7ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಾಲಾಗಿದೆ.
ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಕದ್ದ ಬೈಕ್ನಲ್ಲಿ ರೀಲ್ಸ್ ಮಾಡುತ್ತಿದ್ದ ಆರೋಪಿಯೊಬ್ಬ ಬಂಧಿತನಾಗಿದ್ದಾನೆ. ಆತ ಕದ್ದ ಆಟೋದಲ್ಲಿ ವಾಸ ಮಾಡಿಕೊಂಡು ಇನ್ನಿತರ ಭಾಗದಲ್ಲಿ ಕೀ ಬಿಟ್ಟ ಬೈಕ್ಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ. ನಂತರ ಅಜ್ಞಾತ ಸ್ಥಳದಲ್ಲಿಟ್ಟು 20 ಬೈಕ್ಗಳಾದ ಬಳಿಕ ಹಂತ ಹಂತವಾಗಿ ಮಾರಾಟ ಮಾಡುತ್ತಿದ್ದ. ಆತನಿಂದ 18 ಲಕ್ಷ ರೂ. ಮೌಲ್ಯದ 20 ಕ್ಕೂ ಹೆಚ್ಚು ಬೈಕ್ ಮತ್ತು 1 ಆಟೋ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕಾರಿನ ಸನ್ ರೂಫ್ ಮೋಜಿಗಾಗಿ ಬಳಸಿದ್ರೆ ಜೈಲು ಗ್ಯಾರಂಟಿ: ಕಾನೂನಿನಲ್ಲೇನಿದೆ ಎಂಬ ವಿವರ ಇಲ್ಲಿದೆ
ಒಟ್ಟಾರೆಯಾಗಿ, ನಗರದಲ್ಲಿ ಪೊಲೀಸರು ಎಷ್ಟೇ ಎಚ್ಚರಿಕೆ ವಹಿಸಿದರೂ ಒಂದಿಲ್ಲೊಂದು ಅಪರಾಧ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ವಿಪರ್ಯಾಸವಾಗಿದ್ದು, ಪೊಲೀಸರಲ್ಲದೇ ಸಾರ್ವಜನಿಕರೂ ಕೂಡ ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆಯಿದೆ.



