ಕಾರಿನ ಸನ್ ರೂಫ್ ಮೋಜಿಗಾಗಿ ಬಳಸಿದ್ರೆ ಜೈಲು ಗ್ಯಾರಂಟಿ: ಕಾನೂನಿನಲ್ಲೇನಿದೆ ಎಂಬ ವಿವರ ಇಲ್ಲಿದೆ
ಬೆಂಗಳೂರಿನಲ್ಲಿ ಕಾರಿನ ಸನ್ ರೂಫ್ನನಲ್ಲಿ ನಿಂತಿದ್ದ ಬಾಲಕನಿಗೆ ಅಪಾಯ ಎದುರಾದ ಘಟನೆ ಬಗ್ಗೆ ಯಲಹಂಕ ಸಂಚಾರ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿದ್ದಾರೆ. ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 125(a) ಮತ್ತು 281 ಅಡಿ ಪ್ರಕರಣ ದಾಖಲಾಗಿದೆ. ಸನ್ ರೂಫ್ ಬಳಕೆಯಲ್ಲಿನ ನಿರ್ಲಕ್ಷ್ಯ ಮತ್ತು ಅಪಾಯಗಳು, ಇದಕ್ಕೆ ಶಿಕ್ಷೆ ಏನು ಎಂಬ ವಿವರ ಇಲ್ಲಿದೆ.

ಬೆಂಗಳೂರು, ಸೆಪ್ಟೆಂಬರ್ 9: ಕಾರಿನ ಸನ್ ರೂಫ್ನಲ್ಲಿ (Sunroof) ನಿಂತಿದ್ದ ಬಾಲಕನ ತಲೆಗೆ ಹೈ ಬೇರಿಯರ್ ತಗುಲಿದ್ದ ಘಟನೆ ಸಂಬಂಧ ಯಲಹಂಕ ಸಂಚಾರ ಪೊಲೀಸರು (Bengaluru Traffic Police) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೆಪ್ಟಂಬರ್ 6 ರ ಮಧ್ಯಾಹ್ನ 1 ಗಂಟೆ ವೇಳೆಗೆ ಬೆಂಗಳೂರಿನ (Bengaluru) ವಿದ್ಯಾರಣ್ಯಪುರದ 7 ನೇ ಬ್ಲಾಕ್ ಜಿಕೆವಿಕೆ ಡಬಲ್ ರಸ್ತೆಯಲ್ಲಿ ಘಟನೆ ಸಂಭವಿಸಿತ್ತು. ಸದ್ಯ ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 125(a) ಮತ್ತು 281 ಸೆಕ್ಷನ್ ಅಡಿ ಕೇಸ್ ದಾಖಲಾಗಿದೆ.
ಕೆಂಪು ಬಣ್ಣದ ಮಹೀಂದ್ರ ಕಾರಿನ ಸನ್ ರೂಫ್ನಲ್ಲಿ ನಿಂತಿದ್ದ ಬಾಲಕನ ತಲೆಗೆ ಹೈ ಬೇರಿಯರ್ ಬಡಿದಿತ್ತು. ಅದೃಷ್ಟವಶಾತ್, ಕೂದಲೆಳೆ ಅಂತರದಲ್ಲಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದ. ಸದ್ಯ ಪ್ರಕರಣ ದಾಖಲಿಸಿರುವ ಯಲಹಂಕ ಪೊಲೀಸರು ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬೆಂಗಳೂರು ಘಟನೆಯ ವಿಡಿಯೋ
Next time when you leave your kids popping their heads out, think once again! pic.twitter.com/aiuHQ62XN1
— ThirdEye (@3rdEyeDude) September 7, 2025
ಕಾರಿನ ಸನ್ ರೂಫ್ ಬಳಕೆ: ಶಿಕ್ಷೆ ಏನು? ಕಾನೂನು ಏನು ಹೇಳುತ್ತೆ?
ನಿರ್ಲಕ್ಷ್ಯದ ಅಥವಾ ದುಡುಕಿನ ಕೃತ್ಯದಿಂದ ಇತರರ ಜೀವಕ್ಕೆ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟುಮಾಡಿದರೆ ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 125(A) ಅಡಿ ಶಿಕ್ಷೆ ವಿಧಿಸಲಾಗುತ್ತದೆ. ಗಾಯಗಳು ಉಂಟಾಗಿವೆಯೋ ಅಥವಾ ಇಲ್ಲವೋ ಎಂಬುದರ ಮೇಲೆ ಶಿಕ್ಷೆಯ ಪ್ರಮಾಣ ಅವಲಂಬಿಸಿರುತ್ತದೆ. ಯಾವುದೇ ಗಾಯ ಉಂಟಾಗದಿದ್ದರೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ, 2,500 ರೂ. ವರೆಗೆ ದಂಡ ಅಥವಾ ಎರಡೂ ವಿಧಿಸಬಹುದಾಗಿದೆ.
ಗಂಭೀರ ಗಾಯವಾದರೆ ಏನು ಶಿಕ್ಷೆ?
ಗಂಭೀರ ಗಾಯವಾದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 10,000 ರೂ. ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. BNS ಸೆಕ್ಷನ್ 281, ಸಾರ್ವಜನಿಕ ರಸ್ತೆಯಲ್ಲಿ ದುಡುಕಿನ ಅಥವಾ ನಿರ್ಲಕ್ಷ್ಯದ ರೀತಿಯಲ್ಲಿ ವಾಹನ ಚಲಾಯಿಸುವುದನ್ನು ನಿಷೇಧಿಸುತ್ತದೆ. ನಿರ್ಲಕ್ಷ್ಯದ ಚಾಲನೆಯು ಮಾನವ ಜೀವಕ್ಕೆ ಅಪಾಯವನ್ನುಂಟುಮಾಡಬಹುದಾದದ್ದು ಎಂದು ಪರಿಗಣಿಸಲಾಗುತ್ತದೆ. ಅಪಾಯಕಾರಿ ಚಾಲನೆಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಹಾಗೂ 1,000 ರೂ. ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಆಟೋಮೊಬೈಲ್ ತಜ್ಞರು ಹೇಳಿದ್ದೇನು?
ಕಾರುಗಳಲ್ಲಿ ಸನ್ ರೂಫ್ನಲ್ಲಿ ನಿಲ್ಲುವುದು ಕಾನೂನಿಗೆ ವಿರುದ್ದ. ಮೋಟರ್ ವಾಹನ ಕಾಯಿದೆಯ ಸೆಕ್ಷನ್ 177, 184 ಅಡಿ ಶಿಕ್ಷಾರ್ಹ ಅಪರಾಧ ಎಂದು ಹಾಸನದಲ್ಲಿ ಆಟೋಮೊಬೈಲ್ ತಜ್ಞ ಸಿದ್ದಾರ್ಥ ಶಿವಪ್ಪ ಹೇಳಿದ್ದಾರೆ. ಸನ್ ರೂಫ್ ಮೊದಲು ಅಮೆರಿಕಾದ ನ್ಯಾಶ್ ಕಾರಿನಲ್ಲಿ ಬಳಕೆ ಮಾಡಲಾಗಿತ್ತು. 1937 ರಲ್ಲಿ ಮೊದಲು ಬಳಕೆಯಾಗಿತ್ತು. ನಂತರ ಫೋರ್ಡ್ ಕಂಪನಿಯಿಂದ 1955 ರಲ್ಲಿ ಬಳಕೆಯಾಯಿತು. ಬಳಿಕ ಯುರೋಪಿಯನ್ ದೇಶ, ಜಪಾನ್ ದೇಶಗಳಲ್ಲಿ ಬಳಕೆಯಾಯಿತು ಎಂದು ಅವರು ಹೇಳಿದರು.
ಇದನ್ನೂ ಓದಿ: ಬೆಂಗಳೂರು ಚೆನ್ನೈ ಎಕ್ಸ್ಪ್ರೆಸ್ ವೇ ಕರ್ನಾಟಕ ಭಾಗದಲ್ಲಿ ಟೋಲ್ ಸಂಗ್ರಹ ಶುರು: ಎಷ್ಟಿದೆ ಟೋಲ್ ದರ?
ಸನ್ ರೂಫ್ ಇರುವುದು ನಿಂತು ಚಾಲನೆ ಮಾಡಲು ಅಲ್ಲ. ಕಾರಿನಲ್ಲಿ ಉತ್ತಮ ಗಾಳಿ ಬೆಳಕಿಗಾಗಿ ಇರುವ ಇದೊಂದು ವಿಶೇಷ ವ್ಯವಸ್ಥೆ. ಭಾರತದಲ್ಲಿ ಸನ್ ರೂಫ್ 1995 ರಲ್ಲಿ ಮೊದಲು ಒಪೆಲ್ ಕಾರಿನಲ್ಲಿ ಬಳಕೆಗೆ ಬಂತು. ನಂತರ ಸ್ಕೋಡಾ ಮತ್ತಿತರ ಕಾರಿನಲ್ಲಿ ಬಳಕೆಗೆ ಬಂತು. ಮೊದಲು ದುಬಾರಿ ಕಾರಿನಲ್ಲಿ ಇದ್ದ ಇದೊಂದು ಫೀಚರ್ ಈಗ ಸಾಮಾನ್ಯ ಕಾರುಗಳಲ್ಲೂ ಲಭ್ಯ ಇದೆ. ಆದರೆ, ಈಗ ಸನ್ ರೂಫ್ ಅನ್ನು ಮೋಜಿಗಾಗಿ ಬಳಸಲಾಗುತ್ತಿದೆ. ಸನ್ ರೂಫ್ ಮೇಲೆ ನಿಂತು ಪ್ರಯಾಣ ಟ್ರಾಫಿಕ್ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸನ್ ರೂಫ್ ಅನ್ನು ಅತ್ಯಂತ ಬೇಜವಾಬ್ದಾರಿಯಿಂದ ಬಳಕೆ ಮಾಡಲಾಗುತ್ತಿದೆ. ಸಂಚಾರಿ ಪೊಲೀಸರು ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಸಿದ್ದಾರ್ಥ ಶಿವಪ್ಪ ಆಗ್ರಹಿಸಿದ್ದಾರೆ.



