
ಬೆಂಗಳೂರು, ಜೂನ್ 26: ಕರ್ನಾಟಕ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ (Guarantee Schemes) ಹೆಸರಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಸಹಜವಾಗಿ ಸರ್ಕಾರಕ್ಕೆ ಇದು ಹೊರೆಯಾಗಿ ಪರಿಣಮಿಸಿದ್ದು, ಕೊನೆಗೆ ಆ ಹೊರೆಯನ್ನು ಜನಸಾಮಾನ್ಯರಿಂದಲೇ ವಸೂಲಿ ಮಾಡಲು ಮಾರ್ಗಗಳನ್ನು ಹುಡುಕಿದೆ. ಅದಕ್ಕೆ ತಾಜಾ ಉದಾಹರಣೆ ಎಂಬಂತೆ ವಿದ್ಯುತ್ ಬಿಲ್ನಲ್ಲಿ (Electricity Bill) ಇಂಧನ ಇಲಾಖೆ ಅಥವಾ ಕೆಪಿಟಿಸಿಎಲ್ ನೌಕರರ ಪಿಂಚಣಿ ಹಾಗೂ ಗ್ರಚ್ಯುಟಿ ಮೊತ್ತವನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆ. ನೌಕರರಿಗೆ ಸರ್ಕಾರ ಹಾಗೂ ಇಲಾಖೆ ನೀಡಬೇಕಿದ್ದ ಸೌಕರ್ಯಗಳ ವೆಚ್ಚವನ್ನು ಗ್ರಾಹಕರ ತಲೆಗೆ ಕಟ್ಟಲಾಗುತ್ತಿದೆ. ಇದು ಈಗ ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸುವ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ.
ಬೆಸ್ಕಾಂ ನೀಡುವ ಬಿಲ್ನಲ್ಲಿ ಹೊಸದಾಗಿ ಸೃಷ್ಟಿ ಮಾಡಲಾಗಿರುವ ಕಾಲಂ ನೋಡಿ ಗ್ರಾಹಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಿನ ಸನ್ನಿವೇಶದಲ್ಲಿ ಬಳಸಿದ ವಿದ್ಯುತ್ ಬಿಲ್ ಕಟ್ಟುವುದೇ ಕಷ್ಟಕರವಾಗಿದೆ. ಇದರ ಜೊತೆಗೆ ಇಲಾಖೆಯ ನೌಕರರಿಗೆ ನೀಡಬೇಕಾದ ಪಿಂಚಣಿ ಹಣವನ್ನು ಭರಿಸಲು ಆಗದೆ, ಪ್ರತಿ ಯುನಿಟ್ ವಿದ್ಯುತ್ ಮೇಲೆ 36 ಪೈಸೆ ನಮ್ಮಿಂದ ವಸೂಲಿ ಮಾಡುವುದು ಯಾವ ರೀತಿ ನ್ಯಾಯ, ಇದು ಒಂದು ರೀತಿಯ ಹಗಲು ದರೋಡೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಮನೆ, ಆಫೀಸ್, ಅಂಗಡಿಯ ವಿದ್ಯುತ್ ಮೀಟರ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಚಿವ ಕೆಜೆ ಜಾರ್ಜ್
ಈ ರೀತಿಯ ವಿಚಿತ್ರ ವಸೂಲಿ ಮುಂದಿನ ಎರಡು ವರ್ಷಗಳ ಕಾಲ ಮುಂದುವರೆಯಲಿದೆ ಎಂಬುದು ದುರಂತ. ಇದಕ್ಕೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಕೂಡ ಅಸ್ತು ಎಂದಿದ್ದು, ಗ್ರಾಹಕರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಕಡೆಗಣನೆ ಮಾಡಲಾಗಿದೆ.
ಒಟ್ಟಿನಲ್ಲಿ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಒಂದು ಕೈಯ್ಯಲ್ಲಿ ಕೊಟ್ಟು, ಈ ರೀತಿಯ ಬೇಕಾಬಿಟ್ಟಿ ವಸೂಲಿ ಮಾಡಿ ಜನಸಾಮಾನ್ಯರ ಜೀವನ ಮತ್ತಷ್ಟು ದುಸ್ತರ ಆಗುವಂತೆ ಮಾಡಿದೆ.
ವರದಿ: ಲಕ್ಷ್ಮಿ ನರಸಿಂಹ, ಬೆಂಗಳೂರು