ಮಾವು ಬೆಳೆಗಾರರಿಗೆ, ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ
ಮಾವಿಗೆ ಬೆಂಬಲ ಬೆಲೆ ಆಗ್ರಹಿಸಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ರೈತರು ನಡೆಸಿದ ಹೋರಾಟ ಮತ್ತು ಸರ್ಕಾರಿ ಶಾಲೆ ಮಕ್ಕಳಿಗೆ ಇನ್ನೂವರೆಗೂ ರಾಜ್ಯ ಶಿಕ್ಷಣ ಇಲಾಖೆ ಶೂ ಮತ್ತು ಸಾಕ್ಸ್ ವಿತರಣೆ ಮಾಡದಿರುವ ಬಗ್ಗೆ ಟಿವಿ9 ಡಿಜಿಟಲ್ ನಿರಂತರವಾಗಿ ವರದಿ ಮಾಡಿತ್ತು. ಈ ವರದಿಯಿಂದ ಎಚ್ಚೆತ್ತ ರಾಜ್ಯ ಸರ್ಕಾರ ಮಾವು ಅಭಿವೃದ್ಧಿ ಮಂಡಳಿಗೆ ಹಣ ಬಿಡುಗಡೆ ಮಾಡಿದೆ. ಅಲ್ಲದೆ, ಶೂ ಮತ್ತು ಸಾಕ್ಸ್ ಖರೀದಿಗೂ ಹಣ ಬಿಡುಗಡೆ ಮಾಡಿದೆ.

ಬೆಂಗಳೂರು, ಜೂನ್ 25: ಮಾವಿನ ಬೆಲೆ (Mango Price) ಕುಸಿತವಾದ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಘೋಷಿಸುವಂತೆ ಕೋಲಾರ (Kolar) ಜಿಲ್ಲೆಯ ಶ್ರೀನಿವಾಸಪುರದ ರೈತರು ಪ್ರತಿಭಟನೆ ನಡೆಸಿದ್ದರು. ರಾಜ್ಯ ಸರ್ಕಾರ ತಕ್ಷಣ ಬೆಂಬಲ ಬೆಲೆ ಘೋಷಿಸುವಂತೆ ಮಾವು ಬೆಳೆಗಾರರು ರಸ್ತೆಗೆ ಮಾವಿನ ಹಣ್ಣುಗಳನ್ನು ಸುರಿದು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddramaiah) ಅವರು ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಘೋಷಿಸಿದ್ದರು. ಈ ಬೆನ್ನಲ್ಲೇ ರಾಜ್ಯ ಸರ್ಕಾರ (Karnataka Government) ಮಾವು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡಿದೆ.
ರಾಜ್ಯ ಸರ್ಕಾರ ಬೆಲೆ ಕೊರತೆ ಪಾವತಿ ಯೋಜನೆ (PDPS) ಯೋಜನೆ ಮಾರ್ಗಸೂಚಿಗಳನ್ವಯ ತೋಟಗಾರಿಕೆ ಇಲಾಖೆಯ ಮಾವು ಅಭಿವೃದ್ಧಿ ಮಂಡಳಿಗೆ 101 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆವರ್ತ ನಿಧಿಗೆ ಮರುಪಾವತಿಸುವ ಷರತ್ತಿನೊಂದಿಗೆ ಸಹಕಾರ ಇಲಾಖೆಯಿಂದ 101 ಕೋಟಿ ಹಣ ಬಿಡುಗಡೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಶೇ.50ರಷ್ಟು ಮೊತ್ತವನ್ನು ಕೇಂದ್ರದಿಂದ ಮರುಪಾವತಿ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸರ್ಕಾರಿ ಶಾಲೆ ಮಕ್ಕಳಿಗೆ ಸಿಹಿ ಸುದ್ದಿ
ಟಿವಿ9 ವರದಿಯ ಫಲಶೃತಿ: ಸರ್ಕಾರಿ ಶಾಲೆ ಮಕ್ಕಳ ಶೂ ಮತ್ತು ಸಾಕ್ಸ್ ಖರೀದಿಗೂ ಕೂಡ ರಾಜ್ಯ ಸರ್ಕಾರ 111 ಕೋಟಿ 88 ಲಕ್ಷ ಹಣ ಬಿಡುಗಡೆ ಮಾಡಿದೆ. 40.68 ಲಕ್ಷ ವಿದ್ಯಾರ್ಥಿಗಳಿಗೆ ಒಂದು ಜೊತೆ ಶೂ ಮತ್ತು ಸಾಕ್ಸ್ ಖರೀದಿಗಾಗಿ ಹಣ ನೀಡಿದೆ. ಆದರೆ, ಶಿಕ್ಷಣ ಇಲಾಖೆ ಶೂ ಮತ್ತು ಸಾಕ್ಸ್ ಖರೀದಿಗೆ ಕೆಲವು ಮಾರ್ಗಸೂಚಿ ನೀಡಿದೆ. ವಿದ್ಯಾರ್ಥಿಗಳ ಶೂ ಮತ್ತು ಸಾಕ್ಸ್ ಖರೀದಿಗೆ ಎಸ್ಡಿಎಮ್ಸಿ ಖರೀದಿಸುತ್ತದೆ.
ಇದನ್ನೂ ಓದಿ: ವಿದ್ಯುತ್ ಕನಿಷ್ಠ ಶುಲ್ಕಕ್ಕೆ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಇನ್ನೂ ಸಿಗದ ಉಚಿತ ಶೂ, ಸಾಕ್ಸ್: ವರದಿ ಮಾಡಿದ್ದ ಟಿವಿ9
ಶಿಕ್ಷಣ ಇಲಾಖೆ ಶಾಲೆ ಆರಂಭದ ದಿನವೇ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಹಾಗೂ ಪಠ್ಯಪುಸ್ತಕ ಕೊಡುತ್ತೇವೆ ಅಂತ ಹೇಳಿತ್ತು. ಆದರೆ, ಶಾಲೆಗಳು ಆರಂಭವಾಗಿ ವಾರ ಕಳೆದರೂ ಶೂ ಮತ್ತು ಸಾಕ್ಸ್ಗಳನ್ನು ಇಲಾಖೆ ನೀಡಿರಲಿಲ್ಲ. ಈ ಬಗ್ಗೆ ಟಿವಿ9 ಡಿಜಿಟಲ್ ವರದಿ ಮಾಡಿತ್ತು. 2025-26ನೇ ಶೈಕ್ಷಣಿಕ ಸಾಲಿನಲ್ಲಿ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ 1 ರಿಂದ 10ನೇ ತರಗತಿವರೆಗಿನ ಅಂದಾಜು 42 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಖರೀದಿಗೆ ಸರಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂದು ವರದಿ ಮಾಡಿತ್ತು.
ಅಲ್ಲದೆ, ಶೂ ಮತ್ತು ಸಾಕ್ಸ್ ಖರೀದಿಗೆ ಸರ್ಕಾರ ಹಣ ನೀಡಿಲ್ಲ ಎಂದು ಸರ್ಕಾರಿ ಶಾಲೆ ಸಿಬ್ಬಂದಿ ಆರೋಪ ಮಾಡಿದ್ದರು. ಈ ಬಗ್ಗೆ ಟಿವಿ9 ಡಿಜಿಟಲ್ ನಿರಂತರ ವರದಿ ಮಾಡುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರ್ಕಾರ ಇದೀಗ, ಶೂ ಮತ್ತು ಸಾಕ್ಸ್ ಖರೀದಿಗೆ ಹಣ ಬಿಡುಗಡೆ ಮಾಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:02 pm, Wed, 25 June 25




