ಅನ್ನದಾತನ ಪಾಲಿಗೆ ಹುಳಿಯಾದ ಮಾವು: ಉಗ್ರ ಹೋರಾಟದ ಎಚ್ಚರಿಕೆ ನೀಡಿದ ರೈತರು
ಹಣ್ಣುಗಳ ರಾಜ ಮಾವಿನ ಹಣ್ಣಿಗೆ ಬೆಂಬಲ ಬೆಲೆ ಇಲ್ಲದ ಹಿನ್ನೆಲೆಯಲ್ಲಿ ಮಾವು ಬೆಳೆಗಾರರು ನಡೆಸಿದ್ದ ಹೋರಾಟಕ್ಕೆ ಸರ್ಕಾರದ ಮಟ್ಟದಲ್ಲಿ ಈವರೆಗೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂಬ ಆರೋಪ ಕೇಳಿಬಂದಿದೆ. ಬೆಲೆ ಕುಸಿತದಿಂದ ಕಂಗಾಲಾಗಿರುವ ಮಾವು ಬೆಳೆಗಾರರು ಮಾವು ಬೆಳೆಯನ್ನು ಕಟಾವು ಮಾಡಿ ಮಾರುಕಟ್ಟೆಗೂ ಹಾಕಲಾಗದೆ, ಬೆಂಬಲ ಬೆಲೆಯ ಘೋಷಣೆ ನಿರೀಕ್ಷೆಯಲ್ಲಿದ್ದಾರೆ.

ಕೋಲಾರ, ಜೂನ್ 16: ರಾಜ್ಯದ ಮಾವಿನ (Mango) ತವರು ಕೋಲಾರ (Kolar) ಜಿಲ್ಲೆಯ ಶ್ರೀನಿವಾಸಪುರದ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಬೆಲೆ ತೀವ್ರವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ವರ್ಷಕ್ಕೊಂದೆ ಬೆಳೆಯನ್ನು ನಂಬಿಕೊಂಡು ಬದುಕುತ್ತಿರುವ ಸಾವಿರಾರು ಮಂದಿ ಮಾವು ಬೆಳೆಗಾರರು ಸರ್ಕಾರ ನೆರವಿಗೆ ಧಾವಿಸಬೇಕು, ಮಾವಿಗೆ ಬೆಂಬಲ ಬೆಲೆ ಘೊಷಣೆ ಮಾಡುವಂತೆ ಒತ್ತಾಯಿಸಿ ಕಳೆದ 15 ದಿನಗಳಿಂದ ವಿವಿದ ಹಂತಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ.
ಜೂನ್ 11 ರಂದು ಶ್ರೀನಿವಾಸಪುರ ತಾಲೂಕು ಬಂದ್ ಮಾಡಿ ಉಗ್ರ ಹೋರಾಟವನ್ನು ಮಾಡಿದ್ದರು. ಶ್ರೀನಿವಾಸಪುರದ ಎಲ್ಲ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ರಸ್ತೆಯಲ್ಲಿ ಮಾವಿನ ಹಣ್ಣುಗಳನ್ನು ಸುರಿದು ಆಕ್ರೋಶ ಹೊರಹಾಕಿದ್ದರು. ಈ ವೇಳೆ ಕೋಲಾರ ಜಿಲ್ಲಾಡಳಿತ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಆದಷ್ಟು ಬೇಗ ರೈತರ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದರು. ಆಗ, ಹೋರಾಟ ಕೈಬಿಟ್ಟಿದ್ದ ಮಾವು ಬೆಳೆಗಾರರು ಬೆಂಬಲ ಬೆಲೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ, ಸರ್ಕಾರದಿಂದ ಈವರೆಗೆ ಯಾವುದೇ ನಿರ್ಧಾರ ಹೊರಬಂದಿಲ್ಲ.
ರಾಜ್ಯ ಸರ್ಕಾರ ಆಂಧ್ರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದು ನಮ್ಮ ರಾಜ್ಯದ ತೋತಾಪುರಿ ಮಾವಿನ ಹಣ್ಣನ್ನು ಆಂಧ್ರದಲ್ಲಿ ಮಾರಾಟ ಮಾಡಲು ಯಾವುದೇ ನಿಷೇಧ ಹೇರದಂತೆ ಮನವಿ ಮಾಡಿತ್ತು. ಅಲ್ಲದೇ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮಾವಿಗೆ ಬೆಂಬಲ ಬೆಲೆ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿ ಕೈ ತೊಳೆದುಕೊಂಡಿದೆ. ಇನ್ನು, ಜಿಲ್ಲಾಡಳಿತ ಜ್ಯೂಸ್ ಕಾರ್ಖಾನೆಗಳು ಹಾಗೂ ಹಣ್ಣು ಸಂಸ್ಕರಣಾ ಘಟಕಗಳೊಂದಿಗೆ ಮಾತುಕತೆ ನಡೆಸಿ ಹೆಚ್ಚಿನ ಬೆಲೆಗೆ ಖರೀದಿ ಮಾಡುವಂತೆ ಮನವಿ ಮಾಡಿತ್ತು.
ಆದರೆ, ಈವರೆಗೂ ಸಂಸ್ಕರಣಾ ಘಟಕಗಳಿಂದಲೂ ಯಾವುದೇ ನಿರ್ಧಾರ ಹೊರಬಿದ್ದಿಲ್ಲ. ಪರಿಣಾಮ ರೈತರು ಗೊಂದಲದಲ್ಲಿದ್ದಾರೆ. ಆದರೆ, ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದ್ದು ಕೇಂದ್ರ ಕೃಷಿ ಇಲಾಖೆಯಿಂದ ಪರಿಹಾರ ಸಿಗುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಹೇಳಿದ್ದಾರೆ.
ಮಾವು ಬೆಳೆಗಾರರ ಸಂಘ ಕಳೆದ 15 ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರಗಳಿಂದ ಸೂಕ್ತ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಮಾವು ಬೆಳೆಗಾರರು ಮುಂದಿನ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಒಂದೆಡೆ ಹೋರಾಟಕ್ಕೆ ಸಿದ್ದವಾಗುತ್ತಿದ್ದರೇ, ಮತ್ತೊಂದೆಡೆ ತೋಟದಲ್ಲಿರುವ ಮಾವಿನ ಹಣ್ಣುಗಳು ಕಟಾವಿಗೆ ಬಂದಿವೆ. ಮಳೆಯೂ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸರಿಯಾದ ಸಮಯಕ್ಕೆ ಮಾವು ಕಟಾವು ಮಾಡಲಾಗದೆ ತೋಟದಲ್ಲಿರುವ ಮಾವಿನ ಬೆಳೆಗೆ ಮಚ್ಚೆ ರೋಗ ಸೇರಿದಂತೆ ವಿವಿಧ ರೋಗಗಳು ಆವರಿಸುವ ಸಾಧ್ಯತೆ ಇದೆ.
“ಮಾವು ಬೆಳೆಗಾರರಿಗೆ ಅತ್ತ ಸರ್ಕಾರದ ನಿರ್ಧಾರಕ್ಕಾಗಿ ಕಾಯುವ ಪರಿಸ್ಥಿತಿಯೂ ಇಲ್ಲ, ಇತ್ತ ಸರ್ಕಾರದ ನಿರ್ಧಾರಕ್ಕಾಗಿ ಕಾದು ಕುಳಿತರೇ ತೋಟದಲ್ಲಿರುವ ಮಾವು ಗಾಳಿ-ಮಳೆಯಿಂದ ರೋಗಕ್ಕೆ ತುತ್ತಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ತಲುಪುತ್ತಿದೆ. ಹೀಗಾಗಿ ಕೂಡಲೇ ಸರ್ಕಾರ ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಮಾವು ಬೆಳೆಗಾರರು ಉಗ್ರವಾಗಿ ಹೋರಾಟ ನಡೆಸಲು ಮುಂದಾಗಿದ್ದಾರೆ” ಎಂದು ಮಾವು ಬೆಳೆಗಾರ ನವೀನ್ ಹೇಳಿದ್ದಾರೆ.
ಇದನ್ನೂ ಓದಿ: ತೋತಾಪುರಿ ನಿಷೇಧ: ಕರ್ನಾಟಕ ಮಾವು ಬೆಳಗಾರರ ಹೊಟ್ಟೆ ಮೇಲೆ ಹೊಡೆದ ಆಂಧ್ರಪ್ರದೇಶ
ಒಟ್ಟಾರೆಯಾಗಿ ವರ್ಷಕ್ಕೊಂದೆ ಬೆಳೆಯಲ್ಲಿ ಜೀವನ ಕಟ್ಟಿಕೊಳ್ಳುವ ಮಾವು ಬೆಳೆಗಾರರ ಹತ್ತಾರು ನಿರೀಕ್ಷೆಗಳು ಈ ಬಾರಿ ಹುಸಿಯಾಗಿವೆ. ಮಾವಿಗೆ ನಿಗದಿತ ಬೆಲೆ ಇಲ್ಲದೆ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ಬೆಂಬಲ ಬೆಲೆಯ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡಬೇಕಿದೆ. ಇಲ್ಲವಾದಲ್ಲಿ ರೈತರ ಸಹನೆಯ ಕಟ್ಟೆಯೊಡೆದರೆ ಮತ್ತೆ ಸರ್ಕಾರಕ್ಕೆ ಸಂಕಷ್ಟ ಎದುರಾಗುವುದರಲ್ಲಿ ಅನುಮಾನವಿಲ್ಲ.








