ಹೆತ್ತ ಕುಡಿಯನ್ನೇ ಆಸ್ಪತ್ರೆಯಲ್ಲಿ ಬಿಟ್ಟು ಹೋದ ತಾಯಂದಿರು: ಕೋಲಾರದಲ್ಲಿ ಒಂದೇ ವಾರದಲ್ಲಿ 2 ಪ್ರಕರಣ
ಕೋಲಾರ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಎರಡು ಮಕ್ಕಳು ಅನಾಥವಾಗಿವೆ. ಕೂಸು ಕಣ್ಣು ಬಿಡುವ ಮುನ್ನವೇ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿಯಾಗಿದ್ದಾರೆ. ಒಂದು ಮಗುವನ್ನು ತಾಯಿ ಬೇಡ ಎಂದು ಬರೆದು ಕೊಟ್ಟಿದ್ದರೇ, ಮತ್ತೊಂದು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟ ತಾಯಿ ಪರಾರಿಯಾಗಿದ್ದಾಳೆ. ಸದ್ಯ ಜಿಲ್ಲಾಸ್ಪತ್ರೆಯ ಮಕ್ಕಳ ರಕ್ಷಣಾ ಘಟಕದ ಸುಪರ್ದಿಯಲ್ಲಿ ಎರಡೂ ಕಂದಮ್ಮಗಳಿವೆ.

ಕೋಲಾರ, ಜೂನ್ 14: ಕೋಲಾರ ಜಿಲ್ಲೆಯಲ್ಲಿ (Kolar District Hospital) ಒಂದೇ ವಾರದಲ್ಲಿ ಹುಟ್ಟುತ್ತಲೇ ಎರಡು ಮಕ್ಕಳು ಅನಾಥವಾಗಿವೆ. ಹೆಣ್ಣು ಮಗುವಿಗೆ ಜನ್ಮ ನೀಡಿ ಬಾಣಂತಿ ಪರಾರಿಯಾಗಿದ್ದರೇ, ಗಂಡು ಮಗು ಬೇಡ ಎಂದು ತಾಯಿ ಆಸ್ಪತ್ರೆಗೆ ಒಪ್ಪಿಸಿರುವ ಘಟನೆ ಕೋಲಾರ (Kolar) ಜಿಲ್ಲೆಯಲ್ಲಿ ನಡೆದಿದೆ. ಕೋಲಾರ ನಗರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಣಂತಿಯೊಬ್ಬರು ಕೂಸು ಬಿಟ್ಟು ಪರಾರಿಯಾಗಿದ್ದಾರೆ.
19 ವರ್ಷದ ಮೋನಿಷಾ (ಹೆಸರು ಬದಲಾಯಿಸಲಾಗಿದೆ) ಹಾಗೂ ಶ್ರೀನಿವಾಸ್ ದಂಪತಿಗಳು ಮಗುವನ್ನು ಬಿಟ್ಟು ಹೋಗಿದ್ದು, ವಿಳಾಸ ಹಾಗೂ ದೂರವಾಣಿ ತಪ್ಪಾಗಿ ಕೊಟ್ಟಿದ್ದಾರೆ ಎನ್ನಲಾಗಿದೆ. ದಂಪತಿಗಳು ಆಸ್ಪತ್ರೆಗೆ ದಾಖಲಾಗುವ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೆಸಂದ್ರ ಮೂಲದವರು ಎಂದು ವಿಳಾಸ ನೀಡಿದ್ದಾರೆ.
ಗುರುವಾರ (ಜೂ.12) ಸಂಜೆ ತಾಯಿ ಮತ್ತು ಮಕ್ಕಳ ವಿಭಾಗದ ವಾರ್ಡ್ಗೆ ಬಂದ್ದಾರೆ. ಗರ್ಭಿಣಿಯ ವಿವರ ಪಡೆದು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವಷ್ಟರಲ್ಲಿ ರಿಸಿಪ್ಷನ್ನ ಕುರ್ಚಿಯ ಮೇಲೆ ಕುಳಿತಿದ್ದ ಮೋನಿಷಾಗೆ ಹೆರಿಗೆಯಾಗಿದೆ. ವೈದ್ಯರು ಮತ್ತು ಸಿಬ್ಬಂದಿ ಕೂಡಲೇ ಸುರಕ್ಷಿತವಾಗಿ ತಾಯಿ ಮತ್ತು ಮಗುವನ್ನು ವಾರ್ಡ್ಗೆ ಶಿಪ್ಟ್ ಮಾಡಿದ್ದಾರೆ. ನಂತರ ಮಗುವಿನ ಆರೋಗ್ಯ ಸರಿ ಇಲ್ಲದ ಕಾರಣಕ್ಕೆ ವೈದ್ಯರು ಮಗುವನ್ನು ಎನ್ಐಸಿಯುವಿನಲ್ಲಿ ಇರಿಸಿದ್ದರು. ನಂತರ ತಾಯಿ ಮತ್ತು ಆಕೆಯೊಂದಿಗೆ ಬಂದಿದ್ದ ಓರ್ವ ಮಹಿಳೆ ಹೊರಗೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.
ಸದ್ಯ ಹೆರಿಗೆಯಾದ ದೃಷ್ಯಗಳು, ತಾಯಿ ಮತ್ತು ಆಕೆಯ ಪೋಷಕರು ಮಗುವನ್ನು ಬಿಟ್ಟು ಆಸ್ಪತ್ರೆಯಿಂದ ಹೊರಹೋಗಿರುವ ದೃಶ್ಯಗಳು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮಗುವನ್ನು ಮಕ್ಕಳ ರಕ್ಷಣಾ ಘಟಕದ ಸುಪರ್ದಿಗೆ ನೀಡಲಾಗಿದೆ.
“ಮಗು ಸದ್ಯ ನಮ್ಮ ಆರೈಕೆಯಲ್ಲಿದ್ದು, ದಾಖಲಾತಿ ಸಂದರ್ಭದಲ್ಲಿ ನೀಡಿದ್ದ ವಿಳಾಸ, ಮೊಬೈಲ್ ಸಂಖ್ಯೆ ನಕಲಿಯಾಗಿದೆ. ಪೋಷಕರ ಪತ್ತೆಗಾಗಿ ಪೊಲೀಸರಿಗೆ ದೂರು ನೀಡಲಾಗಿದೆ” ಎಂದು ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆ ಸರ್ಜನ್ ಡಾ.ಜಗದೀಶ್ ಹೇಳಿದ್ದಾರೆ.
ಕಳೆದ ವಾರ ಜೂನ್ 5 ರಂದು ಪುರುಷರೊಬ್ಬರು ತಾಯಿ ಮೃತಪಟ್ಟಿದ್ರೆ, ತಂದೆ ಜೈಲಿನಲ್ಲಿದ್ದಾರೆ ಎಂದು ಗಂಡು ಮಗುವೊಂದನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೋಗಿದ್ದರು. ಪೊಲೀಸರ ತನಿಖೆ ಬಳಿಕ ಓರ್ವ ಯುವತಿ ಮಗು ತನ್ನದೇ ಎಂದು ಮೂರು ದಿನಗಳ ಬಳಿಕ ಒಪ್ಪಿಕೊಂಡಿದ್ದರು. ಆದರೆ ಪೋಷಣೆ ಮಾಡಲು ಆಗುವುದಿಲ್ಲ, ಮಗು ಬೇಡವೆಂದು ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಬರೆದು ಕೊಟ್ಟು ಹೋಗಿದ್ದಾರೆ. ಈ ಯುವತಿಗೆ ಇನ್ನೂ ಮದುವೆಯಾಗಿಲ್ಲ ಎಂಬುವುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.
ಇದೀಗ, ಮಗುವನ್ನು ಬಿಟ್ಟು ತಾಯಿ ಪರಾರಿಯಾಗಿರವುದನ್ನು ಗಮನಿಸಿದರೆ ಅವಧಿಪೂರ್ವ ಪ್ರಸವವಾಗಿರುವ ಸಾಧ್ಯತೆ ಇದೆ. ಅವರು ಯಾವುದೇ ದಾಖಲೆ, ಮಾಹಿತಿ ನೀಡಿಲ್ಲ. ತಾಯಿ ಮಗುವನ್ನು ಬಿಟ್ಟು ಹೋಗಿದ್ದಾಳೆ. ಮಗುವಿನ ತಾಯಿ ಹಾಗೂ ಆಕೆಯೊಂದಿಗೆ ಬಂದಿದ್ದ ಮೂವರು ಮಗುವನ್ನು ಬಿಟ್ಟು ಹೋಗುವ ದೃಶ್ಯಗಳು ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಚಿನ್ನಾಭರಣ ಹಾಕೊಂಡು ಓಡಾಡಿದ್ರೆ ದಂಡ: ಪೊಲೀಸರ ಸೋಗಿನಲ್ಲಿ ಸುಲಿಗೆ
ಕೋಲಾರ ಜಿಲ್ಲೆಯ್ಲಲ್ಲಿ ಬಾಲ್ಯ ವಿವಾಹ ಪ್ರಕರಣಗಳು, ಬಾಲ ಗರ್ಭೀಣಿ ಪ್ರಕರಣಗಳು ಹೆಚ್ಚಾಗಿವೆ. ಹಾಗಾಗಿ ನಮ್ಮ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕ ನಿರಂತರವಾಗಿ ಕೆಲಸ ಮಾಡುತ್ತಿದೆ. ಇಂತಹ ದೂರುಗಳು ಬಂದ ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾರಾಯಣಸ್ವಾಮಿ ಹೇಳಿದ್ದಾರೆ.
ಒಟ್ಟಿನಲ್ಲಿ ಓರ್ವ ತಾಯಿ ಗಂಡು ಮಗುವಿಗೆ ಜನ್ಮ ನೀಡಿ ಬಳಿಕ ಬೇಡ ಎಂದು ಬರೆದುಕೊಟ್ಟಿದ್ದರೇ, ಮತ್ತೋರ್ವ ತಾಯಿ ಜನ್ಮ ನೀಡಿ ಕೆಲವೇ ಗಂಟೆ ಕಳೆಯುಷ್ಟರಲ್ಲಿ ಮಗುವನ್ನು ಬಿಟ್ಟು ಪರಾರಿಯಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:51 pm, Sat, 14 June 25








