ತೋತಾಪುರಿ ನಿಷೇಧ: ಕರ್ನಾಟಕ ಮಾವು ಬೆಳಗಾರರ ಹೊಟ್ಟೆ ಮೇಲೆ ಹೊಡೆದ ಆಂಧ್ರಪ್ರದೇಶ
ಕರ್ನಾಟಕ ಸರ್ಕಾರವು ಆಂಧ್ರಪ್ರದೇಶ ಸರ್ಕಾರ ತೋತಾಪುರಿ ಮಾವಿನ ಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಮನವಿ ಮಾಡಿದೆ. ಚಿತ್ತೂರು ಜಿಲ್ಲಾಡಳಿತದ ಈ ನಿರ್ಧಾರದಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು, ತೋತಾಪುರಿ ಮಾವಿಗೆ ಬೆಂಬಲ ಬೆಲೆ ನೀಡುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಬಿಗ್ ಅಪ್ಡೇಟ್ ನೀಡಿದ್ದಾರೆ.

ಚಿಕ್ಕಬಳ್ಳಾಪುರ/ ಕೋಲಾರ, ಜೂನ್ 11: ತೋತಾಪುರಿ ಮಾವು (Totapuri Mango) ನಿಷೇಧವನ್ನು ಹಿಂಪಡೆಯುವಂತೆ ಆಂಧ್ರಪ್ರದೇಶಕ್ಕೆ (Andhra Pradesh) ಕರ್ನಾಟಕ ಸರ್ಕಾರ (Karnataka Government) ಮನವಿ ಮಾಡಿಕೊಂಡಿದೆ. ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಆಂಧ್ರಪ್ರದೇಶ ಸರ್ಕಾರಕ್ಕೆ ಪತ್ರ ಬರೆದು, ನಿಷೇಧವನ್ನು ಹಿಂಪಡೆಯುವಂತೆ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕದಿಂದ ಬಂದ ಹಣ್ಣನ್ನು ಇಲ್ಲಿ ಮಾರಾಟ ಮಾಡಬಾರದು. ಇದರಿಂದ ಇಲ್ಲಿನ ರೈತರಿಗೆ ಸಮಸ್ಯೆಯಾಗುತ್ತದೆ ಎಂದು ಕರ್ನಾಟಕದ ತೋತಾಪುರಿ ಮಾವಿನ ಹಣ್ಣನ್ನು ನಿಷೇಧಿಸಿ ಚಿತ್ತೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಸಿಎಸ್ ಪತ್ರ
ತೋತಾಪುರಿ ಮಾವನ್ನು ನಿಷೇಧಿಸಿರುವುದರಿಂದ ಕೋಲಾರದ ರೈತರಿಗೆ ತುಂಬಾ ನಷ್ಟವಾಗಿದೆ. ಚಿತ್ತೂರಿನಲ್ಲಿ ತೋತಾಪುರಿ ಮಾವು ಮಾರಾಟವನ್ನು ಜಿಲ್ಲಾಡಳಿತ ಜೂನ್ 7 ರಿಂದ ನಿಷೇಧಿಸಿದೆ. ಈ ಆದೇಶ ಕರ್ನಾಟಕದ ರೈತರಿಗೆ, ವಿಶೇಷವಾಗಿ ಆಂಧ್ರ ಗಡಿಯ ಬಳಿಯ ಮಾವು ಬೆಳೆಗಾರರ ಮೇಲೆ ತೀವ್ರ ಪರಿಣಾಮ ಬೀರಿದೆ. ಹೀಗಾಗಿ, ನಿಷೇಧವನ್ನು ರದ್ದುಗೊಳಿಸುವಂತೆ ಆಂಧ್ರ ಪ್ರದೇಶ ಸರ್ಕಾರಕ್ಕೆ ಸಿಎಸ್ ಪತ್ರ ಬರೆದಿದ್ದಾರೆ.
ಬೆಂಬಲ ಬೆಲೆ ನೀಡುವ ಭರವಸೆ ನೀಡಿದ ಸಿಎಂ
ತೋತಾಪುರಿ ಮಾವಿಗೆ ಬೆಂಬಲ ಬೆಲೆ ನೀಡುವಂತೆ ಬುಧವಾರ (ಜೂ.11) ಕೋಲಾರದಲ್ಲಿ ರೈತರು ಹಣ್ಣುಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು. ತೋತಾಪುರಿ ಮಾವು ಬೆಲೆ ಕುಸಿತಗೊಂಡಿದ್ದರಿಂದ ನೊಂದ ಬೆಳೆಗಾರರು ಶ್ರೀನಿವಾಸಪುರ ಬಂದ್ಗೆ ಕರೆ ನೀಡಿ, ಧರಣಿ ನಡೆಸಿದರು. ಒಂದು ಕೆಜಿ ತೋತಾಪುರಿ ಮಾವಿಗೆ ನಾಲ್ಕು ರೂ. ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿದರು. ತೋತಾಪುರಿ ಮಾವು ಬೆಳಗಾರರ ಪ್ರತಿಭಟನೆಗೆ ರಾಜ್ಯ ಸರ್ಕಾರ ಮಣಿದಿದೆ.
ತೋತಾಪುರಿ ಮಾವಿಗೆ ಬೆಂಬಲ ಬೆಲೆ ನೀಡುವ ವಿಚಾರವನ್ನು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಗೌರಿಬಿದನೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ತೋತಾಪುರಿ ಮಾವಿಗೆ ಬೆಂಬಲ ಬೆಲೆ ನೀಡುವಂತೆ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮನವಿ ಮಾಡಿದ್ದಾರೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೂ ನೋಡಿ: RCB ವಿಜಯೋತ್ಸವಕ್ಕೆ ರಾಜ್ಯಪಾಲರಿಗೆ ಆಹ್ವಾನ ನೀಡಿದ್ಯಾರು? ಕೊನೆಗೂ ಸತ್ಯಬಿಚ್ಚಿಟ್ಟ ಸಿಎಂ
ಸಮಯಾವಕಾಶ ಕೇಳಿದ ಜಿಲ್ಲಾಡಳಿತ, ಸಚಿವ
ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮನವಿ ಆಲಿಸಿದ ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವ ಭೈರತಿ ಸುರೇಶ್, ತೋತಾಪುರಿ ಮಾವು ಬೆಳೆಗೆ ಬೆಂಬಲ ಬೆಲೆ ಘೋಷಿಸಲು ಸಮಯಾವಕಾಶ ಕೇಳಿದರು. ಮಾವು ಉದ್ದಿಮೆದಾರರ ಜತೆ ಚರ್ಚಿಸಿ ನಿರ್ಧರಿಸುವುದಾಗಿ ಭರವಸೆ ನೀಡಿದರು. ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತ ಮುಖಂಡರು ಪ್ರತಿಭಟನೆ ಕೈಬಿಟ್ಟರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:13 pm, Wed, 11 June 25