ಬೆಂಗಳೂರು: ಭಗವದ್ಗೀತೆ ಸರ್ವಕಾಲಕ್ಕೂ ಶ್ರೇಷ್ಠ ಗ್ರಂಥ- ರಾಜನಾಥ್ ಸಿಂಗ್

| Updated By: ವಿವೇಕ ಬಿರಾದಾರ

Updated on: Dec 03, 2022 | 7:57 PM

ಸತ್ಯ, ಧರ್ಮ, ಅಹಿಂಸೆಯನ್ನು ಪ್ರತಿಪಾದಿಸುವ ಭಗವದ್ಗೀತೆ ಸರ್ವ ಕಾಲಕ್ಕೂ ಶ್ರೇಷ್ಠ ಗ್ರಂಥವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.

ಬೆಂಗಳೂರು: ಭಗವದ್ಗೀತೆ ಸರ್ವಕಾಲಕ್ಕೂ ಶ್ರೇಷ್ಠ ಗ್ರಂಥ- ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್​ ಸಿಂಗ್​​
Follow us on

ಬೆಂಗಳೂರು: ಸತ್ಯ, ಧರ್ಮ, ಅಹಿಂಸೆಯನ್ನು ಪ್ರತಿಪಾದಿಸುವ ಭಗವದ್ಗೀತೆ ಸರ್ವ ಕಾಲಕ್ಕೂ ಶ್ರೇಷ್ಠ ಗ್ರಂಥವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath singh) ತಿಳಿಸಿದರು. ನಾವು ಯಾವುದೇ ಪಠ್ಯ ಕಲಿಯಲು ಶಿಕ್ಷಕರ ಅವಶ್ಯಕತೆ ಇರುತ್ತದೆ. ಆದರೆ ಭಾವನೆಗಳಾದ ಶಾಂತ, ಕ್ರೌರ್ಯ, ಸಂತಸ, ದುಃಖ ಮುಂತಾದವುಗಳನ್ನು ಯಾರೂ ಕಲಿಸಿಲ್ಲ. ಇದು ನಮ್ಮಲ್ಲಿಯೇ ಪ್ರಕಟಗೊಳ್ಳುತ್ತದೆ ಎಂದರು.

ಇಂದು ವಸಂತಪುರದ ಇಸ್ಕಾನ್​ನ ಶ್ರೀ ರಾಜಾಧಿರಾಜ ಗೋವಿಂದ ಮಂದಿರದಲ್ಲಿ ಗೀತ ಜಯಂತಿಯ ಸಂದರ್ಭದಲ್ಲಿ ಏರ್ಪಡಿಸಲಾದ ‘ಗೀತ ದಾನ ಯಜ್ಞ ಮಹೋತ್ಸವ’ ವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಗವದ್ಗೀತೆ ನಮ್ಮ ಜೀವನಕ್ಕೆ ಹತ್ತಿರವಾದದ್ದು. ನಾವು ಹೇಗೆ ಶೋಕದಿಂದ ಮುಕ್ತವಾಗಬಹುದೆಂದು ತಿಳಿಸಿಕೊಡುತ್ತದೆ. ಹಾಗೆಯೇ ಮೃತ್ಯುವಿನ ಭಯವನ್ನು ಹೋಗಲಾಡಿಸುತ್ತದೆ. ನಮ್ಮನ್ನು ಆಧ್ಯಾತ್ಮಿಕದ ಕಡೆ ಕರೆದೊಯ್ಯುತ್ತದೆ. ಎಷ್ಟೋ ಮಹಾಕವಿ, ಸಾಧಕರಿಗೆ ಇದು ಪ್ರೇರಣಾ ಶಕ್ತಿಯಾಗಿದೆ. ಭಗವದ್ಗೀತೆಯ ನೀತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸರಿಯಾದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ನಾವು ಎಂದಿಗೂ ಸಕಾರಾತ್ಮಕವಾಗಿ ಆಲೋಚನೆ ಮಾಡಿ ಒಳ್ಳೆಯ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಅದೇ ತರನಾದ ಜೀವನ ಶೈಲಿಯನ್ನು ಮುಂದಿನ ಯುವ ಪೀಳಿಗೆಗೂ ತಲುಪಿಸಬೇಕು ಎಂದು ಹೇಳಿದರು.

ಭಗವದ್ಗೀತೆ ದೇವರ ವಾಣಿಯಾಗಿದೆ: ಸಿಎಂ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ಭಗವದ್ಗೀತೆ ದೇವರ ವಾಣಿಯಾಗಿದೆ. ಇದನ್ನು ಪಠಿಸುವುದರಿಂದ ನಮಗೆ ಶಾಂತಿ, ನೆಮ್ಮದಿ ಹಾಗೂ ಸಹನೆ ದೊರೆಯುತ್ತದೆ. ಅಲ್ಲದೆ ಬದುಕಿನ ದೃಷ್ಟಿಕೋನ ಬದಲಾಗಿ ಮನುಕುಲದ ಅಭಿವೃದ್ದಿ ಸಾಧ್ಯವಾಗುತ್ತದೆ. ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ಹೇಳಿದ ನೀತಿಪಾಠವಾಗಿದೆ. ಭಗವದ್ಗೀತೆ ಮನುಷ್ಯನ ಪಾಪ, ಪುಣ್ಯ, ಮರುಜನ್ಮ, ಕರ್ತವ್ಯ, ಬದುಕು ಮುಂತಾದವುಗಳ ಮೇಲೆ ಬೆಳಕು ಚೆಲ್ಲುತ್ತದೆ. ನಮ್ಮಲ್ಲಿನ ಎಷ್ಟೋ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಪರಿಹಾರ ಉಂಟು‌. ಇಸ್ಕಾನ್​ನವರು ನಮ್ಮ ದೇಶ ಮಾತ್ರವಲ್ಲದೆ ವಿದೇಶದಲ್ಲಿ ಸಹ ನಮ್ಮ ಸಂಸ್ಕತಿಯನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಭಾರತದಲ್ಲಿ ಭಕ್ತಿ ಚಳುವಳಿಯನ್ನು ಮತ್ತೆ ತರುವಲ್ಲಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಇಸ್ಕಾನ್ ಅಕ್ಷಯ ಪಾತ್ರೆ ಅಧ್ಯಕ್ಷರಾದ ಮಧುಪಂಡಿತ್ ದಾಸ್, ಕಂದಾಯ ಸಚಿವ ಆರ್.ಅಶೋಕ್, ಸಂಸದ ತೇಜಸ್ಚಿ ಸೂರ್ಯ, ಶಾಸಕ ಎಂ‌. ಕೃಷ್ಣಪ್ಪ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ