Bhagavad Gita: ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಈ ವರ್ಷದಿಂದಲೇ ಭಗವದ್ಗೀತೆ ಬೋಧನೆ; ಸಚಿವ ಬಿಸಿ ನಾಗೇಶ್

| Updated By: Digi Tech Desk

Updated on: Sep 19, 2022 | 1:22 PM

Bhagavad Gita ಭಗವದ್ಗೀತೆ ಬೋಧಿಸಲು ಸರ್ಕಾರಕ್ಕೆ ಮುಜುಗರವೇನಾದರೂ ಇದೆಯೇ ಎಂದು ಬಿಜೆಪಿ ಸದಸ್ಯ ಎಂ.ಕೆ.ಪ್ರಾಣೇಶ್ ಪ್ರಶ್ನಿಸಿದ್ದರು.

Bhagavad Gita: ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಈ ವರ್ಷದಿಂದಲೇ ಭಗವದ್ಗೀತೆ ಬೋಧನೆ; ಸಚಿವ ಬಿಸಿ ನಾಗೇಶ್
ಭಗವದ್ಗೀತೆ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಭಗವದ್ಗೀತೆ (Bhagavad Gita) ಬೋಧನೆ ಆರಂಭಿಸುವ ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ತಿಳಿಸಿದರು. ವಿಧಾನ ಪರಿಷತ್​ನಲ್ಲಿ ಈ ವಿಚಾರವನ್ನು ಸದಸ್ಯ ಎಂ.ಕೆ.ಪ್ರಾಣೇಶ್ (MK Pranesh) ಪ್ರಸ್ತಾಪಿಸಿದರು. ಭಗವದ್ಗೀತೆ ಬೋಧನೆ ಪ್ರಸ್ತಾಪ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಈ ಹಿಂದೆ ಭಗವದ್ಗೀತೆ ಬೋಧನೆಗೆ ಸಮಿತಿ ರಚಿಸುವ ಬಗ್ಗೆ ಹೇಳಲಾಗಿತ್ತು. ಆದರೆ ಈಗ ಬೇರೆಯೇ ಹೇಳಿಕೆ ಹೊರಬಂದಿದೆ. ಭಗವದ್ಗೀತೆ ಬೋಧಿಸಲು ಸರ್ಕಾರಕ್ಕೆ ಮುಜುಗರವೇನಾದರೂ ಇದೆಯೇ? ಮೊದಲು ಇದ್ದ ಆಸಕ್ತಿ ಈಗ ಯಾಕೆ ಇಲ್ಲ ಎಂದು ಕೇಳಿದರು. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಉತ್ತರಿಸಿ, ಈ ವರ್ಷದಿಂದಲೇ ನೈತಿಕ ಶಿಕ್ಷಣ ವಿಭಾಗದಲ್ಲಿ ಭಗವದ್ಗೀತೆ ಬೋಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಮಿತಿ ರಚನೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಸಾಲದ ಹೊರೆಯಲ್ಲಿ ವಿದ್ಯುತ್ ವಿತರಣಾ ಕಂಪನಿಗಳು

ಕರ್ನಾಟಕದ ವಿದ್ಯುತ್ ಉತ್ಪಾದಕ ಹಾಗೂ ವಿತರಣಾ ಕಂಪನಿಗಳು ಸಾಲದ ಹೊರೆಯಿಂದ ಬಳಲುತ್ತಿರುವ ಮಾಹಿತಿ ಸೋಮವಾರ ಬಹಿರಂಗಗೊಂಡಿದೆ. ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಕೇಳಿದ ಪ್ರಶ್ನೆಗೆ ಅಂಕಿಅಂಶದೊಂದಿಗೆ ಉತ್ತರ ನೀಡಿದ ಸಚಿವ ಸುನಿಲ್ ಕುಮಾರ್, ವಿದ್ಯುತ್ ಕಂಪನಿಗಳ ಸಾಲದ ವಿವರ ನೀಡಿದರು. ಕೆಪಿಟಿಸಿಎಲ್ (KPTCL) ಮತ್ತು ವಿವಿಧ ಎಸ್ಕಾಂಗಳು ಸೇರಿ ಒಟ್ಟು ₹ 38,975 ಕೋಟಿ ಸಾಲ ಇದೆ ಎಂದು ಸಚಿವರು ಹೇಳಿದರು. ಈ ಪೈಕಿ ಕೆಪಿಟಿಸಿಎಲ್ ₹ 9,590 ಕೋಟಿ, ಬೆಸ್ಕಾಂ ₹ 13,616 ಕೋಟಿ, ಚೆಸ್ಕಾಂ 3,536, ಮೆಸ್ಕಾಂ ₹ 1,282 ಕೋಟಿ, ಹೆಸ್ಕಾಂ 7,480 ಕೋಟಿ, ಜೆಸ್ಕಾಂ 3,472 ಕೋಟಿ ಸಾಲದಲ್ಲಿವೆ. 2002-2003 ರಿಂದ ದೊಡ್ಡ ಮೊತ್ತದ ಸಾಲ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ ಎಂದು ಸಚಿವರು ಹೇಳಿದರು.

ಸದಸ್ಯ ಬಿ.ಎಂ.ಫಾರೂಖ್ ಪ್ರಶ್ನೆ ಕೇಳಿ, ಚಿತ್ರದುರ್ಗ-ದಾವಣಗೆರೆ-ತುಮಕೂರು ಭಾಗದಲ್ಲಿ ಪವನ ವಿದ್ಯುತ್ ಉತ್ಪಾದನೆಗೆ ಗ್ರೀನ್ ಕಾರಿಡಾರ್ ಸ್ಟೇಷನ್​ಗಳು ಇಲ್ಲ. ಇವ್ಯಾಕ್ಯುಲೇಷನ್ ಸೌಲಭ್ಯಗಳು ಈ ಭಾಗದಲ್ಲಿ ಇಲ್ಲ. ಇದರಿಂದ ಸಣ್ಣ ಪ್ರಮಾಣದ ಪವನ ವಿದ್ಯುತ್ ಹೂಡಿಕೆದಾರರಿಗೆ ಸಮಸ್ಯೆ ಆಗಿದೆ. ವಿದ್ಯುತ್ ಸಬ್ ಸ್ಟೇಷನ್​ಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಮನವಿ ಮಾಡಿದರು. ಪರಿಶೀಲಿಸಿ, ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ಪ್ಲಾಸ್ಟಿಕ್​ಗೆ ಕಡಿವಾಣ

ಪ್ಲಾಸ್ಟಿಕ್ ಉತ್ಪನ್ನಗಳಿಂದ ಪರಿಸರದ ಮೇಲೆ ಆಗುತ್ತಿರುವ ಸಮಸ್ಯೆ ಕುರಿತು ಸದಸ್ಯರಾದ ತುಳಸಿ ಮುನಿರಾಜುಗೌಡ ಹಾಗೂ ಪ್ರಕಾಶ್ ರಾಥೋಡ್ ಪ್ರಶ್ನಿಸಿದರು. ‘ರಾಜ್ಯದಲ್ಲಿ ಪ್ರತಿದಿನ ರಾಜ್ಯದಲ್ಲಿ 830 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಪ್ಲಾಸ್ಟಿಕ್ ಉತ್ಪಾದನೆ ತಡೆಯಲು ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಪ್ಲಾಸ್ಟಿಕ್ ನಿಷೇಧಕ್ಕೆ ಸರ್ಕಾರ ಏಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿಲ್ಲ? ಸದನದಲ್ಲಿಯೇ ಪ್ಲಾಸ್ಟಿಕ್ ಬಳಕೆ ಆಗುತ್ತಿದೆ’ ಎಂದು ಹೇಳಿದರು. ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪ್ಲಾಸ್ಟಿಕ್ ನಿಷೇಧ ಹಾಗೂ ನಿಯಂತ್ರಣದ ಬಗ್ಗೆ ಸಮರ್ಪಕ ಕ್ರಮ ಜರುಗಿಸುವ ಭರವಸೆ ನೀಡಿದರು.

Published On - 12:52 pm, Mon, 19 September 22