AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಜಾರಾಗಿದೆ ಕಣ್ರೀ, ಅದ್ಕೆ ಸೆಷನ್​ಗೆ ಹೋಗ್ತಿಲ್ಲ: ಸಚಿವ ಸ್ಥಾನ ನೀಡದ ವರಿಷ್ಠರ ವಿರುದ್ಧ ಅಸಮಾಧಾನ ಹೊರಹಾಕಿದ ಈಶ್ವರಪ್ಪ

‘ಕ್ಲೀನ್​ಚಿಟ್ ಸಿಕ್ಕಿದ್ದರೂ ಸಂಪುಟದಲ್ಲಿ ಸ್ಥಾನ ಕೊಟ್ಟಿಲ್ಲ. ಅಸಮಾಧಾನ ಇರುವ ಕಾರಣದಿಂದಲೇ ನಾನು ಸದನಕ್ಕೆ ಹೋಗುತ್ತಿಲ್ಲ’ ಎಂದು ಶಾಸಕ ಕೆ.ಎಸ್​.ಈಶ್ವರಪ್ಪ ಹೇಳಿದರು.

ಬೇಜಾರಾಗಿದೆ ಕಣ್ರೀ, ಅದ್ಕೆ ಸೆಷನ್​ಗೆ ಹೋಗ್ತಿಲ್ಲ: ಸಚಿವ ಸ್ಥಾನ ನೀಡದ ವರಿಷ್ಠರ ವಿರುದ್ಧ ಅಸಮಾಧಾನ ಹೊರಹಾಕಿದ ಈಶ್ವರಪ್ಪ
ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Sep 19, 2022 | 1:47 PM

Share

ಬೆಂಗಳೂರು: ನಗರದಲ್ಲಿಯೇ ಇದ್ದು ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳದ ತಮ್ಮ ನಿಲುವನ್ನು ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಸೋಮವಾರ ಸಮರ್ಥಿಸಿಕೊಂಡರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನನ್ನನ್ನು ಮತ್ತೆ ಮಿನಿಸ್ಟ್ರು ಮಾಡ್​ಬೇಕಿತ್ತು, ಮಾಡಿಲ್ಲ. ಕ್ಲೀನ್​ಚಿಟ್ ಸಿಕ್ಕಿದ್ದರೂ ಸಂಪುಟದಲ್ಲಿ ಸ್ಥಾನ ಕೊಟ್ಟಿಲ್ಲ. ಅಸಮಾಧಾನ ಇರುವ ಕಾರಣದಿಂದಲೇ ನಾನು ಸದನಕ್ಕೆ ಹೋಗುತ್ತಿಲ್ಲ’ ಎಂದು ಶಾಸಕ ಕೆ.ಎಸ್​.ಈಶ್ವರಪ್ಪ ಹೇಳಿದರು. ನನ್ನನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವುದು ಅಥವಾ ಬಿಡುವುದು ಕೇಂದ್ರ ನಾಯಕರಿಗೆ ಬಿಟ್ಟದ ವಿಚಾರ. ‘ನನಗೆ ಅಸಮಾಧಾನ ಇದೆ ಎಂಬುದನ್ನು ಮುಚ್ಚುಮರೆ ಇಲ್ಲದೆ ಹೇಳ್ತೀನಿ’ ಎಂದು ಈಶ್ವರಪ್ಪ ನುಡಿದರು. ನನ್ನ ಮೇಲೆ ಬಂದ ಆರೋಪದಿಂದ ನನಗೆ ಬೇಸರ ಇದೆ. ನಾನು ಆರೋಪ ಮುಕ್ತನಾಗಿ ಸದನಕ್ಕೆ ಹೋಗುತ್ತೇನೆ ಎಂದರು. ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಛಾ ಬಗ್ಗೆ ಸಭೆ ನಡೆಯಿತು. ಇದೇ ತಿಂಗಳ 22 ರಂದು ಆಯ್ದ ಕಾರ್ಯಕರ್ತರ ಸಭೆ ಇದೆ ಎಂದು ತಿಳಿಸಿದರು.

‘ಕೆಲಸ ಮಾಡಿದವರಿಗೆ ಮಾತ್ರ ಟಿಕೆಟ್​’ ಎಂಬ ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದ್ದಾರೆ. ಇಷ್ಟು ದಿನ ಕೇಡಿ ಡಿಕೆಶಿ ಆಗಿದ್ರು, ಈಗ ಡಿಕ್ಟೇಟರ್​ ಡಿಕೆಶಿ ಆಗಲು ಹೊರಟಿದ್ದಾರೆ. ಡಿಕೆಶಿ ಹೇಳಿಕೆಯನ್ನು ಸ್ವಾಭಿಮಾನಿ ಕಾಂಗ್ರೆಸ್ಸಿಗರು ಯಾರೂ ಒಪ್ಪುವುದಿಲ್ಲ. ಕಾಂಗ್ರೆಸ್​ನವರಷ್ಟೇ ಅಲ್ಲ, ಯಾವ ಪಕ್ಷದವರೂ ಒಪ್ಪಲ್ಲ. ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷ ಕೊಂಡುಕೊಂಡಿದ್ದಾರಾ? ನೀವು ಪಕ್ಷದ ರಾಜ್ಯಾಧ್ಯಕ್ಷರು ಆಗೋದಕ್ಕೂ ಯೋಗ್ಯರಲ್ಲ. ರಾಜಕೀಯದಲ್ಲಿರಲು ಅನ್​ಫಿಟ್ ಎಂದು ಈಶ್ವರಪ್ಪ ಹರಿಹಾಯ್ದರು.

ಇಡಿ ಅಧಿಕಾರಿಗಳಿಂದ ಡಿ.ಕೆ.ಶಿವಕುಮಾರ್​ ವಿಚಾರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಕಳ್ಳನ ಡೇಟ್​ ಕೇಳಿ ಕೋರ್ಟ್ ದಿನಾಂಕ ನಿಗದಿ ಮಾಡುತ್ತಾ? ಕೋರ್ಟ್​ ಕೊಡುವ ಡೇಟ್​ಗೆ ಕಳ್ಳ ವಿಚಾರಣೆಗೆ ಹೋಗಬೇಕು. ಭಾರತ್ ಜೋಡೋ ಪಾದಯಾತ್ರೆ ಹಾಗೂ ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ನನಗೆ ತೊಂದರೆ ಕೊಡ್ತಿದ್ದಾರೆ ಎಂದು ಅವರು ಆರೋಪ ಮಾಡುವುದು ಸರಿಯಲ್ಲ. ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ನಾನು ರಾಜಕೀಯ ಮಾಡಲ್ಲ. ಡಿಕೆಶಿ ಆರೋಪ ಮುಕ್ತರಾಗಿ ಹೊರಬರಲಿ ಎಂದು ಹಾರೈಸುವೆ ಎಂದರು.

ಕರ್ನಾಟಕ ಸರ್ಕಾರದ ವಿರುದ್ಧ ಶೇ 40ರ ಕಮಿಷನ್ ಅರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅಂಡ್ ಟೀಮ್ ಕಾಂಗ್ರೆಸ್ ಏಜೆಂಟರು. ಕೆಂಪಣ್ಣ ಈಗ ಬಾಯಿ ಬಿಡ್ತಿಲ್ಲ. ಸಿದ್ದರಾಮಯ್ಯ ನಮ್ಮ ವಿರುದ್ಧ 40 ಪರ್ಸೆಂಟ್ ಕಮೀಷನ್ ಆರೋಪ ಮಾಡುತ್ತಿದ್ದಾರೆ. ಯಾವುದೇ ದಾಖಲೆ ಅವರ ಬಳಿ ಇಲ್ಲ. ಸದನ ಆರಂಭವಾಗಿ ಒಂದು ವಾರ ಕಳೆದಿದೆ. ಆದರೂ ಯಾಕೆ ಸಿದ್ದರಾಮಯ್ಯ ಅವರಿಗೆ ದಾಖಲೆ ಮುಂದಿಡಲು ಆಗುತ್ತಿಲ್ಲ. ಏಕೆಂದರೆ ಅವರ ಬಳಿ ದಾಖಲೆ ಇಲ್ಲ. ತಾಕತ್ ಇದ್ದರೆ ಸಿದ್ದರಾಮಯ್ಯ ನೇರವಾಗಿ ದೂರು, ದಾಖಲೆ ಕೊಡಲಿ. ಅಧಿಕೃತ ವಿರೋಧ ಪಕ್ಷವಾಗಿ ಕಾಂಗ್ರೆಸ್ ವಿಫಲವಾಗಿದೆ. ಹೊರಗೆ ಕಚ್ಚಾಡುವುದಕ್ಕೇ ಅವರಿಬ್ಬರಿಗೆ ಸಮಯ ಇಲ್ಲ ಎಂದು ಹೇಳಿದರು.

ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ತಿರುಗೇಟು ಕೊಟ್ಟ ಈಶ್ವರಪ್ಪ, ನಾನು ಇವತ್ತಿನವರೆಗೂ ಗಂಡೇ, ಯಾವತ್ತಿದ್ರೂ ಗಂಡೇ, ಮದುವೆ ಆಗುವವನೇ. ಪ್ರಿಯಾಂಕ್ ಖರ್ಗೆ ಅನ್ನೋ ಜ್ಯೋತಿಷಿ ಕೇಳಿ ನಾನು ಮದುವೆ ಆಗುವವನಲ್ಲ. ನಮ್ಮ ಹಿರಿಯ‌ ನಾಯಕರು ಕುಳಿತು ಚರ್ಚೆ ಮಾಡ್ತಾರೆ. ನಾನು ಮತ್ತೆ ಯಾವಾಗ ಸಂಪುಟಕ್ಕೆ ಸೇರುವುದು ಎಂದು ತೀರ್ಮಾನ ಮಾಡ್ತಾರೆ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತ ಕುರಿತು ಪ್ರಸ್ತಾಪಿಸಿದ ಅವರು, ಆರ್.ವಿ.ದೇಶಪಾಂಡೆ ಸಿದ್ದರಾಮೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು. ಅದಕ್ಕಾಗಿ ದೇಶಪಾಂಡೆಗೆ ಭಾರತ್ ಜೋಡೋದಲ್ಲಿ ಡಿ.ಕೆ. ಶಿವಕುಮಾರ್ ಯಾವುದೇ ಜವಾಬ್ದಾರಿ ಕೊಡಲಿಲ್ಲ. ಇದು ಅವರ ಆಂತರಿಕ ವಿಚಾರ. ಆದರೆ ಡಿ.ಕೆ. ಶಿವಕುಮಾರ್ ನಿರ್ಧಾರ ಸರಿಯಲ್ಲ. ಏನು ಬಿರಿಯಾನಿ, ಹೆಂಡ, ದುಡ್ಡು ಕೊಟ್ಟು ಜನರನ್ನು ಕರೆದುಕೊಂಡು ಬರಬೇಕಾ? ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂಸ್ಕೃತಿ ಇದೇ ತಾನೇ ಎಂದು ಪ್ರಶ್ನಿಸಿದರು.