ಬೆಂಗಳೂರು: ತನ್ನ ವ್ಯಾಪ್ತಿಯ ಪೌರಕಾರ್ಮಿಕರಿಗೆ ಬಿಸಿಯೂಟ ವಿತರಣೆ ಯೋಜನೆಯನ್ನು ಇಸ್ಕಾನ್ ಅಕ್ಷಯಪಾತ್ರೆ ಫೌಂಡೇಷನ್‌ಗೆ (Iskcon Akshaya Patra Foundation) ಟೆಂಡರ್ ಕರೆಯದೆ ಏಕಪಕ್ಷೀಯವಾಗಿ ಬಿಬಿಎಂಪಿ ಗುತ್ತಿಗೆ ನೀಡಿದೆ. ಅದೂ ಒಂದು ಊಟಕ್ಕೆ ಹೆಚ್ಚುವರಿಯಾಗಿ 2 ರೂ. ನೀಡಿ ಗುತ್ತಿಗೆಯನ್ನು ದಿಢೀರನೆ ಬದಲಾಯಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಕೆಲವು ಕೆಲಸಗಳಿಗೆ ಟೆಂಡರ್ ಅಗತ್ಯವಿಲ್ಲ ಎಂದಿದ್ದಾರೆ. BBMPಯ 17,000 ಪೌರಕಾರ್ಮಿಕರಿಗೆ (Pourakarmikas) ಬಿಸಿಯೂಟ ವಿತರಿಸುವ ಗುತ್ತಿಗೆಯನ್ನು (Bisiyuta contract) ಮೊದಲು ಇಂದಿರಾ ಕ್ಯಾಂಟೀನ್‌ಗೆ ವಹಿಸಲಾಗಿತ್ತು. BBMP ಒಂದು ಊಟಕ್ಕೆ 20 ರೂಪಾಯಿ ಪಾವತಿ ಮಾಡುತ್ತಿತ್ತು. ಇದೀಗ ಇಂದಿರಾ ಕ್ಯಾಂಟೀನ್‌ಗೆ ನೀಡಿದ್ದ ಟೆಂಡರ್ ರದ್ದು ಪಡಿಸಿ, ಟೆಂಡರ್ ಕರೆಯದೆಯೇ, ಅಕ್ಷಯಪಾತ್ರೆ ಫೌಂಡೇಷನ್‌ಗೆ ಗುತ್ತಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ ಒಂದು ಊಟಕ್ಕೆ ಹೆಚ್ಚುವರಿಯಾಗಿ 2 ರೂಪಾಯಿ ನೀಡಿಕೆಯಾಗಿದೆ ಎನ್ನಲಾಗಿದೆ. ಅಂದರೆ ಒಂದು ಊಟಕ್ಕೆ 22 ರೂಪಾಯಿ ನೀಡುತ್ತಿರುವ ಮಾಹಿತಿಯಿದೆ.
ಆರ್ಥಿಕ ಇಲಾಖೆಯ ವಿರೋಧವೂ ಇದೆ:
ಈ ಹಿಂದೆ ಅಕ್ಷಯಪಾತ್ರೆ ಫೌಂಡೇಷನ್ ಒದಗಿಸುತ್ತಿದ್ದ ಬಿಸಿಯೂಟವನ್ನು ತಿರಸ್ಕರಿಸಲಾಗಿತ್ತು. ಬೆಳ್ಳುಳ್ಳಿ, ಈರುಳ್ಳಿ ಬಳಕೆ ಮಾಡುವುದಿಲ್ಲ ಎಂದು ತಿರಸ್ಕರಿಸಲಾಗಿತ್ತು. ಇದೀಗ ಮತ್ತೆ ಇಸ್ಕಾನ್ ಅಕ್ಷಯಪಾತ್ರೆ ಫೌಂಡೇಷನ್‌ಗೇ ಗುತ್ತಿಗೆ ವಹಿಸಲಾಗಿದೆ. ಕುತೂಹಲದ ಸಂಗತಿಯೆಂದರೆ ಆರ್ಥಿಕ ಇಲಾಖೆಯ ವಿರೋಧದ ಮಧ್ಯೆ ಅಕ್ಷಯಪಾತ್ರೆ ಫೌಂಡೇಷನ್‌ಗೆ BBMP ಈ ಗುತ್ತಿಗೆ ನೀಡಿದೆ.
ಆರ್ಥಿಕ ಇಲಾಖೆಯು (Finance Department) ಪೌರಕಾರ್ಮಿಕರಿಗೆ ಬಿಸಿಯೂಟ ವಿತರಿಸುವ ಗುತ್ತಿಗೆಯನ್ನು ಟೆಂಡರ್ ಕರೆದು ಗುತ್ತಿಗೆ ನೀಡಲು ಸೂಚಿಸಿತ್ತು. ಆದರೆ 4ಜಿ ವಿನಾಯಿತಿ ಕೊಟ್ಟು ನೇರವಾಗಿ ಗುತ್ತಿಗೆ ನೀಡಿಕೆಯಾಗಿದೆ. ಕೆಲವು ಕೆಲಸಗಳಿಗೆ ಟೆಂಡರ್ ಅಗತ್ಯವಿಲ್ಲವೆಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಪ್ರತಿಕ್ರಿಯಿಸಿದ್ದಾರೆ.
– ಮುತ್ತಪ್ಪ ಲಮಾಣಿ
Also Read:
ಇಸ್ಕಾನ್ ದೇವಾಲಯದಲ್ಲಿ ವೈಕುಂಠ ದ್ವಾರ ನಿರ್ಮಾಣ, ಹರಿದು ಬಂದ ಜನ ಸಾಗರ
Published On - 8:20 am, Sat, 27 November 21