ರಾಹುಲ್ ಗಾಂಧಿ ನೇತೃತ್ವದ ಪ್ರತಿಭಟನೆಗಾಗಿ ಫ್ರೀಡಂ ಪಾರ್ಕ್ ಪ್ರಾಚೀನ ಗೋಡೆ ನೆಲಸಮ: ಪೊಲೀಸರಿಗೆ ದೂರು ನೀಡಿದ ಬಿಜೆಪಿ

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್‌ನ ಪ್ರತಿಭಟನಾ ಸಮಾವೇಶಕ್ಕಾಗಿ ಉದ್ಯಾನದ ಪ್ರಾಚೀನ ಗೋಡೆ ನೆಲಸಮ ಮಾಡಲಾಗಿದ್ದು ಮತ್ತು ಮರಗಳನ್ನು ಕಡಿಯಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಪರಿಸರ ಹಾನಿ ಮತ್ತು ಸಾರ್ವಜನಿಕ ಆಸ್ತಿಗೆ ನಷ್ಟ ಉಂಟಾಗಿದೆ ಎಂದು ಬಿಜೆಪಿ ಹೇಳಿದ್ದು, ಉಪ್ಪಾರಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.

ರಾಹುಲ್ ಗಾಂಧಿ ನೇತೃತ್ವದ ಪ್ರತಿಭಟನೆಗಾಗಿ ಫ್ರೀಡಂ ಪಾರ್ಕ್ ಪ್ರಾಚೀನ ಗೋಡೆ ನೆಲಸಮ: ಪೊಲೀಸರಿಗೆ ದೂರು ನೀಡಿದ ಬಿಜೆಪಿ
ರಾಹುಲ್ ಗಾಂಧಿ ನೇತೃತ್ವದ ಪ್ರತಿಭಟನೆಗೆ ಬೆಂಗಳೂರಿನ ಫ್ರೀಡಂ ಪಾರ್​ಕ್​​ನಲ್ಲಿ ಮಾಡಲಾಗಿರುವ ಸಿದ್ಧತೆ

Updated on: Aug 05, 2025 | 12:22 PM

ಬೆಂಗಳೂರು, ಆಗಸ್ಟ್ 5: ಮತಕಳ್ಳತನ ಆರೋಪ ಸಂಬಂಧ ಬೆಂಗಳೂರಿನ ಫ್ರೀಡಂ ಪಾರ್ಕ್​​ನಲ್ಲಿ (Freedom Park) ಆಗಸ್ಟ್ 5 ರಂದು ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯಬೇಕಿದ್ದ ಕಾಂಗ್ರೆಸ್ (Congress) ಪ್ರತಿಭಟನಾ ಸಮಾವೇಶ ಆಗಸ್ಟ್ 8 ಕ್ಕೆ ಮುಂದೂಡಿಕೆಯಾಗಿದೆ. ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡ ಬಳಿಕ, ಜಾರ್ಖಂಡ್ ಮಾಜಿ ಸಿಎಂ ಶಿಬು ಸೊರೇನ್ ನಿಧನದ ಕಾರಣ ಸಮಾವೇಶ ಮುಂದೂಡಲಾಗಿತ್ತು. ಆದರೆ, ಪ್ರತಿಭಟನಾ ಸಮಾವೇಶದ ಹೆಸರಿನಲ್ಲಿ ಫ್ರೀಡಂ ಪಾರ್ಕ್​ನ ಪ್ರಾಚೀನ ಗೋಡೆಯೊಂದನ್ನು ನೆಲಸಮ ಮಾಡಲಾಗಿದೆ. ಅಷ್ಟೇ ಅಲ್ಲದೆ, ಮರಗಳನ್ನು ಕಡಿಯಲಾಗಿದೆ ಎಂದು ಬಿಜೆಪಿ ಪೊಲೀಸರಿಗೆ ದೂರು ನೀಡಿದೆ.

ಬಿಜೆಪಿ ನೀಡಿದ ದೂರಿನಲ್ಲೇನಿದೆ?

2024 ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಆಗಸ್ಟ್ 8 ರಂದು ನಗರದ ಪೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದರ ಸಲುವಾಗಿ ಆನೇಕ ವರ್ಷಗಳಿಂದ ಇರುವ ಫ್ರೀಡಂ ಪಾರ್ಕ್‌ ತಡೆಗೋಡೆಯನ್ನು ನೆಲಸಮ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವುದಲ್ಲದೇ ಸಾರ್ವಜನಿಕರ ಆಸ್ತಿಯನ್ನು ನಷ್ಟಪಡಿಸಿ. ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುತ್ತಾರೆ. ಈ ರೀತಿಯ ದುಷ್ಕೃತ್ವವನ್ನು ಮಾಡಲು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ರೀತಿಯ ಅನುಮತಿಯನ್ನು ಪಡೆಯದೆ ಹಾಗೂ ಸಂಬಂಧಪಟ್ಟವರಿಗೆ ತಿಳಿಸದೇ ನಗರದ ಮಧ್ಯ ಭಾಗದಲ್ಲಿರುವ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಆದ ತಡೆಗೋಡೆ (ಕಾಂಪೌಂಡ್) ಅನ್ನು ಕಾಂಗ್ರೆಸ್ ಪಕ್ಷದ ರಾಜಕೀಯ ಕಾರ್ಯಕ್ರಮ ನಡೆಸಲು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ, ಪ್ರಾಚೀನ ಕಾಲದ ಸಾರ್ವಜನಿಕರ ಆಸ್ತಿಯನ್ನು ನಾಶಪಡಿಸಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಬಿಜೆಪಿ ಉಲ್ಲೇಖಿಸಿದೆ.

ಯಾವುದೇ ರೀತಿಯ ಆಧೀಕೃತವಾದ ಪರವಾನಗಿ ಇಲ್ಲದೇ ಆಡಳಿತ ಪಕ್ಷದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತಡೆಗೋಡೆಯನ್ನು (ಕಾಂಪೌಂಡ್) ನೆಲಸಮ ಮಾಡಿ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಿರುವುದು ಕಾನೂನು ಬಾಹಿರ ಕೃತ್ಯವಾಗಿರುತ್ತದೆ. ಈ ದುಷ್ಕೃತ್ಯಕ್ಕೆ ಕಾರಣೀಭೂತರಾದ ಸದರಿ ಕಾರ್ಯಕ್ರಮದ ಆಯೋಜಕರು ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಎಂದು ಉಪ್ಪಾರಪೇಟೆ ಪೊಲೀಸರಿಗೆ ಬಿಜೆಪಿ ಮನವಿ ಮಾಡಿದೆ.

ಪ್ರತಿಭಟನಾ ಸಮಾವೇಶ ಆಯೋಜಕರ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ

ಅನೇಕ ವರ್ಷಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ಬೆಳೆದು ನಿಂತಿದ್ದ ದೊಡ್ಡ ಮರಗಳನ್ನು ಪ್ರತಿಭಟನೆಯ ಸಲುವಾಗಿ ಕಡಿದು ಹಾಕಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿರುವುದಲ್ಲದೇ ಪರಿಸರವನ್ನು ನಾಶಪಡಿಸಿರುತ್ತಾರೆ. ಈ ರೀತಿಯ ದುಷ್ಕೃತ್ಯವನ್ನು ಮಾಡಲು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ರೀತಿಯ ಅನುಮತಿಯನ್ನು ಪಡೆಯದೇ ಹಾಗೂ ಸಬಂಧಪಟ್ಟವರಿಗೆ ತಿಳಿಸದೇ ನಗರದ ಮಧ್ಯ ಭಾಗದಲ್ಲಿರುವ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಆಗಿ ಬೆಳೆದಿರುವ ಮರವನ್ನು ಕಾಂಗ್ರೆಸ್ ಪಕ್ಷದ ರಾಜಕೀಯ ಕಾರ್ಯಕ್ರಮವನ್ನು ನಡೆಸಲು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ, ಜನಸಾಮಾನ್ಯರಿಗೆ ತೊಂದೆಯನ್ನುಂಟು ಮಾಡಿರುತ್ತಾರೆ ಎಂದು ಬಿಜೆಪಿ ದೂರಿದೆ.

ಇದನ್ನೂ ಓದಿ: ಮತ ಕಳ್ಳತನ ಆರೋಪ: ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಮಾವೇಶ ಮುಂದೂಡಿಕೆ

ಆಡಳಿತ ಪಕ್ಷದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮರಗಳನ್ನು ಕತ್ತರಿಸಿರುವುದು ಕಾನೂನು ಬಾಹಿರ. ಇದಕ್ಕೆ ಕಾರಣೀಭೂತರಾದ ಕಾರ್ಯಕ್ರಮದ ಆಯೋಜಕರು ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಬಿಜೆಪಿ ಆಗ್ರಹಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ