ಬೆಂಗಳೂರು, ಮಾ.19: ನಗರದ ನಗರ್ತಪೇಟೆಯಲ್ಲಿ (Nagarathpete) ಮೊಬೈಲ್ ಶಾಪ್ನಲ್ಲಿ ಯುವಕನೊಬ್ಬ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಯುವಕರ ತಂಡ ಹಲ್ಲೆ (Assault) ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ (BJP) ಪ್ರತಿಭಟನೆ ನಡೆಸುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao), ಯುವಕನ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿರುವುದು ತಪ್ಪು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಅಲ್ಲದೆ, ಪ್ರಕರಣವನ್ನು ಬಿಜೆಪಿ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಯುವಕನ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿರುವುದು ತಪ್ಪು. ಆದರೆ ಇದಕ್ಕೆ ಬೇರೆ ಬಣ್ಣ ಕೊಟ್ಟು ವಿಷಯ ಹರಡಲಾಗುತ್ತಿದೆ. ಈ ವಿಚಾರವನ್ನು ಬಿಜೆಪಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ. ಬಿಜೆಪಿಯವರಿಗೆ ಭಾವನಾತ್ಮಕ ವಿಚಾರಗಳೇ ಬೇಕು. ಇಂತಹ ಘಟನೆಗಳ ನಡೆಯಲಿ ಅಂತ ಕಾಯುತ್ತಿರುತ್ತಾರೆ. ಉರಿಯುವ ಬೆಂಕಿಗೆ ತುಪ್ಪ ಸುರಿಯೋದು ಇವರ ಉದ್ದೇಶ ಎಂದರು.
ಇದನ್ನೂ ಓದಿ: ನಗರತ್ ಪೇಟೆ ಹಲ್ಲೆ ಪ್ರಕರಣ: ಆರೋಪಿಗಳ ಮತಾಂಧಂತೆಯ ಎಕ್ಸ್ಕ್ಲೂಸಿವ್ ಮಾಹಿತಿ ಇಲ್ಲಿದೆ
ಪ್ರಕರಣ ಸಂಬಂಧ ದೂರಿನಲ್ಲಿ ಎಲ್ಲಿ ಕೂಡ ಹನುಮಾನ್ ಚಾಲೀಸಾ ಮತ್ತು ಆಜಾನ್ ಬಗ್ಗೆ ಪ್ರಸ್ತಾಪ ಇಲ್ಲ. ಸಂಸದ ತೇಜಸ್ವಿ ಸೂರ್ಯ ಅವರು ದ್ವೇಷದ ವಾತಾವರಣ ಸೃಷ್ಟಿಸಲು ವರ್ತಿಸಿರುವುದು ಖಂಡನೀಯ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೇಗೆ ನಡೆದುಕೊಳ್ಳಬೇಕು ಎಂದು ತಿಳಿದುಕೊಳ್ಳಬೇಕು. ಅನಾವಶ್ಯಕವಾಗಿ ಭಯ ಹುಟ್ಟಿಸಲಾಗುತ್ತಿದೆ. ಚುನಾವಣೆ ಇದೆ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಯೊಂದರಲ್ಲೂ ಕಾಂಗ್ರೆಸ್ ಅನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಯತ್ನಿಸಲಾಗುತ್ತಿದೆ. ಇವರಿವರೇ ಸೃಷ್ಟಿ ಮಾಡಿ ಭಯ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಕ್ಷುಲ್ಲಕ ಕೀಳುಮಟ್ಟದ ಯೋಚನೆ ಬಿಜೆಪಿಯವರದ್ದು. ಏನಾದರೂ ಗಲಾಟೆ ಆಗಲಿ ಇವರಿಗೆ ವೋಟು ಮುಖ್ಯ. ನಿಜ ಏನು ಎಂಬುದನ್ನು ತಿಳಿದುಕೊಳ್ಳದೇ ಚರ್ಚೆ ಮಾಡಲಾಗುತ್ತಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ