ಬೆಂಗಳೂರಿನ ನಗರತ್ ಪೇಟೆಯಲ್ಲಿ ಮೊಬೈಲ್ ಅಂಗಡಿ ಮಾಲೀಕ ಮುಖೇಶ್ ಮೇಲೆ ಮತಾಂಧರು ಹಲ್ಲೆ ನಡೆಸಿದ್ದನ್ನು ಖಂಡಿಸಿ ಇಂದು(ಮಾ.19) ನಗರತ್ ಪೇಟೆಯಲ್ಲಿ ಹನುಮಾನ್ ಚಾಲೀಸಾ ಪಠಿಸುವ ಮೂಲಕ ಬಿಜೆಪಿ ವತಿಯಿಂದ ಪ್ರತಿಭಟನೆ, ಜೊತೆಗೆ ರ್‍ಯಾಲಿ ನಡೆಸಿತು.
ಈ ರ್‍ಯಾಲಿಯಲ್ಲಿ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ ರಾಮಮೂರ್ತಿ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್ ಹರೀಶ್, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಸೇರಿದಂತೆ ಶಾಸಕರು ಹಾಗೂ ಹಲವು ನಾಯಕರು ಮತ್ತು ಹನುಮ ಭಕ್ತರು ಪಾಲ್ಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇನ್ನು ಘಟನಾ ಸ್ಥಳದಲ್ಲಿ ಹಿಂದೂ ಹನುಮ ಭಕ್ತರು ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಜೊತೆಗೆ ಸ್ಥಳಕ್ಕೆ ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಭೇಟಿ ನೀಡಿದ್ದರು. ಹಲ್ಲೆಗೊಳಗಾದ ಯುವಕ ಮುಖೇಶ್ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅಂಗಡಿ ಕೃಷ್ಣ ಟೆಲಿಕಾಂ ಮುಂಭಾಗದಲ್ಲಿ ಜಮಾವಣೆಯಾಗಿದ್ದರು. ಇದೇ ವೇಳೆ ಹನುಮಾನ್ ಚಾಲೀಸಾ ಓದಿದರು.
ಹಲ್ಲೆಗೊಳಗಾದ ಮುಖೇಶ್ನನ್ನು ಪೊಲೀಸರು ಜೀಪ್ನಲ್ಲಿ ಕರೆದೊಯ್ಯಲು ಮುಂದಾಗಿದ್ದರು. ಈ ವೇಳೆ ಪೊಲೀಸ್ ವಾಹನದ ಮುಂದೆ ನಿಂತು ಶಾಸಕ ಸುರೇಶ್ಕುಮಾರ್ ಪ್ರತಿಭಟನೆ ನಡೆಸಿದರು. ಈ ವೇಳೆ ತಳ್ಳಾಟ, ನೂಕಾಟ ನಡೆದಿದ್ದು, ಶಾಸಕ ಸುರೇಶ್ಕುಮಾರ್ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.
ಇನ್ನು ನೀತಿ ಸಂಹಿತೆ ಜಾರಿಯಾಗಿದೆ ಪ್ರತಿಭಟನೆ ಮಾಡಲು ಅವಕಾಶ ಇಲ್ಲ ಎಂದು ಪೊಲೀಸರು ಹೇಳಿದ್ದರಿಂದ ಇದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಹಿಂದೂ ಕಾರ್ಯಕರ್ತರು ಮುಖೇಶ್ನನ್ನು ಪೊಲೀಸ್ ವಾಹನದಿಂದ ಕೆಳಗೆ ಇಳಿಸಿಕೊಂಡರು.
Published On - 4:47 pm, Tue, 19 March 24