ಬೆಂಗಳೂರು, ಏಪ್ರಿಲ್ 21: ರಾಜ್ಯದಲ್ಲಿ ಎರಡು ಮೂರು ತಿಂಗಳಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಿಂದೂಗಳ ಜೀವಕ್ಕೆ ಬೆಲೆ ಇಲ್ಲವಾಗಿದೆ. ಮತಾಂಧರಿಗೆ (fundamentalists) ಕುಮ್ಮಕ್ಕು ಸಿಗುತ್ತಿದೆ. ಇವರು ಏನೇ ಮಾಡಿದರೂ ನೆರವು ನೀಡಲು ಕಾಂಗ್ರೆಸ್ ಸಿದ್ಧ ಇದೆ ಎಂದು ಬಿಜೆಪಿ ನಾಯಕ ಮಾಜಿ ಮಾಜಿ ಗೃಹಮಂತ್ರಿ ಆರ್ ಅಶೋಕ್ (R Ashok) ಆರೋಪ ಮಾಡಿದ್ದಾರೆ. ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಬಿದರಗುಪ್ಪೆಯಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಆರ್ ಅಶೋಕ್, ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಇದ್ದಂತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಜೈ ಶ್ರೀರಾಮ್ ಎಂದರೆ ಬಡಿದು ಹಾಕ್ತಾರೆ. ಹನುಮಾನ್ ಚಾಲೀಸ ಹಾಕಿದರೆ ಹಲ್ಲೆ ಮಾಡುತ್ತಾರೆ. ಆದರೆ, ಪಾಕಿಸ್ತಾನ್ ಜಿಂದಾಬಾದ್ ಅಂದ್ರೆ ಬಿರಿಯಾನಿ ಕೊಡ್ತಾರೆ. ಜೊತೆಗೆ ವಿಧಾನಸೌಧಕ್ಕೂ ಪಾಸ್ ಕೊಡ್ತಾರೆ ಎಂದು ವಿಪಕ್ಷ ನಾಯಕರೂ ಆದ ಅವರು ಕಿಡಿ ಕಾರಿದ್ದಾರೆ.
ಡಿಕೆ ಸುರೇಶ್ ಭಾಗವಹಿಸಿದ್ದ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಲಾಯಿತು ಎನ್ನಲಾದ ಘಟನೆಯನ್ನು ಅಶೋಕ್ ಉಲ್ಲೇಖಿಸಿದ್ದಾರೆ. ‘ಡಿಕೆ ಸುರೇಶ್ ಈ ದೇಶ ಇಬ್ಭಾಗ ಮಾಡಬೇಕು ಅಂತಿದಾರೆ ಬಿಡಿ. ದೇಶ ವಿಭಜನೆ ಮಾಡಿದ ಗ್ಯಾಂಗ್ ಇವರದ್ದು,’ ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ: ಪಿಸ್ತೂಲ್ ಇಟ್ಕೊಂಡು ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ ಪ್ರಕರಣ; ಪಿಎಸ್ಐ ಸೇರಿ ನಾಲ್ವರು ಸಸ್ಪೆಂಡ್
ಹುಬ್ಬಳ್ಳಿಯ ನೇಹಾ ಕೊಲೆ ಘಟನೆ ಬಗ್ಗೆ ಮಾತನಾಡಿದ ಅವರು, ಈ ಘಟನೆಗಳನ್ನೆಲ್ಲಾ ನೋಡಿದರೆ ಕಾನೂನು ಸುವ್ಯವಸ್ಥೆಯೇ ಈ ರಾಜ್ಯದಲ್ಲಿ ಇಲ್ಲ ಅನಿಸುತ್ತದೆ ಎಂದಿದ್ದಾರೆ.
ನೇಹಾ ಕೊಲೆ ಘೋರ ದುರಂತವಾಗಿದೆ. ಲವ್ ಜಿಹಾದ್ ಎಂದು ನಾವು ಹೇಳಿದರೆ ನಿಮ್ಮ ಹೊಟ್ಟೆಗೆ ಬೆಂಕಿ ಬಿದ್ದಂತಾಗುತ್ತದೆ. ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಅವರೆಯೇ ಲವ್ ಜಿಹಾದ್ ಎನ್ನುತ್ತಿದ್ದಾರೆ. ನಿಮ್ಮ ಪಕ್ಷದ ಕಾರ್ಯಕರ್ತರನ ರಕ್ಷಣೆ ಮಾಡುವ ಯೋಗ್ಯತೆಯೂ ನಿಮಗೆ ಇಲ್ಲವಾಗಿದೆ. ನೇಹಾ ಕೊಲೆ ಲವ್ ವಿಚಾರಕ್ಕೆ ಆಗಿದ್ದು ಎಂದು ಪ್ರಕರಣ ಮುಚ್ಚಿಹಾಕಲು ಹೊರಟಿದ್ದಾರೆ ಎಂದು ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವ್ಯತ್ಯಾಸ ಇಷ್ಟೇ! ಕಾಂಗ್ರೆಸ್ನ ಚೊಂಬಾಸ್ತ್ರಕ್ಕೆ ಟ್ವೀಟ್ನಲ್ಲೇ ತಿರುಗೇಟು ನೀಡಿದ ಬಿಜೆಪಿ
ನೇಹಾ ಕೊಲೆ ಪ್ರಕರಣವನ್ನು ಸಿದ್ದರಾಮಯ್ಯ ಪ್ರೇಮಿಗಳ ಕಲಹ ಎನ್ನುತ್ತಾರೆ. ಜಿ ಪರಮೇಶ್ವರ್ ಒಂದು ಹೆಜ್ಜೆ ಮುಂದೆ ಹೋಗಿ ದಾಖಲೆ ಬಿಡುಗಡೆ ಮಾಡುತ್ತಾರೆ. ಮಾರನೆ ದಿನ ತಮ್ಮ ಹೇಳಿಕೆಯಿಂದ ಬೇಸರ ಆಗಿದ್ದರೆ ಕ್ಷಮಿಸಿ ಅನ್ನುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹುಬ್ಬಳ್ಳಿ ಘಟನೆಯ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕ ಆಗ್ರಹ ಮಾಡಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ