
ಬೆಂಗಳೂರು, ಅಕ್ಟೋಬರ್ 25: ದಿನ ಬೆಳಗಾದರೆ ‘ವೋಟ್ ಚೋರಿ’ ಎಂದು ಬಿಜೆಪಿ ಹಾಗೂ ಇತರ ಪಕ್ಷಗಳ ವಿರುದ್ಧ ಸುಳ್ಳಿನ ಸರಮಾಲೆ ಹೆಣೆಯುವ ಕಾಂಗ್ರೆಸ್‌ಗೆ ಈಗ ಸ್ವಪಕ್ಷದ ನಾಯಕರ ನಕಲಿ ಮತದಾನದ ಆರೋಪವೇ ತಿರುಗೇಟು ನೀಡಿದೆ. ಹಾವೇರಿಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ವೇಳೆ ಸಚಿವರ ಸಮ್ಮುಖದಲ್ಲೇ ನಕಲಿ ಮತದಾನ ನಡೆದಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಎಕ್ಸ್ ಪೋಸ್ಟ್ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಆರ್. ಅಶೋಕ್ ಪೋಸ್ಟ್ನಲ್ಲಿ ಹೇಳಿರುವಂತೆ, ಹಾವೇರಿಯಲ್ಲಿ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರೊಂದಿಗೆ ಬಂದ ಕಾಂಗ್ರೆಸ್ ಕಾರ್ಯಕರ್ತೆ ಶಿಲ್ಪಾ ಬಡಮ್ಯನವರ ಎಂಬುವವರು, ಸಂಜೀವಕುಮಾರ್ ನೀರಲಗಿ ಅವರ ಪತ್ನಿ ಆಶಾ ಪಾಟೀಲ್ ಅವರ ಹೆಸರಿನಲ್ಲಿ ನಕಲಿ ಮತ ಚಲಾಯಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತಮ್ಮದೇ ಸಮ್ಮುಖದಲ್ಲಿ ನಡೆದ ಈ ಅಕ್ರಮದ ಬಗ್ಗೆ ಸಚಿವರು ಹೊಣೆಗಾರಿಕೆಯಿಂದ ಉತ್ತರಿಸುವ ಬದಲು ಜಾರಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
“ಬೇರೆಯವರಿಗೆ ಪ್ರಜಾಪ್ರಭುತ್ವ ಹಾಗೂ ಪಾರದರ್ಶಕತೆಯ ಪಾಠ ಹೇಳುವ ಕಾಂಗ್ರೆಸ್ ನಾಯಕರು, ತಮ್ಮ ಪಕ್ಷದವರೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಮೌನಕ್ಕೆ ಶರಣಾಗಿದ್ದಾರೆ,” ಎಂದು ಅಶೋಕ್ ಕಿಡಿಕಾರಿದ್ದಾರೆ. ಮತ ಕಳ್ಳತನ ಮಾಡುವ ಕಾಂಗ್ರೆಸ್‌ಗೆ ಚುನಾವಣಾ ಆಯೋಗ ಅಥವಾ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಮತದಾನ ಎಂಬುದು ಪ್ರಜಾಪ್ರಭುತ್ವದ ಪವಿತ್ರ ಹಕ್ಕು. ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು ಹಾಗೂ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಜರುಗಿಸಬೇಕು ಎಂದು ಆರ್ ಅಶೋಕ್ ಆಗ್ರಹಿಸಿದ್ದಾರೆ. ಈ ಬೂಟಾಟಿಕೆಗೆ ಮುಂಬರುವ ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:16 am, Sun, 25 October 26