ರಾಕೇಶ್ ಟಿಕಾಯತ್ ಮೇಲೆ ಮಸಿ ಎರಚಿದ್ದ ಪ್ರಕರಣ: ಆರೋಪಿ ಭರತ್​ ಶೆಟ್ಟಿಗೆ ಕೊಲೆ ಬೆದರಿಕೆ ಸಂದೇಶ

|

Updated on: Apr 07, 2023 | 11:26 AM

ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಮೇಲೆ ಮಸಿ ಎರಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಸಿ ಎರಚಿದ್ದ ಆರೋಪಿ ಭರತ್ ಶೆಟ್ಟಿಗೆ ಬೆದರಿಕೆ ಸಂದೇಶಗಳು ಬರುತ್ತಿವೆಯಂತೆ.

ರಾಕೇಶ್ ಟಿಕಾಯತ್ ಮೇಲೆ ಮಸಿ ಎರಚಿದ್ದ ಪ್ರಕರಣ: ಆರೋಪಿ ಭರತ್​ ಶೆಟ್ಟಿಗೆ ಕೊಲೆ ಬೆದರಿಕೆ ಸಂದೇಶ
ಭರತ್​ ಶೆಟ್ಟಿಗೆ ಕೊಲೆ ಬೆದರಿಕೆ
Follow us on

ಬೆಂಗಳೂರು: ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ (Rakesh Tikait) ಅವರ ಮೇಲೆ ಮಸಿ ಎರಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ, ಹಿಂದುತ್ವ ಸಂಘಟನೆಯ ಕಾರ್ಯಕರ್ತ ಭರತ್ ಶೆಟ್ಟಿಯವರಿಗೆ (Bharath Shetty) ಕೊಲೆ ಬೆದರಿಕೆ ಸಂದೇಶಗಳು ಬರುತ್ತಿವೆಯಂತೆ. ಈ ಹಿನ್ನೆಲೆ ಭರತ್ ಶೆಟ್ಟಿಯವರು ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ಎನ್​​ಸಿಆರ್ (Non Cognizable Report-NCR) ದಾಖಲಿಸಿದ್ದಾರೆ. ಒಸಾಮಾ ಶಾ ಎನ್ನುವ ಫೇಸ್ ಬುಕ್ ಖಾತೆಯಿಂದ ಬೆದರಿಕೆ ಸಂದೇಶ ಬರುತ್ತಿದೆ. ಅಲ್ಲದೇ ವಾಟ್ಸ್ ಆ್ಯಪ್‌ ಮೂಲಕವೂ, ಮಸಿ‌ ಬಳಿದು ಅವಮಾನಿಸಿದಕ್ಕೆ ತಿರುಗೇಟು ನೀಡುತ್ತೇವೆ ಎಂಬ ಕೊಲೆ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಎನ್​​ಸಿಆರ್ ದಾಖಲಿಸಿದ್ದಾರೆ.

ಏನಿದು ರಾಕೇಶ್ ಟಿಕಾಯತ್ ಮೇಲೆ ಮಸಿ ಎರಚಿದ್ದ ಪ್ರಕರಣ

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಗಳಲ್ಲಿ ರಾಕೇಶ್​ ಟಿಕಾಯತ್ ಅವರು ಮುಂಚೂಣಿಯಲ್ಲಿದ್ದರು. ಈ ವೇಳೆ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ರಾಕೇಶ್ ಟಿಕಾಯತ್ ಪರಸ್ಪರ ಭ್ರಷ್ಟಾಚಾರದ ಆರೋಪಗಳನ್ನು ಮಾಡಿಕೊಂಡಿದ್ದರು.

ಕೋಡಿಹಳ್ಳಿ ಚಂದ್ರಶೇಖರ್ ಅವರು ಮಾಡಿರುವ ಆರೋಪಗಳಿಗೆ ಉತ್ತರ ನೀಡಲೆಂದು 2022ರ ಮೇ 20 ರಂದು ರಾಕೇಶ್ ಟಿಕಾಯತ್ ಬೆಂಗಳೂರಿನ ಗಾಂಧಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಈ ವೇಳೆ ಆರೋಪಿ ಭರತ್​ ಶೆಟ್ಟಿ ಮಸಿ ಎರಚಿದ್ದಾರೆ. ಬಳಿಕ ಕೆಲ ಕಾಲ ಗದ್ದಲ ಏರ್ಪಟ್ಟಿತ್ತು.

450 ಪುಟಗಳ ಆರೋಪ ಪಟ್ಟಿ ಸಲ್ಲಿಕೆ

ಆರೋಪಿಗಳ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು 450 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದರು. ಹಿಂದುತ್ವ ಸಂಘಟನೆಯ ಕಾರ್ಯಕರ್ತ ಭರತ್ ಶೆಟ್ಟಿ, ಆತನ ಸಹಚರರಾದ ಶಿವಕುಮಾರ್, ಪ್ರದೀಪ್ ಕುಮಾರ್ ಮತ್ತು ಉಮಾದೇವಿ ಸೇರಿದಂತೆ ಬಂಧಿತರ ವಿರುದ್ಧ ಜಾರ್ಜ್​ಶೀಟ್​ ಸಲ್ಲಿಸಲಾಗಿತ್ತು. 20 ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ 89 ಜನರ ಸಾಕ್ಷಿಗಳನ್ನು 8ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACMM) ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ.

ವರದಿಗಳ ಪ್ರಕಾರ, ಉನ್ನತ ಅಧಿಕಾರಿಗಳ ಗಮನ ಸೆಳೆಯುವುದು ದಾಳಿಯ ಪ್ರಾಥಮಿಕ ಗುರಿಯಾಗಿದೆ ಎಂದು ಆರೋಪಿಗಳು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ಫೇಮಸ್ ಆಗುವ ಉದ್ದೇಶದಿಂದ ಟಿಕಾಯತ್ ಮೇಲೆ ಮಸಿ ಎರಚಿರುವುದಾಗಿ ಒಪ್ಪಿಕೊಂಡಿರುವ ಪ್ರಮುಖ ಆರೋಪಿ ಭರತ್ ಶೆಟ್ಟಿಯ ಆಡಿಯೋವನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:53 am, Fri, 7 April 23