
ಬೆಂಗಳೂರು, ಅಕ್ಟೋಬರ್ 7: ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಶುಭ ಸುದ್ದಿ ನೀಡಿದೆ. ಮೆಟ್ರೋ ನಿಲ್ದಾಣಗಳ ಬಳಿ ಪಾರ್ಕಿಂಗ್ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಹೊಸದಾಗಿ 12 ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಹಲವು ಪ್ರಯಾಣಿಕರು ಮೆಟ್ರೋ ಬಳಸಲು ಹಿಂದೇಟು ಹಾಕುತ್ತಿದ್ದರು. ಖಾಸಗಿ ವಾಹನಗಳನ್ನೇ ಅವಲಂಬಿಸುತ್ತಿದ್ದ ಪ್ರಯಾಣಿಕರನ್ನು ಮೆಟ್ರೋ ಕಡೆ ಸೆಳೆಯಲು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಮೆಟ್ರೋ ಕನೆಕ್ಟಿವಿಟಿ ಹೆಚ್ಚಿಸುವ ಉದ್ದೇಶದಿಂದ ಪಾರ್ಕಿಂಗ್ ಇಲ್ಲದ ನಿಲ್ದಾಣಗಳಲ್ಲಿ ಜಾಗ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಈಗಿರುವ ಹಾಗೂ ಮುಂಬರುವ ಗುಲಾಬಿ ಮಾರ್ಗ ಸೇರಿದಂತೆ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ 12 ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಬಿಎಂಆರ್‌ಸಿಎಲ್ ಟೆಂಡರ್ ಆಹ್ವಾನಿಸಿದೆ. ಬೈಕ್, ಕಾರು ಹಾಗೂ ಜೀಪ್‌ಗಳಿಗೆ ಶುಲ್ಕ ನಿಗದಿ ಮಾಡಿ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಸೈಕಲ್‌ಗಳಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಇರಲಿದೆ.
ನಲ್ಲೂರುಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 82 ಬೈಕ್‌ಗಳಿಗೆ, ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣದಲ್ಲಿ 186 ಬೈಕ್‌ಗಳಿಗೆ, ಹೊಸಹಳ್ಳಿ ನಿಲ್ದಾಣದಲ್ಲಿ 156 ಬೈಕ್‌ಗಳಿಗೆ ಹಾಗೂ ಪಟ್ಟಣಗೆರೆ ನಿಲ್ದಾಣದಲ್ಲಿ 328 ಬೈಕ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮಾದಾವರದಲ್ಲಿ 328 ಬೈಕ್, ಚಿಕ್ಕಬಿದರಕಲ್ಲಿನಲ್ಲಿ 355 ಬೈಕ್, ಮಂತ್ರಿ ಸ್ಕ್ವೇರ್‌ನಲ್ಲಿ 450 ಬೈಕ್ ಮತ್ತು 87 ಕಾರು, ರಾಗಿಗುಡ್ಡದಲ್ಲಿ 230 ಬೈಕ್, ಬಿಟಿಎಂ ಲೇಔಟ್‌ನಲ್ಲಿ 216 ಬೈಕ್ ಹಾಗೂ ತಾವರೆಕೆರೆಯಲ್ಲಿ 155 ಬೈಕ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ.
ಐಐಎಂ-ಬಿ ನಿಲ್ದಾಣದಲ್ಲಿ 55 ಬೈಕ್, ಹುಳಿಮಾವು ನಿಲ್ದಾಣದಲ್ಲಿ 155 ಬೈಕ್ ಹಾಗೂ ಕಾಳೇನ ಅಗ್ರಹಾರ ನಿಲ್ದಾಣದಲ್ಲಿ 110 ಬೈಕ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ 12 ಮೆಟ್ರೋ ನಿಲ್ದಾಣಗಳಲ್ಲಿ ಒಟ್ಟು ಕನಿಷ್ಠ 2,424 ಬೈಕ್‌ಗಳು ಹಾಗೂ 87 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ.
ಬೈಕ್‌ಗಳಿಗೆ ಮೊದಲ ನಾಲ್ಕು ಗಂಟೆಗೆ ₹15 ಶುಲ್ಕ ನಿಗದಿ ಮಾಡಲಾಗಿದೆ. ಬಳಿಕ ಪ್ರತಿ ಗಂಟೆಗೆ ₹5 ಶುಲ್ಕ ಇರಲಿದೆ. ದಿನದ ಪಾರ್ಕಿಂಗ್ ಶುಲ್ಕ ₹30 ಆಗಿರಲಿದೆ. ಕಾರು ಹಾಗೂ ಜೀಪ್‌ಗಳಿಗೆ ಮೊದಲ ನಾಲ್ಕು ಗಂಟೆಗೆ ₹30 ಶುಲ್ಕ ಇರಲಿದ್ದು, ಬಳಿಕ ಪ್ರತಿ ಗಂಟೆಗೆ ₹10 ಶುಲ್ಕ ವಿಧಿಸಲಾಗುತ್ತದೆ. ದಿನದ ಪಾರ್ಕಿಂಗ್ ಶುಲ್ಕ ₹60 ಇರಲಿದೆ.
ಇದನ್ನೂ ಓದಿ: ಹೊಸ ರೈಲುಗಳ ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ: ಶೀಘ್ರವೇ ನಮ್ಮ ಮೆಟ್ರೋ ಪಿಂಕ್ ಲೈನ್ ಕಾರ್ಯಾರಂಭ ಸಾಧ್ಯತೆ
ಪಾರ್ಕಿಂಗ್ ಸಮಸ್ಯೆ ನಿವಾರಿಸುವ ಮೂಲಕ ಹೆಚ್ಚಿನ ಪ್ರಯಾಣಿಕರನ್ನು ಮೆಟ್ರೋ ಕಡೆ ಸೆಳೆಯಲು ಬಿಎಂಆರ್‌ಸಿಎಲ್ ಈ ಕ್ರಮಕ್ಕೆ ಮುಂದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ