ಬೆಂಗಳೂರು, ಜೂನ್ 12: ನಮ್ಮ ಮೆಟ್ರೋದ (Namma Metro) ಮೊದಲ ಚಾಲಕ ರಹಿತ ರೈಲು (Driverless Metro Train) ಶೀಘ್ರದಲ್ಲೇ ಹಳಿಗಿಳಿಯಲಿದೆ. ಸಿಗ್ನಲಿಂಗ್ ವ್ಯವಸ್ಥೆ ಮತ್ತು ಇಂಟಿಗ್ರೇಷನ್ ಟೆಸ್ಟಿಂಗ್ ಯೆಲ್ಲೋ ಲೈನ್ನಲ್ಲಿ ನಡೆಯಲಿದೆ ಎಂದು ಬಿಎಂಅರ್ಸಿಎಲ್ (BMRCL) ತಿಳಿಸಿದೆ. ಚಾಲಕ ರಹಿತ ರೈಲಿನ ಆರು ಬೋಗಿಗಳ ಮೊದಲ ಸೆಟ್ ಫೆಬ್ರವರಿ 20ರಂದು ಚೀನಾದಿಂದ ಹೆಬ್ಬಗೋಡಿ ಮೆಟ್ರೋ ಡಿಪೋ ತಲುಪಿತ್ತು. ಪ್ರಸ್ತುತ ಸಿಗ್ನಲಿಂಗ್ ಟೆಸ್ಟ್ ಚಾಲಕ ರಹಿತ ರೈಲುಗಳ ಮುಖ್ಯ ಪರೀಕ್ಷೆಯ ಭಾಗವಾಗಿದೆ ಎಂದು ಯೋಜನೆಯ ಭಾಗವಾಗಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ, ಕೋಚ್‌ಗಳು ಸ್ಟ್ಯಾಟಿಕ್ ಮತ್ತು ಎಲೆಕ್ಟ್ರಿಕಲ್ ಸರ್ಕ್ಯೂಟ್ ಪರೀಕ್ಷೆಗೆ ಒಳಗಾಗುತ್ತಿವೆ. ಶೀಘ್ರದಲ್ಲೇ, ಅವುಗಳನ್ನು ಮುಖ್ಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲನ್ನು ಒಟ್ಟು 37 ಟೆಸ್ಟಿಂಗ್ಗೆ ಒಳಪಡಿಸಲಾಗುವುದು. ಮುಂಬರುವ ಟೆಸ್ಟಿಂಗ್ಗಳು ಸಿಗ್ನಲಿಂಗ್, ಟೆಲಿಕಮ್ಯುನಿಕೇಷನ್ಸ್ ಮತ್ತು ವಿದ್ಯುತ್ ಪೂರೈಕೆಯೊಂದಿಗೆ ವ್ಯವಸ್ಥೆಯನ್ನು ವಿಲೀನಗೊಳಿಸುವ ಗುರಿಯನ್ನು ಹೊಂದಿವೆ. ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ ಮತ್ತು ಕಮಿಷನರ್ ಆಫ್ ಮೆಟ್ರೋ ರೈಲ್ ಸೇಫ್ಟಿಯಿಂದ ಸುರಕ್ಷತಾ ತಪಾಸಣೆಗಳು ನಡೆಯಬೇಕಿದೆ. ಸಂಚಾರ ಆರಂಭಿಸುವ ಮುನ್ನ ಆರ್‌ಡಿಎಸ್‌ಒ ಮತ್ತು ಸಿಎಮ್‌ಆರ್‌ಎಸ್‌ನಿಂದ ಸಲಹೆಗಳನ್ನು ಪಡೆಯುವ ಮತ್ತು ರೈಲ್ವೆ ಮಂಡಳಿಯಿಂದ ಅನುಮೋದನೆ ಪಡೆಯುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಅಗತ್ಯವಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಅಬುಧಾಬಿ ಮಧ್ಯೆ ಪ್ರತಿ ದಿನ ಸಂಚರಿಸಲಿದೆ ಏರ್ ಇಂಡಿಯಾ ಎಕ್ಸ್ಪ್ರೆಸ್
ಸುಮಾರು 18.82 ಕಿಲೋಮೀಟರ್ ಉದ್ದ ಯೆಲ್ಲೋ ಲೈನ್ ಈ ವರ್ಷದ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಸಿದ್ಧವಾಗಲಿದೆ. ಆರ್ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕವನ್ನು ಕಲ್ಪಿಸುವ ಈ ಮಾರ್ಗದಲ್ಲಿ 16 ನಿಲ್ದಾಣಗಳು ಇವೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಭಾರೀ ಸಂಚಾರ ದಟ್ಟಣೆಯನ್ನು ನಿವಾರಿಸಲು ರಾಗಿ ಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ 3.13 ಕಿಲೋಮೀಟರ್ ಉದ್ದದ ಸಂಯೋಜಿತ ಮೆಟ್ರೋ ಮತ್ತು ರಸ್ತೆ ಮೇಲ್ಸೇತುವೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ