13 ದಿನಗಳ ಜೀವನ್ಮರಣ ಹೋರಾಟ, 7 ಸರ್ಜರಿ: ಕೊನೆಗೂ ಬದುಕುಳಿಯಲಿಲ್ಲ ಬೆಂಗಳೂರು ವಿವಿ ವಿದ್ಯಾರ್ಥಿನಿ ಶಿಲ್ಪಾ
Bangalore University: ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಪ್ರಥಮ ಎಂಎಸ್ಸಿ ಗಣಿತ ಶಾಸ್ತ್ರದಲ್ಲಿ ವ್ಯಾಸಂಗ ಮಾಡುತ್ತಿದ್ದ ಕೋಲಾರದ ಕೆಜಿಎಫ್ ಮೂಲದ ವಿದ್ಯಾರ್ಥಿನಿ ಶಿಲ್ಪಶ್ರೀ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಬೆಂಗಳೂರು: ಕಳೆದ ಅಕ್ಟೋಬರ್ 10ರಂದು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ(Bangalore University Jnanabharathi Campus) ಬಿಎಂಟಿಸಿ(BMTC Accident) ಬಸ್ ಹರಿದು ಶಿಲ್ಪಾ ಎಂಬ ವಿದ್ಯಾರ್ಥಿನಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಶಿಲ್ಪಾ ಇಂದು ಮುಂಜಾನೆ 4:30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಪ್ರಥಮ ಎಂಎಸ್ಸಿ ಗಣಿತ ಶಾಸ್ತ್ರದಲ್ಲಿ ವ್ಯಾಸಂಗ ಮಾಡುತ್ತಿದ್ದ ಕೋಲಾರದ ಕೆಜಿಎಫ್ ಮೂಲದ ವಿದ್ಯಾರ್ಥಿನಿ ಶಿಲ್ಪಶ್ರೀ ಆರ್ (22) ಹಾಗೂ ಕೆಲ ವಿದ್ಯಾರ್ಥಿನಿಯರು ಮಹಿಳಾ ವಸತಿ ನಿಲಯದ ಬಳಿ ಬಸ್ಸು ಇಳಿಯುವ ಸಂದರ್ಭದಲ್ಲಿ ಬಿಎಂಟಿಸಿ ಬಸ್ಸು ಹರಿದಿತ್ತು. ಘಟನೆಯಲ್ಲಿ ವಿದ್ಯಾರ್ಥಿನಿ ಶಿಲ್ಪಶ್ರೀಗೆ ಸೊಂಟದ ಕೆಳ ಭಾಗಕ್ಕೆ ತೀವ್ರವಾಗಿ ಗಾಯವಾಗಿದ್ದು, ಅವರನ್ನು ಬನ್ನೇರುಘಟ್ಟದ ಫೋರ್ಟೀಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಕಳೆದ 13 ದಿನಗಳಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿನಿ ಇಂದು ಚಿಕಿತ್ಸೆ ಫಲಿಸದೆ ಕಣ್ಣು ಮುಚ್ಚಿದ್ದಾರೆ.
ವಿದ್ಯಾರ್ಥಿನಿಗೆ ಈವರೆಗೆ ಬರೋಬ್ಬರಿ 7 ಸರ್ಜರಿ ಮಾಡಲಾಗಿದೆ. ಆದರೂ ವಿದ್ಯಾರ್ಥಿನಿ ಶಿಲ್ಪ ಬದುಕುಳಿಯಲೇ ಇಲ್ಲ ಎಂದು ಟಿವಿ9ಗೆ ಬೆಂಗಳೂರು ವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಚಂದ್ರು ಮಾಹಿತಿ ನೀಡಿದರು. ಇದನ್ನೂ ಓದಿ: ದೇವರ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡುವ ವಿಚಿತ್ರ ಅರ್ಚಕ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್, ಜನರ ಆಕ್ರೋಶ
ಪ್ರಧಾನಿ ಮೋದಿ ಅವರ ಆಗಮನಕ್ಕಾಗಿ ತೆರವುಗೊಂಡಿದ್ದ ಹಂಪ್
ಪ್ರಧಾನಿ ಮೋದಿ ಅವರ ಆಗಮನಕ್ಕಾಗಿ ರಸ್ತೆ ಹಂಪ್‌ಗಳನ್ನು ತೆರವುಗೊಳಿಸಲಾಗಿತ್ತು. ನಂತರ ಅಪಘಾತಗಳು ಹೆಚ್ಚಾಗಿದ್ದವು. ಬಿಬಿಎಂಪಿ ಸಂಪೂರ್ಣವಾಗಿ ವಿವಿಯನ್ನು ಒತ್ತುವರಿ ಮಾಡಿಕೊಂಡಿದೆ. ಮುಖ್ಯವಾಗಿ ಇಲ್ಲಿ ವೈಜ್ಞಾನಿಕವಾಗಿ ನಿರ್ಮಿಸಿದ ರಸ್ತೆಗಳೇ ಇಲ್ಲ. ಬಿಎಂಟಿಸಿ ಬಸ್ಸು ನಮಗೆ ಅಗತ್ಯವಿದೆ. ಆದರೆ, ಸುಮಾರು 70ಕ್ಕೂ ಹೆಚ್ಚು ಖಾಸಗಿ ಬಸ್ಸುಗಳು ಜ್ಞಾನಭಾರತಿಯಲ್ಲಿ ದಿನನಿತ್ಯ ಓಡಾಡುತ್ತವೆ. ಬೈಪಾಸ್ ರಸ್ತೆಗಳಿಗಿಂತ ವಿವಿಯ ರಸ್ತೆಗಳನ್ನು ಮುಖ್ಯದಾರಿಯಾಗಿಸಿವೆ. ನಾನು ಈ ಕ್ಯಾಂಪಸ್‌ಗೆ ಬಂದಾಗಿನಿಂದ ಈ ವರ್ಷ ಸುಮಾರು 30ಕ್ಕೂ ಹೆಚ್ಚು ಅಪಘಾತಗಳಾಗಿವೆ ಎಂದು ಕ್ಯಾಂಪಸ್‌ನ ಅವ್ಯವಸ್ಥೆಗಳ ಬಗ್ಗೆ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು.
ಏನಾದ್ರೂ ಪರಿಹಾರ ಕೊಡಿಸಿ -ಸರ್ಕಾರಕ್ಕೆ ಶಿಲ್ಪಾ ಸಹೋದರಿ ಮನವಿ
ಮೃತ ವಿದ್ಯಾರ್ಥಿನಿ ಶಿಲ್ಪ ಸಹೋದರಿ ನಂದಿತಾ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ನಮ್ಮ ತಂದೆಗೆ ನಾವೇ ಆಸ್ತಿ, ನಮಗೆ ಶಿಕ್ಷಣವನ್ನೇ ಆಸ್ತಿಯಾಗಿ ನೀಡಿದ್ದಾರೆ. ನಮ್ಮ ತಂಗಿ ಮನೆಗೆ ಒಂದು ಕಳೆ ರೀತಿ ಇದ್ಳು. ಅವಳು ಇಲ್ಲ ಅನ್ನೊ ನೋವು ಸಹಿಸಿಕೊಳ್ಲೋಕೆ ಆಗೊಲ್ಲ. ಅವಳು ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಆಸೆ ಹೊಂದಿದ್ದಳು. ನಮ್ಮ ತಂದೆಗೆ ನಾವು ಮೂರು ಜನರು ಹೆಣ್ಣು ಮಕ್ಕಳು. ಕೂಲಿ ಮಾಡಿ ನಮ್ಮನ್ನ ಸಾಕಿ ವಿಧ್ಯಾಭ್ಯಾಸ ಕೊಡಿಸಿದ್ದಾರೆ. ನಮ್ಮ ಕುಟುಂಬದ ಯಾರಿಗಾದ್ರೂ ಒಬ್ಬರಿಗೆ ಸರ್ಕಾರಿ ಕೆಲಸ ಕೊಡಲಿ. ಏನಾದ್ರೂ ಪರಿಹಾರ ಕೊಡಿಸಿ ಅಂತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Published On - 8:32 am, Sun, 23 October 22




