ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (Bengaluru Metropolitan Transport Corporation – BMTC) ಬಿಎಂಟಿಸಿ ಬಹು ನಿರೀಕ್ಷಿತ ನಿಮ್ಮ ಬಸ್ ಆ್ಯಪ್ (NIMBUS App) ಇದೇ ಮಾಸಾಂತ್ಯಕ್ಕೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಐಒಸ್ ಮತ್ತು ಆಂಡ್ರಾಯ್ಡ್ ಪ್ಲಾಟ್ಫಾರ್ಮ್ಗಳಲ್ಲಿ ಶೀಘ್ರವೇ ಆ್ಯಪ್ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಹಿಂದೆ ಆ್ಯಪ್ ಬಿಡುಗಡೆಗೆಂದು ನಿಗದಿಯಾಗಿದ್ದ ಹಲವು ಗಡುವುಗಳನ್ನು ಬಿಎಂಟಿಸಿ ಮೀರಿತ್ತು. ಪ್ರಯಾಣಿಕರ ಸುಗಮ ಸಂಚಾರಕ್ಕೆ ಈ ಆ್ಯಪ್ ನೆರವಾಗುವ ನಿರೀಕ್ಷೆಯಿದೆ.
ನಿಮ್ಮಬಸ್ ಆ್ಯಪ್ನಲ್ಲಿ ಬಿಎಂಟಿಸಿ ಬಸ್ಗಳ ಕ್ಷಣಕ್ಷಣದ ಸಂಚಾರ ವಿವರ (Real-time tracking) ಲಭ್ಯವಾಗಲಿದೆ. ಅದರ ಜೊತೆಗೆ ತುರ್ತು ಪರಿಸ್ಥಿತಿಯ ವೇಳೆ ಗಮನ ಸೆಳೆಯಲು ಎಸ್ಒಎಸ್ (SOS) ಎಚ್ಚರಿಕೆಯ ಸೌಲಭ್ಯವೂ ಲಭ್ಯವಿದೆ. ಈ ಮೊದಲು ಡಿಸೆಂಬರ್ 13ಕ್ಕೆ ಆ್ಯಪ್ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಕೊನೆಯ ಕ್ಷಣದಲ್ಲಿ ಒಂದಿಷ್ಟು ಸಮಸ್ಯೆಗಳು (ಬಗ್) ಕಾಣಿಸಿಕೊಂಡಿದ್ದರಿಂದ ನಂತರ ಡಿಸೆಂಬರ್ 23ಕ್ಕೆ ಮುಂದೂಡಲಾಯಿತು. ಆದರೆ ಅಂದೂ ಸಹ ಲಾಂಚ್ ಮಾಡಲು ಸಾಧ್ಯವಾಗಲಿಲ್ಲ.
ಇದು ಅತ್ಯಂತ ಸಂಕೀರ್ಣ ಆ್ಯಪ್. ಇದರಲ್ಲಿ ಪ್ಲಾನಿಂಗ್, ಶೆಡ್ಯೂಲಿಂಗ್, ಡಿಪೊ ಮ್ಯಾನೇಜ್ಮೆಂಟ್ ಮತ್ತಿತರ ಫೀಚರ್ಗಳನ್ನು ಕೊಡಬೇಕಿದೆ. ಸಾರ್ವಜನಿಕವಾಗಿ ಬಿಡುಗಡೆ ಮಾಡುವ ಮೊದಲು ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಿದ್ದೇವೆ. ಆ್ಯಪ್ನ ಪ್ಲಾನಿಂಗ್ ಮತ್ತು ಶೆಡ್ಯೂಲಿಂಗ್ ವಿಭಾಗದಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಬಸ್ ಸೇವೆಗಳು ಪ್ರಯಾಣಿಕರ ಅಗತ್ಯಗಳ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲು ಆ್ಯಪ್ ಪ್ರಯತ್ನಿಸುತ್ತಿದೆ. ಈ ಮೂಲಕ ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.
ಈ ಆ್ಯಪ್ ಅನ್ನು ಪ್ರಸ್ತುತ 30-40 ಬಳಕೆದಾರರು ಪ್ರಾಯೋಗಿಕವಾಗಿ ಪರಿಶೀಲಿಸುತ್ತಿದ್ದಾರೆ. ಬಸ್ ನಂಬರ್ ಮತ್ತು ಬಸ್ಸ್ಟಾಪ್ಗಳ ವಿಚಾರದಲ್ಲಿ ಹಲವು ಲೋಪಗಳು ಇರುವುದನ್ನು ಅವರು ಪತ್ತೆ ಮಾಡಿದ್ದಾರೆ. ಈ ಆ್ಯಪ್ ಪ್ರಸ್ತುತ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯವಿದೆ. ತಮ್ಮ ಫೋನ್ ನಂಬರ್ ನಮೂದಿಸಿ, ಒಟಿಪಿ ಪಡೆದುಕೊಳ್ಳುವ ಮೂಲಕ ಈ ಆ್ಯಪ್ ಅನ್ನು ಬಳಕೆದಾರರು ಬಳಸಲು ಸಾಧ್ಯವಿದೆ.
ಬಿಎಂಟಿಸಿಯ 6,802 ಬಸ್ಗಳ ಪೈಕಿ 5,000 ಬಸ್ಗಳ ಕ್ಷಣಕ್ಷಣದ ವಿವರ ಮಾತ್ರ ಈ ಆ್ಯಪ್ ಮೂಲಕ ಲಭ್ಯವಾಗಲಿದೆ. ಎಲೆಕ್ಟ್ರಿಕ್ ಬಸ್ಗಳೂ ಸೇರಿ ಯಾವುದೇ ಹೊಸ ಬಸ್ಗಳು ನಿಗಮಕ್ಕೆ ಸೇರ್ಪಡೆಯಾದಾಗ ಈ ಆ್ಯಪ್ನ ಮಾಹಿತಿಯೂ ಅಪ್ಡೇಟ್ ಆಗಲಿದೆ ಎಂದು ಬಿಎಂಟಿಸಿ ತಾಂತ್ರಿಕ ವಿಭಾಗದ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ‘ಇಂಡಿಯನ್ ಎಕ್ಸ್ಪ್ರೆಸ್’ ಜಾಲತಾಣವು ವರದಿ ಮಾಡಿದೆ.
ಇದನ್ನೂ ಓದಿ: Suburban Railway: ಬೆಂಗಳೂರು ಉಪನಗರ ರೈಲು ಯೋಜನೆಗೆ ಕೊನೆಗೂ ಸಿಕ್ಕಿತು ವೇಗ; 4ನೇ ಕಾರಿಡಾರ್ ಕಾಮಗಾರಿಗೆ ಟೆಂಡರ್
ಬೆಂಗಳೂರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:11 pm, Fri, 27 January 23