
ಬೆಂಗಳೂರು, (ಜನವರಿ 22): ಸಾಲು ಸಾಲು ರಜೆ (Long Holiday) ಇದ್ರೆ ಸಾಕು ಬೆಂಗಳೂರಿನ (Bengaluru) ಜನ ತಮ್ಮ ತಮ್ಮ ಊರುಗಳತ್ತ ಮುಖ ಮಾಡುತ್ತಾರೆ. ಇನ್ನು ಕೆಲವರು ಟ್ರಿಪ್ಗೆ ತೆರಳುತ್ತಾರೆ. ಈಗ ಜನವರಿ ಅಂತ್ಯದಲ್ಲಿ ಸತತ ಮೂರು ದಿನ ರಜೆ ಬಂದಿರುವ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಜನ ಊರುಗಳತ್ತ ತೆರಳುವ ಸಾಧ್ಯತೆಗಳಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ಬಸ್ ಜೊತೆಗೆ ಹೆಚ್ಚುವರಿಯಾಗಿ ಬಿಎಂಟಿಸಿ ಬಸ್ಗಳ (KSRTC And BMTC Buses) ವ್ಯವಸ್ಥೆ ಮಾಡಲಾಗಿದೆ.
ಜನವರಿ 24 ನಾಲ್ಕನೇ ಶನಿವಾರ, ಜನವರಿ 25 ಭಾನುವಾರ, ಇನ್ನು ಜನವರಿ 26 ಸೋಮವಾರ ಗಣರಾಜ್ಯೋತ್ಸವ ಸಾರ್ವತ್ರಿಕ ರಜೆ. ಹೀಗೆ ಈ ತಿಂಗಳಾಂತ್ಯದಲ್ಲಿ ಸತತ ಮೂರು ದಿನ ರಜೆ ಬಂದಿದೆ. ಹೀಗಾಗಿ ಜನರು ಬೇರೆ ಬೇರೆ ಊರುಗಳತ್ತ ತೆರಳುವ ಸಾಧ್ಯತೆಗಳಿದ್ದು, ಈ ವೇಳೆ ಜನ ದಟ್ಟಣೆಯಾಗುವ ಸಾಧ್ಯತೆಗಳಿವೆ.ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗದಂತೆ ಹೆಚ್ಚುವರಿ ಬಸ್ ನಿಯೋಜನೆ ಮಾಡಲಾಗಿದ್ದು, ಈ ಬಸ್ಗಳು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚರಿಸಲಿವೆ.
ನಾಳೆ (ಜನವರಿ 23) ಶುಕ್ರವಾರ ಕೆಲಸ ಮುಗಿಸಿಕೊಂಡು ಸಂಜೆಯಿಂದಲೇ ಹಲವರು ಊರಿಗೆ ತೆರಳುವವರಿದ್ದಾರೆ. ಆದ್ದರಿಂದ ನಾಳೆಯಿಂದಲೇ (ಜನವರಿ 23) KSRTC ಬಸ್ ಜೊತೆಗೆ ಬಿಎಂಟಿಸಿ ಬಸ್ಗಳು ಸಹ ಸಂಚರಿಸಲಿವೆ. ನಾಳೆ 265 BMTC ಬಸ್ ಹಾಗೂ ಜನವರಿ 24ರಂದು 500ಕ್ಕೂ BMTC ಹೆಚ್ಚು ಬಸ್ಗಳು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚರಿಸಲಿವೆ.
2026ರ ವರ್ಷದಲ್ಲಿ ಹೆಚ್ಚಿನ ರಜೆಗಳು ವಾರಾಂತ್ಯಕ್ಕೆ ಹೊಂದಿಕೊಂಡು ಬಂದಿದೆ. ಅಂದರೆ, ಒಂದು ದಿನ ರಜೆ ಹಾಕಿದರೆ, ಮೂರು ಅಥವಾ ನಾಲ್ಕು ದಿನಗಳ ಸರಣಿ ರಜೆಯ ಮಜಾವನ್ನು ಜನರು ಸವಿಯಬಹುದಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.