ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್: ತನಿಖೆಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ
ಶುಕ್ರವಾರ ಬೆಳ್ಳಂ ಬೆಳಗ್ಗೆ ಬೆಂಗಳೂರಿನ ಹಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ. ಇದು ಸಿಲಿಕಾನ್ ಸಿಟಿ ಜನರನ್ನು ಬೆಚ್ಚಿ ಬೀಳಿಸಿದೆ. ಬಾಂಬ್ ಬೆದರಿಕೆ ಸಂದೇಶ ಬರುತ್ತಿದ್ದಂತೆ ಪೋಷಕರು ಶಾಲೆಗಳಿಗೆ ದೌಡಾಯಿಸಿದ್ದು, ಮಕ್ಕಳನ್ನು ಕರೆದುಕೊಂಡು ಮನೆಗಳಿಗೆ ತೆರಳುತ್ತಿದ್ದಾರೆ. ಈ ಬಾಂಬ್ ಬೆದರಿಕೆ ಸಂದೇಶದಲ್ಲಿ ಉಗ್ರವಾದ ಪದ ಬಳಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಈ ಬಾಂಬ್ ಬೆದರಿಕೆ ಸಂದೇಶದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಸರ್ಕಾರದ ಯಾವೆಲ್ಲ ಸಚಿವರು ಏನಂದ್ರು ಇಲ್ಲಿದೆ ಓದಿ..
ಬೆಂಗಳೂರು ಡಿ.01: ನಗರದ ಶಾಲೆಗಳಿಗೆ (School) ಇ-ಮೇಲ್ (E-Mail) ಮುಖಾಂತರ ಬಾಂಬ್ ಬೆದರಿಕೆ ಸಂದೇಶ (Bomb Threat Message) ಬಂದಿದೆ. ಈ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಎಲ್ಲಿಂದ ಸಂದೇಶ ಬಂದಿದೆ ಎಂಬುದರ ಕುರಿತು ತನಿಖೆ ನಡೆಸುವಂತೆ ಸೂಚಿಸಿದ್ದೇನೆ. ಎಲ್ಲಾ ಶಾಲೆಗಳಿಗೂ ಭದ್ರತೆ ಕೊಡಲು ಸೂಚನೆ ನೀಡಿದ್ದೇನೆ ಎಂದರು.
ನಿಮ್ಮ ಜೊತೆಗೆ ಸರ್ಕಾರ ಇದೆ: ಡಿಸಿಎಂ ಡಿ.ಕೆ.ಶಿವಕುಮಾರ್
ಪೋಷಕರು ಅತಂಕಪಡುವ ಅಗತ್ಯವಿಲ್ಲ, ರಕ್ಷಣೆ ನಮ್ಮ ಕರ್ತವ್ಯ. ನಿಮ್ಮ ಜೊತೆಗೆ ಸರ್ಕಾರ ಇದೆ. ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆದರಿಕೆ ಸಂದೇಶ ಬಂದಿರುವ ಶಾಲೆಗಳಿಗೆ ರಕ್ಷಣೆ ಕೊಡುತ್ತೇವೆ: ಮಧು ಬಂಗಾರಪ್ಪ
ಯಾವುದನ್ನು ಹಗುರವಾಗಿ ತೆಗೆದುಕೊಳ್ಳುವ ಹಾಗೆ ಇಲ್ಲ. ಬೆದರಿಕೆ ಸಂದೇಶ ಬಂದಿರುವ ಎಲ್ಲಾ ಶಾಲೆಗಳಿಗೆ ರಕ್ಷಣೆ ಕೊಡುತ್ತೇವೆ. ಶಾಂತಿಯನ್ನು ಕದಡುವ ಕೆಲಸ ಮಾಡಿದ್ದಾರೆ. ಗೃಹ ಸಚಿವರು, ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಯಾರೂ ಆತಂಕಗೊಳ್ಳುವುದು ಬೇಡ ಧೈರ್ಯವಾಗಿರಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಇದನ್ನೂ ಓದಿ: ಬೆಂಗಳೂರಿನ 60ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ: ಯಾವೆಲ್ಲಾ ಸ್ಕೂಲ್? ಇಲ್ಲಿದೆ ಪಟ್ಟಿ
ಯಾವ ಶಾಲೆಗಳಲ್ಲೂ ಬಾಂಬ್ ಇರಲು ಸಾಧ್ಯವಿಲ್ಲ ನನ್ನ ನಂಬಿಕೆ: ಪರಮೇಶ್ವರ್
ಕೈಜೈಟ್ಸ್ @ ಬೀಬಲ್ ಡಾಟ್ ಕಾಂ ಅನ್ನೋ ಮೇಲ್ ಐಡಿಯಿಂದ ಮೆಸೇಜ್ ಬಂದಿದೆ. ಬೆಂಗಳೂರಿನ ಸುಮಾರು 15 ಶಾಲೆಗಳಿಗೆ ಬಾಂಬ್ ಇಟ್ಟಿದ್ದೀವಿ, ನಿಮ್ಮ ಮಕ್ಕಳನ್ನು ಕೊಲ್ಲುತ್ತೇವೆ ಎಂದು ಮೆಸೇಜ್ ಬಂದಿದೆ. ಇದನ್ನ ನಾವು ಬಹಳ ಗಂಭೀರವಾಗಿ ಪರಿಶೀಲಿಸುತ್ತಿದ್ದೇವೆ. ಮೇಲ್ನ ಮೂಲದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಕಮಿಷನರ್ಗೆ ಹಾಗೂ ಎಲ್ಲಾ ಅಧಿಕಾರಿಗಳಿಗೆ ಎಲ್ಲಾ ಶಾಲೆಗಳನ್ನ ಪರಿಶೀಲನೆ ಮಾಡುವಂತೆ ತಾಕೀತು ಮಾಡಿದ್ದೇನೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಯಾವ ಶಾಲೆಗಳಲ್ಲೂ ಬಾಂಬ್ ಇರಲು ಸಾಧ್ಯವಿಲ್ಲವೆಂಬುವುದ ನನ್ನ ನಂಬಿಕೆ. ಯಾವ ಉಗ್ರ ಸಂಘಟನೆ ಮಾಡಿದೆ, ಯಾರು ಇದನ್ನೆಲ್ಲಾ ಮಾಡಿದ್ದಾರೆ ಅನ್ನೋ ಪರಿಶೀಲಿಸುತ್ತಿದ್ದೇವೆ. ಅವರು ಭಾರತದವರೇ ಆಗಿದ್ದರೇ ಅಂತವರಿಗೆ ಏನು ಮಾಡಬೇಕು ಅಂತ ಭಾರತ ಸರ್ಕಾರದ ಜೊತೆ ಮಾತನಾಡುತ್ತೇವೆ. ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯೇ ಕಳುಹಿಸಿದೆ ಅನ್ನೋದನ್ನ ಇನ್ನೂ ಹೇಳಲು ಆಗಲ್ಲ ಎಂದರು.
ಮತಾಂತರ ಆಗಬೇಕು, ಇಲ್ಲವಾದರೇ ನಿಮ್ಮನ್ನು ನಾವು ಬಿಡಲ್ಲ ಅನ್ನೋ ಸಂದೇಶ ಕಳುಹಿಸಿದ್ದಾರೆ. ಮತಾಂತರದ ವಿಚಾರದಲ್ಲೇ ಕೆಲವೆಲ್ಲ ಮಾತನಾಡಿದ್ದಾರೆ. ಕಳೆದ ವರ್ಷವೂ ಇದೇ ರೀತಿ ಮೆಸೇಜ್ ಬಂದಿತ್ತು ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಅದು ಸುಳ್ಳು ಮೇಲ್ ಆಗಿತ್ತಂತೆ, ಇದು ಕೂಡ ಸುಳ್ಳು ಆಗಿರಲಿ ಅಂತಾ ನಾವು ಬಯಸುತ್ತೇವೆ. ಆದರೆ ಯಾವುದನ್ನೂ ಅಷ್ಟು ಸುಲಭವಾಗಿ ಪರಿಗಣಿಸಲು ಆಗಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:37 pm, Fri, 1 December 23