ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಸವರಾಜ ಬೊಮ್ಮಾಯಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ತೆಗೆದುಕೊಂಡ ಬಳಿಕ ಬಿ.ಎಸ್. ಯಡಿಯೂರಪ್ಪ ನಿರಾಳರಾಗಿದ್ದರು. ಕುಟುಂಬದೊಂದಿಗೆ ಸಮಯ ಕಳೆಯುವ ಯೋಚನೆಯಲ್ಲಿದ್ದರು. ಐದಾರು ದಿನಗಳ ಹಿಂದೆ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದರು. ಇದೀಗ, ಮಾಲ್ಡೀವ್ಸ್ ಪ್ರವಾಸದಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯಕ್ಕೆ ಹಿಂತಿರುಗಿದ್ದಾರೆ. ಮಾಧ್ಯಮದ ಜೊತೆಗೆ ಮಾತನಾಡಿದ್ದಾರೆ.
20 ದಿನಗಳ ನಂತರ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಪ್ರತಿ ಜಿಲ್ಲೆಗೂ ಒಂದೊಂದು ದಿನ ಭೇಟಿ ಕೊಡುತ್ತೇನೆ. ಜಿಲ್ಲಾವಾರು ಬಿಜೆಪಿ ಕಾರ್ಯಕರ್ತರ ಸಭೆ ನಡೆಸುತ್ತೇನೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಬಹಳ ವರ್ಷಗಳ ನಂತರ ವಿದೇಶ ಪ್ರವಾಸ ಮಾಡಿದ್ದೇನೆ. ಸ್ನೇಹಿತರು, ಕುಟುಂಬಸ್ಥರ ಒತ್ತಾಯದ ಮೇರೆಗೆ ಪ್ರವಾಸ ಕೈಗೊಂಡಿದ್ದೇನೆ. ಮಾಲ್ಡೀವ್ಸ್ ಒಳ್ಳೆಯ ಸ್ಥಳ, ನಾನು ಕೂಡ ಖುಷಿ ಪಟ್ಟಿದ್ದೇನೆ ಎಂದು ಮಾಲ್ಡೀವ್ಸ್ ಪ್ರವಾಸದ ನಂತರ ಯಡಿಯೂರಪ್ಪ ತಿಳಿಸಿದ್ದಾರೆ.
ಆಗಸ್ಟ್ 25 ರಂದು ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ
ಮಂಡ್ಯದಲ್ಲಿ ಆಗಸ್ಟ್ 25 ರಂದು ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಗೌತಮ್ ಸಭೆಯನ್ನು ಉದ್ಘಾಟನೆ ನಡೆಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳು, ಕೊವಿಡ್ 3ನೇ ಅಲೆಯ ಕುರಿತಾಗಿ ನಡೆದಿರುವ ತಯಾರಿ, ಪಕ್ಷದ ಸಂಘಟನೆ, ಬೆಳಗಾವಿ, ಕಲಬುರ್ಗಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳ ಚುನಾವಣೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳ ಬಗ್ಗೆ, ಮುಂದಿನ ಕಾರ್ಯಯೋಜನೆ, ವರದಿಗಳು ಹಾಗೂ ಮೋರ್ಚಾಗಳ ಚಟುವಟಿಕೆಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮಾಜಿ ಸಿಎಂ ಯಡಿಯೂರಪ್ಪ ಬೆಂಗಳೂರು ಅಭಿವೃದ್ಧಿಗಾಗಿ ಕೈಗೊಂಡ ಯೋಜನೆ ಮುಂದುವರಿಕೆ: ಸಿಎಂ ಬೊಮ್ಮಾಯಿ ಸೂಚನೆ
Published On - 10:30 pm, Mon, 23 August 21