ಬೆಂಗಳೂರು: ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿ ನಾನು ಪಕ್ಷ ಸಂಘಟನೆ ಮಾಡಬೇಕು. ಇಡೀ ರಾಜ್ಯ ಸುತ್ತಬೇಕಿದೆ. ವಿಶೇಷವಾಗಿ ಹಳೇ ಮೈಸೂರು ಭಾಗದಲ್ಲಿ ಸುತ್ತಬೇಕು. ಅದನ್ನು ರಾಷ್ಟ್ರೀಯ ಅಧ್ಯಕ್ಷರೇ ಹೇಳಿದ್ದಾರೆ ಎಂದು ಬೆಂಗಳೂರಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ನನ್ನನ್ನು ಗುರುತಿಸಿರುವುದು ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರ. ನನಗೆ ಟಿಕೆಟ್ ಕೊಡುವುದು ಬಿಡುವುದು ವರಿಷ್ಠರಿಗೆ ಬಿಟ್ಟಿದ್ದು. ನಾನು ಅಲ್ಲಿಗೆ ಹೆಚ್ಚು ಒತ್ತು ಕೊಡುತ್ತೇನೆ ಎಂದರು. ಇನ್ನು ಹಾನಗಲ್ನಲ್ಲಿ ಸ್ಪರ್ಧೆ ಮಾಡುವ ವಿಚಾರದ ಬಗ್ಗೆ ಪ್ರಶ್ನಿಸಿದಕ್ಕೆ ಉತ್ತರಿಸಿದ ಅವರು ಹಾನಗಲ್‌ನಲ್ಲಿ ಸ್ಪರ್ಧೆ ಪಕ್ಷಕ್ಕೆ ಬಿಟ್ಟಿದ್ದು ಎಂದರು.
ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಯಾವುದೇ ನೋವಿಲ್ಲ. ನನಗೆ ಸಚಿವ ಸ್ಥಾನ ಕೊಡಬೇಕೆಂದು ಬಿ.ಎಸ್. ಯಡಿಯೂರಪ್ಪ ಒತ್ತಡ ಹೇರಿಲ್ಲ. ಯಡಿಯೂರಪ್ಪ ಕಂಡೀಷನ್ ಇಟ್ಟಿದ್ರು ಅನ್ನೋದು ಸುಳ್ಳು. ನನಗೆ ಡಿಸಿಎಂ ಕೊಡಬೇಕೆಂದು ಅಂತ ಅವರು ಕಂಡಿಷನ್ ಇಟ್ಟಿಲ್ಲ. ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲವೆಂದು ಅಸಮಾಧಾನವಿಲ್ಲ. ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ಅವಕಾಶ ಕೊಟ್ಟಿದೆ. ವರುಣಾ ಕ್ಷೇತ್ರದ ಮೇಲೆ ಹೆಚ್ಚು ಪ್ರೀತಿ ಇದೆ ಎಂದರು.
ನಮ್ಮದು ರಾಷ್ಟ್ರೀಯ ಪಕ್ಷ. ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಯಡಿಯೂರಪ್ಪ ಪಕ್ಷವನ್ನು ಈ ಹಂತಕ್ಕೆ ತಂದಿದ್ದಾರೆ. ವರುಣಾ ಕ್ಷೇತ್ರದ ಜನರೇ ನನ್ನನ್ನು ಗುರುತಿಸಿದ್ದು. ಅದಕ್ಕೆ ವರುಣಾ ಮೇಲೆ ಹೆಚ್ಚು ಪ್ರೀತಿಯಿದೆ. ಟಿಕೆಟ್ ಕೊಡುವುದು ಬಿಡುವುದು ವರಿಷ್ಠರಿಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.
ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕು
ಬಿಜೆಪಿ ಹೈಕಮಾಂಡ್ ಲಿಂಗಾಯತರನ್ನ ಒಡೆದಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕು. ಅದನ್ನೇ ಯಡಿಯೂರಪ್ಪನವರು ಮಾಡಿದ್ದು. ಇಷ್ಟು ದೊಡ್ಡಮಟ್ಟದಲ್ಲಿ ಪಕ್ಷ ಬೆಳೆದಿದೆ. ಇವತ್ತು ಮಹೇಶ್ ಕೂಡ ಪಕ್ಷಕ್ಕೆ ಬರ್ತಿದ್ದಾರೆ. ಎಲ್ಲ ಜಾತಿ, ವರ್ಗಗಳನ್ನು ಕಟ್ಟಿಕೊಂಡು ಹೋಗಬೇಕು. ಅನಂತ್ ಕುಮಾರ್ ಆಚಾರ್ಯ ಎಲ್ಲರೂ ಪಕ್ಷ ಕಟ್ಟಿದ್ದರು. ಪಕ್ಷದ ಆದೇಶವನ್ನು ಯಡಿಯೂರಪ್ಪ ಪಾಲಿಸಿದ್ದಾರೆ. ಅವರನ್ನ ಕೆಳಗಿಳಿಸಿದ್ದಾರೆ ಅನ್ನೋದು ಸರಿಯಲ್ಲ ಎಂದರು.
ಲಿಂಗಾಯತ ಸಮುದಾಯವನ್ನು ಒಟ್ಟು ಮಾಡುವ ವಿಚಾರಕ್ಕೆ ಸಂಬಂಧಿಸಿ ಯಾಕೆ ಮಾಡಬಾರದು? ಮಾಡುತ್ತೇನೆ. ಆದರೆ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗಬೇಕು. ಮೇಕೆದಾಟು ಯೋಜನೆ ವಿರೋಧಿಸಿ ಇಂದಿನಿಂದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಪ್ರತಿಭಟನೆ ವಿಚಾರಕ್ಕೆ ಇದು ರಾಜ್ಯದ ಜನರ ಹಕ್ಕು ಎಂದು ಬಿ.ಎಸ್. ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದರು. ಯಾರೇ ಉಪವಾಸ ಸತ್ಯಾಗ್ರಹ ಮಾಡಲಿ. ನಾವು ಮಾಡ್ತೇವೆ ಅಂತ ಬೊಮ್ಮಾಯಿ ಹೇಳಿದ್ದಾರೆ. ಅಣ್ಣಾ ಮಲೈ ಯಾಕೆ ಪ್ರತಿಭಟನೆ ಮಾಡ್ತಾರೆ ಗೊತ್ತಿಲ್ಲ. ಇದಕ್ಕೆ ಅಡೆ ತಡೆ ಯಾವುದೂ ಇಲ್ಲ. ಈ ಯೋಜನೆಯನ್ನು ಮಾಡಿಯೇ ತೀರುತ್ತಾರೆ ಎಂದು ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಮಂಗಗಳ ಮಾರಣಹೋಮ ಪ್ರಕರಣ; ಹೈಕೋರ್ಟ್‌ಗೆ ವರದಿ ಸಲ್ಲಿಸಿದ ಹಾಸನ ಜಿಲ್ಲಾಧಿಕಾರಿ
Published On - 11:58 am, Thu, 5 August 21