ಬೆಂಗಳೂರು: ಭಾರಿ ಮಳೆಯಿಂದ ಮೂರು ಅಂತಸ್ತಿನ ಮನೆ ಪಾಯ ಕುಸಿದ ಹಿನ್ನೆಲೆ ಎನ್‌ಡಿಆರ್‌ಎಫ್ ಸಿಬ್ಬಂದಿಗಳು ಕಮಲಾನಗರದಲ್ಲಿ ಮನೆ ತೆರವು ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಕಾಗದ ಪತ್ರಗಳನ್ನು ತೆಗೆದುಕೊಂಡು ಮನೆಯವರು ಹೊರ ಬಂದಿದ್ದಾರೆ. ಅಲ್ಲದೇ ತಮ್ಮ ಕಣ್ಣ ಎದುರೇ ಮನೆ ತೆರವು ಕಾರ್ಯಾಚರಣೆ ಆರಂಭವಾದ ಹಿನ್ನೆಲೆ ಮನೆಯವರು ಕಣ್ಣೀರಿಟ್ಟು ಬೇಸರ ವ್ಯಕ್ತಪಡಿಸಿದ್ದಾರೆ.
ಮನೆಯಲ್ಲಿ ದುಡ್ಡು ಒಡವೆ ಎಲ್ಲಾ ಇತ್ತು. ಮಗಳ ಮದುವೆಗೆ ಅಂತ ಒಡವೆ ಮಾಡಿಸಿದ್ದೀವಿ. ಈಗ ಏಕಾ ಏಕ ಏಕಿ ಮನೆ ಒಡೆದಿದ್ದಾರೆ. 12 ಲಕ್ಷ ರೂ. ಒಡವೆ, ದುಡ್ಡು, ವಾಷಿಂಗ್ ಮಿಷನ್, ಪ್ರಿಡ್ಜ್ ಎಲ್ಲ ಇತ್ತು. ನಮ್ಮನ್ನು ಮನೆ ಹತ್ತಿರಕ್ಕೂ ಬಿಟ್ಟಿಲ್ಲ. 30 ಸಾವಿರ ದುಡ್ಡು, ಊರಿಂದ ತಂದಿದ್ದ ರಾಗಿ ಎಲ್ಲ ಹೋಯ್ತು. ಹೊಸ ಟಿವಿ ಮೊನ್ನೆನೇ ತಂದಿದ್ದು ಅದೂ ಕೂಡ ಹೋಯ್ತು. 10 ಲಕ್ಷ ರೂ. ನಮ್ಮ ಮನೆ ಮಾಲೀಕರಿಗೆ ಕೊಟ್ಟಿದ್ದೀವಿ. ಬೇರೆ ಮನೆ ನೋಡ್ಕೊಂಡು ಬಂದಿದ್ದೇವೆ. ಇವತ್ತು ಹಾಲು ಉಕ್ಕಿಸಬೇಕಿತ್ತು ಅಷ್ಟರಲ್ಲಿ ಹೀಗಾಗಿದೆ. ಒಟ್ಟು 5 ಜನ ನಾವು ವಾಸವಿದ್ದೇವು ಈ ಮನೆಯಲ್ಲಿ ಎಂದು ಮನೆ ಕಳೆದುಕೊಂಡ ಮಹಿಳೆ ಕಣ್ಣೀರಿಟ್ಟಿದ್ದಾರೆ.
ಕಮಲಾನಗರದಲ್ಲಿ ಕಟ್ಟಡ ಕುಸಿತದ ಹಂತ ತಲುಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇನ್ನೂ ಸಹ ಮೂರು ಅಂತಸ್ತಿನ ಕಟ್ಟಡ ಕುಸಿಯುವ ಹಂತದಲ್ಲಿ. ಹೀಗಾಗಿ ಸ್ಥಳದಲ್ಲೇ ಎನ್‌ಡಿಆರ್‌ಎಫ್ ತಂಡ, ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ರಾತ್ರಿಯೇ ಡೆಮಾಲಿಷನ್ ಕಂಟ್ರ್ಯಾಕ್ಟರ್ಗಳ ಸಲಹೆ ಪಡೆದಿದ್ದು, ಇಂದು (ಅಕ್ಟೋಬರ್ 13) ಬೆಳಿಗ್ಗೆ ಅಪಾಯದ ಅಂಚಿನಲ್ಲಿದ್ದ ಮೂರು ಅಂತಸ್ತಿನ ಕಟ್ಟಡವನ್ನು ತೆರವು ಮಾಡಿದ್ದಾರೆ.
ಮನೆಯಲ್ಲಿದ್ದ ವಸ್ತುಗಳನ್ನು ಹೊರಗೆ ತರಲಾಗದೆ ನಿವಾಸಿಗಳ ಪರದಾಟ
ಮನೆಯ ದಾಖಲೆ ಪತ್ರಗಳು, ವ್ಯವಹಾರ ಪತ್ರಗಳು, ಬಟ್ಟೆ, ಪಾತ್ರೆಗಳನ್ನು ತರಲಾಗದೆ ಮನೆಯವರು ಕಟ್ಟಡ ತೆರವು ವೇಳೆ ಕಂಗಾಲಾಗಿದ್ದಾರೆ. ತೆರವು ಕಾರ್ಯ ಆರಂಭ ಹಿನ್ನೆಲೆ ರಸ್ತೆಯಲ್ಲಿ ಕುಳಿತು ಮನೆಯವರು ಕಣ್ಣೀರಿಟ್ಟಿದ್ದಾರೆ.
ಇನ್ನೂ ತೆರವು ಕಾರ್ಯ ಒಂದೂವರೆ ದಿನ ಆಗುತ್ತದೆ: ಸಚಿವ ಗೋಪಾಲಯ್ಯ
ಇನ್ನೂ ತೆರವು ಕಾರ್ಯ ಒಂದೂವರೆ ದಿನ ಆಗುತ್ತದೆ. ಮನೆ ತೆರವಿನಿಂದ ಪಕ್ಕದಲ್ಲಿರುವ ಸೀಟಿನ ಮನೆಗಳಿಗೆ ಹಾನಿಯಾಗುತ್ತದೆ. ಮನೆಯಲ್ಲಿದ್ದ ಎಲ್ಲರಿಗೂ ಈಗಾಗಲೇ ಊಟದ ವ್ಯವಸ್ಥೆ, ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ತೆರವು ಕಾರ್ಯ ಮುಗಿದ ಮೇಲೆ ಪರಿಹಾರದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ ಎಂದು ಸಚಿವ ಗೋಪಾಲಯ್ಯ ತಿಳಿಸಿದ್ದಾರೆ.
ಕಣ್ಣೀರು ಹಾಕುತ್ತಿರುವವರನ್ನು ಸಮಾಧಾನ ಪಡಿಸಲು ಮುಂದಾದ ಪೊಲೀಸರು
ಮನೆಯಲ್ಲಿದ್ದ ವಸ್ತುಗಳನ್ನು ಕಳೆದುಕೊಂಡ ಜನರು ಕಣ್ಣೀರು ಹಾಕಿದ್ದಾರೆ. ಕಷ್ಟಪಟ್ಟು ಸಂಪಾದಿಸಿದ ಸಾಮಾಗ್ರಿಗಳು ಕಣ್ಮುಂದೆಯೇ ಹಾಳಾಯ್ತು ಎಂದು ಗೋಳಾಡಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಕಣ್ಣೀರು ಹಾಕುತ್ತಿರುವವರನ್ನು ಸಮಾಧಾನ ಪಡಿಸಲು ಮುಂದಾಗಿದ್ದಾರೆ. ಅಲ್ಲದೆ ಮನೆಗೊಬ್ಬರಂತೆ ಬನ್ನಿ ನಿಮ್ಮ ಜೊತೆಗೆ ಇರುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ:
Bengaluru: ಬೆಂಗಳೂರಿನಲ್ಲಿ ವಾಲಿದ 3 ಅಂತಸ್ತಿನ ಕಟ್ಟಡ; ಹಲವು ಕುಟುಂಬಗಳ ಸ್ಥಳಾಂತರ
ಅಪಾಯದಂಚಿನಲ್ಲಿರುವ ಮನೆ ಮಾಲೀಕರಿಗೆ ನೋಟಿಸ್ ನೀಡಿ: ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಗೋಪಾಲಯ್ಯ ಸೂಚನೆ
Published On - 4:12 pm, Wed, 13 October 21